ಗುಣಾತ್ಮಕ ಕೆಲಸಗಳಿಂದ ಭಾರತ ವಿಶ್ವಗುರು: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

Update: 2022-04-03 17:35 GMT

ಬೆಂಗಳೂರು, ಎ.3: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುಣಾತ್ಮಕತೆಗೆ ಒತ್ತು ಸಿಕ್ಕಿದ್ದು, ಇದರ ಪರಿಣಾಮವಾಗಿ ದೇಶವು ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ. ಇದರ ಫಲ ಇನ್ನು ಹತ್ತು ವರ್ಷಗಳಲ್ಲಿ ಜನತೆಗೆ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಹವ್ಯಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ನಾಗಭೂಷಣ ರಾವ್ ಅವರ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಿ, ಮಾತನಾಡಿದರು.

ಸ್ವಾತಂತ್ರ್ಯ ಬಂದ ನಂತರ ದೀರ್ಘ ಕಾಲ ಕೆಲಸಗಳಲ್ಲಿ ವಿನಾಯಿತಿಗಳನ್ನು ಕೊಡುತ್ತ ಬಂದಿದ್ದರಿಂದ ಹಲವು ದುಷ್ಪರಿಣಾಮಗಳು ಆಗಿವೆ. ಆದರೆ ಇನ್ನುಮುಂದೆ ಸ್ಪರ್ಧೆ ಮತ್ತು ಗುಣಮಟ್ಟಕ್ಕೆ ಮಾತ್ರ ಆದ್ಯತೆ ಇರಲಿದೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಕೆಟ್ಟ ಶಕ್ತಿಗಳನ್ನು ಹತ್ತಿಕ್ಕಬೇಕು. ಇದರ ಬದಲಿಗೆ ಸಾತ್ವಿಕ ಶಕ್ತಿಗಳಿಗೆ ಮನ್ನಣೆ ಸಿಗಬೇಕು. ನಾಗಭೂಷಣ ರಾವ್ ಅವರು ವೈಯಕ್ತಿಕ ಬದುಕನ್ನು ಮರೆತು ದೇಶದ ಸ್ವಾತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದ ಹಿರಿಯ ಜೀವ. ಯಾವುದೇ ಸೌಲಭ್ಯಗಳನ್ನು ಬಯಸದ ಅವರ ವ್ಯಕ್ತಿತ್ವವು ಹಲವರಿಗೆ ಮಾದರಿಯಾಗಿದೆ ಎಂದು ಅವರು ಗೌರವ ವ್ಯಕ್ತಪಡಿಸಿದರು.

ದೇಶದಲ್ಲಿ ಈಗ ಎನ್‍ಇಪಿ ಮೂಲಕ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಆಗಲಿದೆ ಎಂದು ಅವರು ಹೇಳಿದರು.

ನಮ್ಮ ಸುತ್ತಮುತ್ತ ಹೆಚ್ಚಿನವರು ವಿನಾಕಾರಣ ಪ್ರಸಿದ್ಧಿ ಹೊಂದಲು ಆತುರ ಪಡುತ್ತಾರೆ. ಆದರೆ ರಾವ್ ಅವರು ಸರಕಾರದ ಮಾಸಾಶನವನ್ನೂ ಬಯಸದೆ, ತಮ್ಮ ನಿಸ್ವಾರ್ಥ ಗುಣವನ್ನು ಕಾಯ್ದುಕೊಂಡು ಬಂದಿದ್ದಾರೆ ಎಂದು ಅವರು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತನಾಗ್ ಮತ್ತು ರಾವ್ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News