ಟಿಪ್ಪು ಸಾಧನೆ ಪಠ್ಯದಿಂದ ತೆಗೆಯುತ್ತಿರುವುದು ಕೇಸರೀಕರಣದ ಮುಂದುವರೆದ ಭಾಗ: ವಕೀಲ ಸುಭಾಷ್ ಆರೋಪ
ಬೆಂಗಳೂರು: ಶಾಲಾ ಪಠ್ಯದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್‍ನ ಸಾಧನೆಗಳನ್ನು ತೆಗೆಯುತ್ತಿರುವುದು, ಶಿಕ್ಷಣದಲ್ಲಿ ಬಲವಂತದಿಂದ ಹೇರಲಾಗುತ್ತಿರುವ ಆರ್‍ಎಸ್‍ಎಸ್‍ನ ಕೇಸರೀಕರಣದ ಮುಂದುವರೆದ ಭಾಗವಾಗಿದೆ. ಇದರ ರಾಜ್ಯದ ಭವ್ಯ ಇತಿಹಾಸವನ್ನು ತಿರುಚುವ ಹುನ್ನಾರ ಅಡಗಿದೆ ಎಂದು ವಕೀಲ ಸುಭಾಷ್ ಕೆ.ಆರ್. ಆರೋಪಿಸಿದರು.
ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಟಿಪ್ಪುವಿನ ರಾಕೆಟ್ ತಂತ್ರಜ್ಞಾನ, ರೈತರಿಗೆ ನೀರಾವರಿ ಯೋಜನೆ ಮತ್ತು ಮೈಸೂರು ಸಿಲ್ಕ್‍ಗೆ ಬುನಾದಿ ಹಾಕಿದ್ದನ್ನು ಮರೆಮಾಚಲು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರಚಿಸಲಾಗಿದೆ. ಇದನ್ನು ಕೈಬಿಡದೆ ಅನುಷ್ಠಾನ ಮಾಡಿದ್ದಲ್ಲಿ, ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಲಾಗುತ್ತದೆ. ಅದಲ್ಲದೇ, ನ್ಯಾಯಾಂಗದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬೀಮ್ ಆರ್ಮಿಯ ಮುಖಂಡ ರಾಜ್‍ಗೋಪಾಲ್ ಮಾತನಾಡಿ, ಬೆಲೆ ಏರಿಕೆ, ಖಾಸಗೀಕರಣ, ನಿರುದ್ಯೋಗ ಸೃಷ್ಟಿಯಂತಹ ರಾಜ್ಯ ಸರಕಾರದ ವೈಫಲ್ಯವನ್ನು ಜನರಿಂದ ಮರೆಮಾಚುವ ನಿಟ್ಟಿನಲ್ಲಿ ಹಿಜಾಬ್, ಹಲಾಲ್, ಟಿಪ್ಪುವನ್ನು ಎಳೆದು ತರಲಾಗುತ್ತಿದೆ ಎಂದು ಹೇಳಿದರು.
ಟಿಪ್ಪು ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟನು. ಆದರೆ ಈಗಿನ ರಾಜಕಾರಣಿಗಳು ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಏನೇನು ಮಾಡುತ್ತಿದ್ದಾರೆ ಎಂದು ರಾಜ್ಯಕ್ಕೆ ತಿಳಿದಿದೆ ಎಂದು ಅವರು ಹೇಳಿದರು.
ಜೈ ಜನ್ಮಭೂಮಿ ರಕ್ಷಣಾ ಪಡೆಯ ಅಧ್ಯಕ್ಷ ಫೈರೋಜ್ ಖಾನ್ ಮಾತನಾಡಿ, ದೇಶದ ಭವಿಷ್ಯದ ಮಕ್ಕಳಿಗೆ ವೀರಪುತ್ರರ ಬಗ್ಗೆ ಪಾಠಗಳನ್ನು ಮಾಡಬೇಕೇ ಹೊರತು, ಬ್ರಿಟೀಷರ ವಿರುದ್ಧ ಹೋರಾಟ ಮಾಡದೇ ಕ್ಷಮಾಪಣ ಪತ್ರವನ್ನು ಬರೆದವರ ಹೇಡಿಗಳ ಬಗ್ಗೆ ಪಾಠ ಮಾಡಬಾರದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯುವ ಮುಖಂಡರಾದ ಆನಂದ್ ಸಿದ್ಧಾರ್ಥ ಮತ್ತು ಡಾ. ಖಾಸಿಂ ಸಾಬ್ ಉಪಸ್ಥಿತರಿದ್ದರು.