×
Ad

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ

Update: 2022-04-05 16:24 IST

ಮಂಗಳೂರು : ಮಂಗಳೂರಿನಲ್ಲಿ ಬಾವುಟಗುಡ್ಡೆಯಲ್ಲಿ ಮಂಗಳವಾರ ನಡೆದ ೧೮೩೭ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆಯ ಭೂಮಿಪೂಜೆ ಮತ್ತು ಸಂಸ್ಮರಣಾ ದಿನ ಇಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಮಾಜಿ ಸಚಿವ, ಸಂಸದ ಡಿ.ವಿ.ಸದಾನಂದ ಗೌಡ, ಭಾರತದಲ್ಲಿ ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ ಸಂಗ್ರಾಮ ೧೮೫೭ ಸಿಪಾಯಿ ದಂಗೆ ಎನ್ನಲಾಗುತ್ತದೆ. ಆದರೆ ಅದಕ್ಕೂ ಮೊದಲೇ ೧೮೩೭ರಲ್ಲಿ ಕರ್ನಾಟಕದ ದ.ಕ.ಜಿಲ್ಲೆಯ ಸುಳ್ಯದಲ್ಲಿ ರೈತರೇ ಬ್ರಿಟಿಷರ ವಿರುದ್ಧ ದಂಗೆ ಎದ್ದಿರುವ ಬಗ್ಗೆ ದಾಖಲೆ ಇದೆ. ಈ ಸತ್ಯಾಂಶವನ್ನು ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ದೇಶಕ್ಕೆ ತಿಳಿಸಬೇಕಾಗಿದೆ ಎಂದರು.

೧೮೩೭ರಲ್ಲಿ ದ.ಕ. ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ ಅಂದರೆ ಅಮರ ಸುಳ್ಯ ಸಮರದ ಬಗ್ಗೆ ದಾಖಲೆಯೇ ಇದೆ. ಈ ಸ್ವಾತಂತ್ರ್ಯವೀರನ ನೆನಪಿನಲ್ಲಿ ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಡಗದರಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ನಿರ್ಮಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ೧೦ ಲಕ್ಷ ರೂ.  ಹಾಗೂ ಮಹಾನಗರ ಪಾಲಿಕೆ ೩೦ ಲಕ್ಷ ರೂ. ಅನುದಾನದಲ್ಲಿ ಇಲ್ಲಿನ ಬಾವುಟಗುಡ್ಡೆಯಲ್ಲಿ ಅತ್ಯಂತ ಎತ್ತರ ಸ್ಥಳದಲ್ಲಿ ಈ ಸ್ಮಾರಕ ನಿರ್ಮಾಣಗೊಳ್ಳಲಿದೆ. ಪ್ರವಾಸಿಗರಿಗೆ ಹಾಗೂ ಅಧ್ಯಯನಶೀಲರಿಗೆ ಇದು ಸಹಕಾರಿಯಾಗಲಿದೆ ಎಂದರು.

ಕೆದಂಬಾಡಿ ರಾಮಯ್ಯ ಗೌಡರ ಜೊತೆ ಸ್ವಾತಂತ್ರ್ಯಕ್ಕೆ ಹೋರಾಡಿದವರ ಬಗ್ಗೆ ಅಧ್ಯಯನ ನಡೆಯಬೇಕು. ಇದಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಕೆದಂಬಾಡಿ ರಾಮಯ್ಯ ಗೌಡರ ಸ್ವಾತಂತ್ರ್ಯ ಹೋರಾಟ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಗೆ ರಾಜ್ಯ ಸರ್ಕಾರ ಅನುಮತಿಸಿರುವುದು ಶ್ಲಾಘನೀಯ ಎಂದರು.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ೧೮೩೭ರ ಪ್ರಥಮ ಸ್ವಾತಂತ್ರ್ಯ ಹೋರಾಟ ರೈತರ ಸ್ವಾಭಿಮಾನದ ಸಂಕೇತವಾಗಿದೆ. ಇದು ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಉಲ್ಲೇಖವಾಗಿಲ್ಲ. ಇದರ ನೆನಪಿನಲ್ಲಿ ಸುಳ್ಯದ ಬೆಳ್ಳಾರೆಯ ಬಂಗ್ಲೆಗುಡ್ಡೆಯ ಬ್ರಿಟಿಷರ ಕೋಶಾಗಾರವನ್ನು ಸ್ಮಾರಕವಾಗಿ ಕಾಪಿಡಲಾಗುವುದು. ಅಲ್ಲಿನ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಉಬರಡ್ಕ ಅಮೈ ಮಡಿಯಾರು ಶಾಲೆಯನ್ನು ದತ್ತು ತೆಗೆದುಕೊಳ್ಳಲಾಗುವುದು ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ, ಕೆದಂಬಾಡಿ ರಾಮಯ್ಯ ಗೌಡರ ಸ್ವಾತಂತ್ರ್ಯ ಹೋರಾಟದ ಸ್ಮಾರಕವನ್ನು ಜನಾಕರ್ಷಣೆ ರೀತಿ ನಿರ್ಮಿಸಲಾಗುವುದು. ಅವರ ಹೋರಾಟದ ದಾಖಲೆಗಳನ್ನು ಡಾಕ್ಯುಮೆಂಟರಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಮಂಗಳೂರು ವಿವಿ ನಿವೃತ್ತ ಉಪ ಕುಲಸಚಿವ ಡಾ.ಪ್ರಭಾಕರ ನೀರುಮಾರ್ಗ ಅವರು ಬಾವುಟ ಗುಡ್ಡೆಯ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭ ೧೮೩೭ ಬ್ರಿಟಿಷರ ವಿರುದ್ಧ ಜನತಾ ಬಂಡಾಯ, ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಹಾಗೂ ಈ ಕುರಿತ ಕಿರು ಹೊತ್ತಗೆಯನ್ನು ಲೋಕಾರ್ಪಣೆಗೊಳಿಸಲಾಯಿತು.

ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಶಾಸಕರಾದ ಡಾ.ಭರತ್ ಶೆಟ್ಟಿ, ಸಂಜೀವ ಮಠಂದೂರು, ಮಂಜುನಾಥ ಭಂಡಾರಿ, ಪಾಲಿಕೆ ಸ್ಥಳೀಯ ಸದಸ್ಯ ಎ.ಸಿ.ವಿನಯರಾಜ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೋಕೇಶ್, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಪೊಲೀಸ್ ಕಮಿಷನರ್ ಶಶಿಕುಮಾರ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇದ್ದರು.

ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಬಿ.ಕಿರಣ್ ಬುಡ್ಲೆಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ ವಂದಿಸಿದರು. ಸದಾಶಿವ ಆಳ್ವ ತಲಪಾಡಿ ನಿರೂಪಿಸಿದರು.

ʼʼಕೆದಂಬಾಡಿ ರಾಮಯ್ಯ ಗೌಡರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ದಾಖಲೆ ಸಹಿತ ಡಾಕ್ಯುಮೆಂಟರಿ ಮಾಡಿದರೆ, ಅದನ್ನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರ ಗಮನಕ್ಕೆ ತರಲಾಗುವುದು. ಪ್ರಥಮ ಸ್ವಾತಂತ್ರ್ಯ ಸಮರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸುವಲ್ಲಿ ಇದು ಸಹಕಾರಿಯಾಗಲಿದೆʼʼ.

-ಡಿ.ವಿ. ಸದಾನಂದ ಗೌಡ, ಸಂಸದರು ಹಾಗೂ  ಮಾಜಿ ಸಚಿವರು, ಕೇಂದ್ರ ಸರಕಾರ,   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News