×
Ad

ಪುತ್ತೂರು: ಬಿಜೆಪಿ ಸರ್ಕಾರದ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ

Update: 2022-04-01 23:16 IST

ಪುತ್ತೂರು: ಕೇಸರಿ, ಹಿಜಾಬ್, ಭಗವದ್ದೀತೆ, ಕಾಶ್ಮೀರ್ ಫೈಲ್ಸ್ ಬಗ್ಗೆ ನಿರಂತರ ಚರ್ಚೆ  ನಡೆಸುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಜ್ವಲಂತ ಸಮಸ್ಯೆಯಾಗಿರುವ ಹಸಿವು, ಬಡತನ, ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸದೆ ರಾಜ್ಯದಲ್ಲಿ ಅರಾಜಕತೆ ಸೃಷ್ಠಿಸುತ್ತಿದೆ ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಆರೋಪಿಸಿದರು.

ಅವರು ಶುಕ್ರವಾರ ಸಂಜೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್‍ಜವಾನ್ ಜ್ಯೋತಿ ಬಳಿಯಲ್ಲಿ ಎಸ್‍ಡಿಪಿಐ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಗೋಹತ್ಯೆ, ಲವ್‍ ಜಿಹಾದ್, 370ನೇ ತಿದ್ದುಪಡಿ ಇವುಗಳಿಂದ ಜನರ ಕಷ್ಟಗಳು ಪರಿಹಾರವಾಗಲು ಸಾಧ್ಯವಿಲ್ಲ. ಬಡತನ ದೂರವಾಗಲು ಸಾಧ್ಯವಿಲ್ಲ. ನಾವು ಜನಪ್ರತಿನಿಧಿಗಳನ್ನು ಆರಿಸುವುದು ನಮ್ಮ ಕಷ್ಟಗಳು, ಸಮಸ್ಯೆಗಳು ಪರಿಹಾರವಾಗಲೆಂದು ಆದರೆ ಇವರು ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿಗೆ ಇದು ಸಾಧ್ಯವಾಗದಿದ್ದಲ್ಲಿ ಅಧಿಕಾರ ಬಿಟ್ಟು ಬಿಟ್ಟುಬಿಡಿ ಮುಂದೆ ನಾವು ಈ ಕೆಲಸ ಮಾಡಿ ತೋರಿಸುತ್ತೇವೆ ಎಂದರು.

ಎಸ್‍ಡಿಪಿಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಮಾತನಾಡಿ ಕೆಲವೇ ಕೋಮುವಾದಿ ಹಿಂದೂಗಳಿಂದ ಸಮಸ್ಯೆಗಳಾಗುತ್ತಿದ್ದು, ಇದಕ್ಕೆ ಬಹುಮಂದಿ ಹಿಂದೂಗಳೇ ವಿರೋಧಿಸುತ್ತಿದ್ದಾರೆ. ಬಿಜೆಪಿ ಸರ್ಕಾರವು ಶೂದ್ರರು ಮತ್ತು ದಲಿತರನ್ನು ವಿಭಜಿಸುವ ಮೂಲಕ ಅಧಿಕಾರ ನಡೆಸುತ್ತಿದೆ. ಸೂಲಿಬೆಲೆ, ಮುತಾಲಿಕ್‍ರಂತಹ ಚಿಂತಕರು ಎನ್ನುವ ಹಂತಕರಿಂದ ದೇಶಕ್ಕೆ ಅಪಾಯವಿದೆ. ಹಿಜಾಬ್ ಬಗ್ಗೆ ಕೋರ್ಟು ತೀರ್ಪಿನ ವಿರುದ್ದ ಅಸಮಾಧಾನದಿಂದ ಬಂದ್ ನಡೆಸಿರುವ ಮುಸ್ಲಿಂ ವರ್ತಕರಿಂದ ಯಾರಿಗು ತೊಂದರೆಯಾಗದಂತೆ ಬಂದ್ ಮಾಡುವುದು ಹೇಗೆ ಎಂಬ ಪಾಠವನ್ನು ಎಲ್ಲರೂ ಕಲಿಯಬೇಕಾಗಿದೆ ಎಂದರು.

ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿದರು.

ಪ್ರತಿಭಟನಾ ಸಭೆಗೆ ಮೊದಲು ದರ್ಬೆ ವೃತ್ತದಿಂದ ಮುಖ್ಯ ರಸ್ತೆಯಾಗಿ ಪ್ರತಿಭಟನಾ ಸ್ಥಳಕ್ಕೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. 
ಎಸ್‍ಡಿಪಿಐ ಮುಖಂಡರಾದ ಶಾಫಿ ಬೆಳ್ಳಾರೆ, ಇಬ್ರಾಹಿಂ ಸಾಗರ್, ಇಕ್ಬಾಲ್ ಬೆಳ್ಳಾರೆ, ನಿಝಾರ್ ಕುದ್ರಟ್ಟಿ, ಅಕ್ಬರ್ ಬೆಳ್ತಂಗಡಿ, ಬಶೀರ್ ಆತೂರು, ಅಬ್ದುಲ್ ರಹಿಮಾನ್, ಅಶ್ರಫ್ ಬಾವು, ಅನ್ವರ್ ಸಾದಾತ್, ಅಬ್ದುಲ್ ಹಮೀದ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.  

ಅನುಮತಿ ರಹಿತ ಧ್ವನಿವರ್ಧಕ ಬಳಕೆ: ಮೈಕ್ ಸ್ಥಗಿತಗೊಳಿಸಿದ ಪೊಲೀಸರು

ಪ್ರತಿಭಟನೆಗಾರರು ಪ್ರತಿಭಟನೆ ನಡೆಸಲು ಅನುಮತಿ ಪಡೆದುಕೊಂಡಿದ್ದರು. ಆದರೆ ಧ್ವನಿವರ್ಧಕ ಬಳಸಲು ಅನುಮತಿ ಪಡೆದು ಕೊಂಡಿಲ್ಲ ಎಂಬ ಕಾರಣಕ್ಕಾಗಿ ನಗರ ಠಾಣೆಯ ಪೊಲೀಸರು ಪ್ರತಿಭಟನಾ ಭಾಷಣ ನಡೆಯುತ್ತಿದ್ದ ವೇಳೆಯೇ ಧ್ವನಿವರ್ಧಕ ಸ್ಥಗಿತಗೊಳಿಸುಂತೆ ಸೂಚನೆ ನೀಡಿದರು. ಪ್ರತಿಭಟನಾಕಾರರು ಮತ್ತೆ ಬಾಷಣ ಮುಂದುವರಿದಾಗ ಪೊಲೀಸರು ಧ್ವನಿವರ್ಧಕವನ್ನು  ಸ್ಥಗಿತಗೊಳಿಸಿದರು. ಈ ವೇಳೆ ಪ್ರತಿಭಟನಾ ನಿರತ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ನಡುವೆ ಮೈಕ್ ಇಲ್ಲದೆಯೇ ಕೆಲ ಹೊತ್ತು ಭಾಷಣ ಮುಂದುವರಿಸಿ ಕೊನೆಗೊಳಿಸಲಾಯಿತು. ಆ ಬಳಿಕ ಪೊಲೀಸರು ಧ್ವನಿವರ್ಧಕ ಸಹಿತ ಅದನ್ನು ಅಳವಡಿಸಿದ್ದ ಜೀಪನ್ನು ಠಾಣೆಗೆ ಕೊಂಡೊಯ್ದರು.

ಶಾಂತಿಯುತ ಪ್ರತಿಭಟನೆಗೆ ಪೊಲೀಸರ ಅಡ್ಡಿ ಖಂಡನೀಯ-ಶಾಫಿ ಬೆಳ್ಳಾರೆ

ಪ್ರತಿಭಟನೆಗೆ ನಾವು ಅನುಮತಿ ಕೇಳಿದ್ದೆವು. ಪೊಲೀಸರು ಮೌಖಿಕ ಅನುಮತಿಯನ್ನೂ ನೀಡಿದ್ದರು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಪೊಲೀಸರು ಅನಗತ್ಯವಾಗಿ ಗೊಂದಲ ಸೃಷ್ಠಿಸಿ ಪ್ರತಿಭಟನೆಯನ್ನು ವಿಫಲಗೊಳಿಸಲು ಯತ್ನಿಸಿರುವುದು ದುರದೃಷ್ಟಕರ. ಈ ಕುರಿತು ಕಾನೂನು ರೀತಿಯಲ್ಲಿ ಎದುರಿಸಲು ಸಿದ್ದರಿದ್ದೇವೆ ಎಂದು ಶಾಫಿ ಬೆಳ್ಳಾರೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News