ಪಾಕಿಸ್ತಾನದ ಮುಂದಿನ ನಿರೀಕ್ಷಿತ ಪ್ರಧಾನಿ ಶಹಬಾಝ್ ಶರೀಫ್

Update: 2022-04-02 05:30 GMT
Shehbaz Sharif

ಪಾಕಿಸ್ತಾನದ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಶಹಬಾಝ್ ಶರೀಫ್ ಹೊಂದಿದ್ದಾರೆ. ಅವರು ಮೂರು ಬಾರಿ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿದ್ದಾರೆ.

ವಿಶ್ವಾಸ ಮತದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೋತರೆ, ನೂತನ ಸರಕಾರದ ನೇತೃತ್ವವನ್ನು ಪ್ರತಿಪಕ್ಷ ನಾಯಕ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಮ್‌ಎಲ್-ಎನ್)ನ ಶಹಬಾಝ್ ಶರೀಫ್ ವಹಿಸುವ ಸಾಧ್ಯತೆಯಿದೆ. ಈ ಸೂಚನೆಯನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಅಧ್ಯಕ್ಷ ಬಿಲಾವಲ್ ಭುಟ್ಟೊ ಝರ್ದಾರಿ ಬುಧವಾರ ನೀಡಿದ್ದಾರೆ.

‘‘ಇಮ್ರಾನ್ ಖಾನ್ ಈಗ ಬಹುಮತವನ್ನು ಕಳೆದುಕೊಂಡಿದ್ದಾರೆ. ಅವರು ಈಗ ಪ್ರಧಾನಿಯಲ್ಲ. ಸಂಸತ್ ಅಧಿವೇಶನ ಮುಂದೆ ನಡೆಯಲಿದೆ. ನಾವು ಮತದಾನ ಮಾಡಿ ಈ ವಿಷಯವನ್ನು ನಿರ್ಧರಿಸಬೇಕಾಗಿದೆ. ಬಳಿಕ ನಾವು ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಮತ್ತು ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಈಗ ನಾವು ಪ್ರಯಾಣವನ್ನು ಕೈಗೊಳ್ಳಬೇಕಾಗಿದೆ’’ ಎಂದು ಪಿಪಿಪಿ ಅಧ್ಯಕ್ಷರು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

ಶರೀಫ್ ಶೀಘ್ರವೇ ದೇಶದ ಪ್ರಧಾನಿಯಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಸಹೋದರನಾಗಿರುವ ಶಹಬಾಝ್ ಶರೀಫ್ ಇಮ್ರಾನ್ ಖಾನ್ ಸರಕಾರದ ವಿರುದ್ಧ ಸೋಮವಾರ ನ್ಯಾಶನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತ ನಿರ್ಣಯವನ್ನು ಮಂಡಿಸಿದ್ದರು.ಶಹಬಾಝ್ ಶರೀಫ್ ಪಿಎಮ್‌ಎಲ್-ಎನ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ತನ್ನ ಸಹೋದರ ಹಾಗೂ ಪದಚ್ಯುತ ಪ್ರಧಾನಿ ನವಾಝ್ ಶರೀಫ್‌ರ ಸ್ಥಾನವನ್ನು ಅವರು ವಹಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿ ಎಂಬುದಾಗಿ ತೀರ್ಮಾನವಾದ ಬಳಿಕ ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.

ಅವರು ಪಾಕಿಸ್ತಾನ ಸಂಸತ್‌ನ ಕೆಳಮನೆ ನ್ಯಾಶನಲ್ ಅಸೆಂಬ್ಲಿಯಲ್ಲಿ ಹಾಲಿ ಪ್ರತಿಪಕ್ಷ ನಾಯಕರಾಗಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ. ಅವರು ಮೂರು ಬಾರಿ ಪಂಜಾಬ್ ಪ್ರಾಂತದ ಮುಖ್ಯಮಂತ್ರಿಯಾಗಿದ್ದಾರೆ.

ಅವರು ಮೊದಲ ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ 1997ರಲ್ಲಿ ಅಧಿಕಾರ ವಹಿಸಿಕೊಂಡರು. ಆದರೆ, 1999ರಲ್ಲಿ ಜನರಲ್ ಪರ್ವೇಝ್ ಮುಶರ್ರಫ್ ಸೇನಾ ಕ್ಷಿಪ್ರ ಕ್ರಾಂತಿ ನಡೆಸಿದ ಬಳಿಕ ಅವರು ಸೌದಿ ಅರೇಬಿಯಕ್ಕೆ ಪಲಾಯನಗೈದು ಅಲ್ಲಿ ಎಂಟು ವರ್ಷಗಳನ್ನು ದೇಶಭ್ರಷ್ಟರಾಗಿ ಕಳೆದರು.

ಶಹಬಾಝ್ ಶರೀಫ್ ಮತ್ತು ಅವರ ಸಹೋದರ ನವಾಝ್ ಶರೀಫ್ 2007ರಲ್ಲಿ ಪಾಕಿಸ್ತಾನಕ್ಕೆ ಮರಳಿದರು. 2008ರ ಚುನಾವಣೆಯಲ್ಲಿ ಅವರ ಪಕ್ಷ ಜಯ ಗಳಿಸಿದ ಬಳಿಕ ಅವರು ಮತ್ತೊಮ್ಮೆ ಪಂಜಾಬ್‌ನ ಮುಖ್ಯಮಂತ್ರಿಯಾದರು.

ಶಹಬಾಝ್ 2013ರಲ್ಲಿ ಮೂರನೇ ಬಾರಿಗೆ ಪಂಜಾಬ್ ಮುಖ್ಯಮಂತ್ರಿಯಾದರು. ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ, 2018ರ ಚುನಾವಣೆಯಲ್ಲಿ ಅವರ ಪಕ್ಷವು ಸೋಲನುಭವಿಸಿತು. 2018ರ ಚುನಾವಣೆಯ ಬಳಿಕ, ಅವರನ್ನು ಪ್ರತಿಪಕ್ಷ ನಾಯಕನಾಗಿ ನೇಮಿಸಲಾಯಿತು.

ಕಾನೂನಿನೊಂದಿಗೆ ಸೆಣಸಾಟ

2019 ಡಿಸೆಂಬರ್‌ನಲ್ಲಿ, ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ (ಎನ್‌ಎಬಿ) ಶಹಬಾಝ್ ಶರೀಫ್ ಮತ್ತು ಅವರ ಮಗ ಹಂಝ ಕಪ್ಪು ಹಣ ಬಿಳುಪು ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಅವರಿಗೆ ಸೇರಿದ 23 ಆಸ್ತಿಗಳನ್ನು ಮುಟ್ಟುಗೋಲು ಹಾಕಿತು.ಇದೇ ಪ್ರಕರಣದಲ್ಲಿ, ಎನ್‌ಎಬಿಯು ಅವರನ್ನು 2020 ಸೆಪ್ಟಂಬರ್‌ನಲ್ಲಿ ಬಂಧಿಸಿ ಜೈಲಿಗೆ ಹಾಕಿತು. 2021 ಎಪ್ರಿಲ್‌ನಲ್ಲಿ, ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ಲಾಹೋರ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ.

Writer - ಆರ್. ಎಚ್.

contributor

Editor - ಆರ್. ಎಚ್.

contributor

Similar News