ರಾಜ್ಯಸಭೆ: 100ರ ಗಡಿ ದಾಟಿದ ಬಿಜೆಪಿ ಸದಸ್ಯರ ಸಂಖ್ಯೆ

Update: 2022-04-04 16:56 GMT

ಹೊಸದಿಲ್ಲಿ,ಎ.4: ಬಿಜೆಪಿ ರಾಜ್ಯಸಭೆಯಲ್ಲಿ ನೂರರ ಗಡಿಯನ್ನು ದಾಟಿದ್ದು,1990ರಿಂದೀಚಿಗೆ ಈ ಸಾಧನೆ ಮಾಡಿರುವ ಮೊದಲ ಪಕ್ಷವಾಗಿದೆ. ಮಂಗಳವಾರ ರಾಜ್ಯಸಭೆಗೆ ನಡೆದಿದ್ದ ದ್ವೈವಾರ್ಷಿಕ ಚುನಾವಣೆಗಳಲ್ಲಿ ಬಿಜೆಪಿ ಅಸ್ಸಾಂ,ತ್ರಿಪುರಾ ಮತ್ತು ನಾಗಾಲ್ಯಾಂಡ್‌ಗಳಿಂದ ಇನ್ನೂ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ.

ಬಿಜೆಪಿ ಈಗ ರಾಜ್ಯಸಭೆಯಲ್ಲಿ 101 ಸದಸ್ಯರನ್ನು ಹೊಂದಿದ್ದು,ಇದು ಸದನದಲ್ಲಿ ಮಸೂದೆಗಳನ್ನು ಅಂಗೀಕಾರವಾಗುವಂತೆ ಮಾಡುವಲ್ಲಿ ಪಕ್ಷಕ್ಕೆ ಮಾನಸಿಕವಾಗಿ ಹೆಚ್ಚಿನ ಬಲ ನೀಡಲಿದೆ. 2014ರಲ್ಲಿ ಮೋದಿ ಸರಕಾರವು ಮೊದಲ ಬಾರಿಗೆ ಅಧಿಕಾರಕ್ಕೇರಿದಾಗ ಬಿಜೆಪಿ ಕೇವಲ 55 ಸದಸ್ಯರನ್ನು ಹೊಂದಿತ್ತು. ರಾಜ್ಯಸಭೆಯು 245 ಸದಸ್ಯ ಬಲವನ್ನು ಹೊಂದಿದ್ದು, ಬಹುಮತಕ್ಕೆ 123 ಸದಸ್ಯರ ಅಗತ್ಯವಿದೆ.

2014ರಿಂದ ಸರಣಿ ವಿಧಾನಸಭಾ ಚುನಾವಣೆಗಳ ಸೋಲಿನಿಂದಾಗಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಕ್ಷೀಣಿಸುತ್ತಲೇ ಬಂದಿದ್ದು,ಅದೀಗ ಕೇವಲ 30 ಸದಸ್ಯರನ್ನು ಹೊಂದಿದೆ. ಸದಸ್ಯರ ಸಂಖ್ಯೆ ಇನ್ನಷ್ಟು ಕುಸಿದರೆ ಕಾಂಗ್ರೆಸ್ ಸದನದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಮಾನವನ್ನು ಕಳೆದುಕೊಳ್ಳುತ್ತದೆ.

ಈ ವರ್ಷ ಗುಜರಾತ,ಹಿಮಾಚಲ ಪ್ರದೇಶ ಮತ್ತು ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸುವ ಮೂಲಕ ರಾಜ್ಯಸಭೆಯಲ್ಲಿ ತಮ್ಮ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅವಕಾಶಗಳನ್ನು ಒದಗಿಸಲಿವೆ. ಅಲ್ಲದೆ ಮುಂದಿನ ಕೆಲವು ತಿಂಗಳುಗಳಲ್ಲಿ 72 ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದು,ಇದು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‌ಗೆ ಅವಕಾಶವನ್ನು ನೀಡಬಹುದು.

ಸೋಮವಾರ ನೂತನವಾಗಿ ಚುನಾಯಿತರಾದ ಆರು ರಾಜ್ಯಸಭಾ ಸದಸ್ಯರು ಪ್ರಮಾಣವಚನವನ್ನು ಸ್ವೀಕರಿಸಿದ್ದು,ಇವರಲ್ಲಿ ಮೂವರು ಬಿಜೆಪಿ,ಕಾಂಗ್ರೆಸ್,ಸಿಪಿಐ ಮತ್ತು ಸಿಪಿಎಮ್ನ ತಲಾ ಓರ್ವರು ಸದಸ್ಯರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News