ಎಂಡೋಸಲ್ಪಾನ್ ಪೀಡಿತರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಧರಣಿ
ಕುಂದಾಪುರ, ಎ.೫: ಸೇನಾಪುರ ಗ್ರಾಮದ ಐದು ಎಕರೆ ಭೂಮಿಯಲ್ಲಿ ಉಡುಪಿ ಜಿಲ್ಲಾ ಎಂಡೋಸಲ್ಪಾನ್ ಪೀಡಿತ ಅಂಗವಿಕಲರಿಗಾಗಿ ಪುನರ್ವಸತಿ ಕೇಂದ್ರವನ್ನು ಕೂಡಲೇ ಸ್ಥಾಪಿಸುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಕುಂದಾಪುರ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಯಿತು.
ಕೇಂದ್ರ ಸ್ಥಾಪನೆ ಮಾಡಲು ಸ್ಥಳ ಕಾದಿರಿಸಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪುನರ್ವಸತಿ ಕೇಂದ್ರ ಹಾಗೂ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಸಮಾರು ೧೧ ಕೋಟಿ ಅನುದಾನ ಬಿಡುಗಡೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆ ಸಲ್ಲಿಸಿ ವರ್ಷ ಐದು ಕಳೆದರೂ ಈತನಕ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಿರುವುದಿಲ್ಲ ಎಂದು ಧರಣಿನಿರತರು ಆರೋಪಿಸಿದರು.
ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷ ವೆಂಕಟೇಶ್ ಕೋಣಿ, ಅಧ್ಯಕ್ಷ ಮಂಜುನಾಥ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ ಕೊಟೇಶ್ವರ, ಮುಖಂಡರಾದ ಬಾಬು ಕೆ.ದೇವಾಡಿಗ ಉಪ್ಪುಂದ, ನಾಗರಾಜ ತಲ್ಲೂರು, ನಾಗಶ್ರೀ ಯಡ್ತರೆ, ಸಂತೋಷ ದೇವಾಡಿಗ ಜಾಲಾಡಿ, ವಿಲ್ಸನ್ ಪಿ.ಕೆ., ಗಣಪತಿ ಪೂಜಾರಿ ಅಮಾಸೈಬೈಲ್, ನಾರಾಯಣ ಶೇರುಗಾರ ಉಡುಪಿ, ಇಂದಿರಾ ಎಸ್. ಹೆಗಡೆ, ಸದಾಶಿವ ಕಾರ್ಕಳ, ಕಾವೇರಿ ಪ್ರಸಾದ್ ಸಿದ್ಧಾಪುರ, ಮಂಜುಳ ಕಾರ್ಕಳ, ರಾಧಾಕೃಷ್ಣ ಡಿ.ಬೈಂದೂರು, ಕೃಷ್ಣ ಬ್ರಹ್ಮಾವರ, ರಾಜಶೇಖರ ಹುಣ್ಸೆಮಕ್ಕಿ, ಆನಿತಾ ಪಡುವರಿ ಮೊದಲಾದವರು ಉಪಸ್ಥಿತರಿದ್ದರು.