ಬೆಂಗಳೂರಿನಲ್ಲಿ 301 ಧಾರ್ಮಿಕ ಸ್ಥಳಗಳಿಗೆ ನೋಟಿಸ್: ಪೊಲೀಸ್ ಆಯುಕ್ತ ಕಮಲ್ ಪಂತ್
ಬೆಂಗಳೂರು, ಎ.5: 'ಶಬ್ದಮಾಲಿನ್ಯ ರೂಲ್ಸ್ ಪಾಲಿಸದ 301 ಧಾರ್ಮಿಕ ಸ್ಥಳಗಳಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ಎಲ್ಲ ಧರ್ಮದ ಧಾರ್ಮಿಕ ಸ್ಥಳಗಳೂ ಇವೆ. ಹೈಕೋರ್ಟ್ ಆದೇಶ ಏನಿದೆ ಅದನ್ನು ಪಾಲಿಸಬೇಕು. ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ಆಗುತ್ತೆ. ಬೆಂಗಳೂರು ನಗರದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಕೇಸ್ ದಾಖಲು ಮಾಡಲಾಗಿದೆ' ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಡೆಸಿಬಲ್ ಪ್ರಕಾರ ಎಲ್ಲರೂ ನಿಯಮ ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ಯಾವ ಯಾವ ಪೂಜಾ ಸ್ಥಳಗಳಲ್ಲಿ ಹೇಗೆ ಧ್ವನಿವರ್ಧಕ ಬಳಸಬೇಕು ಎಂದು ಎಲ್ಲರಿಗೂ ತಿಳಿಸಿಕೊಡುತ್ತಿದ್ದೇವೆ. ಹೈಕೋರ್ಟ್ ಆದೇಶದಂತೆ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಧ್ವನಿವರ್ಧಕ ಬಳಕೆ ಕುರಿತು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೊಟ್ಟಿರುವ ಡೆಸಿಬಲ್ ಪ್ರಕಾರ ನಿಯಮ ಪಾಲಿಸಬೇಕು ಎಂದು ಹೇಳಿದರು.
ಸ್ಥಳೀಯ ಮಟ್ಟದಲ್ಲಿ ಡಿಸಿಪಿ ಹಾಗೂ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಧ್ವನಿವರ್ಧಕ ಅಳವಡಿಸಿರುವ ಸ್ಥಳಗಳಿಗೆ ತೆರಳಿ ನೋಟಿಸ್ ನೀಡುವ ಕೆಲಸ ಮಾಡಿದ್ದೇವೆ. ಆಡಳಿತ ಮಂಡಳಿಯವರಿಗೂ ಅರಿವು ಮೂಡಿಸಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಮ್ಮವರಿಗೆ ಟ್ರೈನಿಂಗ್ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಧ್ವನಿವರ್ಧಕ ಬಳಸುತ್ತಿರುವ ಮಸೀದಿ, ಮಂದಿರ, ಕಾರ್ಖಾನೆ, ಪಬ್ ಸೇರಿ ಎಲ್ಲರಿಗೂ ಈಗಾಗಲೇ ನೋಟಿಸ್ ನೀಡಲಾಗಿದೆ. ಧಾರ್ಮಿಕ ಮುಖಂಡರ ಜತೆಗೂ ಈ ಬಗ್ಗೆ ಸಭೆ ನಡೆಸಲಾಗಿದೆ. ಅದರಂತೆ ಧರ್ಮಗುರುಗಳು ನಡೆದುಕೊಂಡಿದ್ದಾರೆ. ಆದೇಶ ಉಲ್ಲಂಘಿಸಿದ ಕಡೆ ಧ್ವನಿವರ್ಧಕಗಳನ್ನು ಜಪ್ತಿ ಮಾಡಿದ್ದೇವೆ. ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಕಮಲ್ ಪಂತ್ ತಿಳಿಸಿದರು.
ಮಸೀದಿಗಳಲ್ಲಿ ಧ್ವನಿವರ್ಧಕ ಮೂಲಕ ಅಝಾನ್ ಕೂಗುವುದನ್ನು ಪ್ರಶ್ನಿಸಿ 2019ರಲ್ಲೇ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಕೆಯಾಗಿತ್ತು. ಗೋವಿಂದರಾಜನಗರದ ಮಸೀದಿ, ನಂತರ ಥಣಿಸಂದ್ರದ ಮಸೀದಿಯಲ್ಲಿ ಲೌಡ್ ಸ್ಪೀಕರ್ ಬಳಕೆ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲೇ ಹೈಕೋರ್ಟ್ 2000 ಇಸವಿಯಲ್ಲಿ ಜಾರಿಯಾದ ಶಬ್ದಮಾಲಿನ್ಯ ನಿಯಂತ್ರಣ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶ ನೀಡಿದೆ ಎಂದು ಹೇಳಿದರು.
ಶಬ್ದಮಾಲಿನ್ಯ ನಿಯಂತ್ರಣ ನಿಯಮದಲ್ಲೇನಿದೆ: ಶಬ್ದಮಾಲಿನ್ಯ ನಿಯಂತ್ರಣ ನಿಯಮದ ಪ್ರಕಾರ ಪೆÇಲೀಸರ ಅನುಮತಿಯಿಲ್ಲದೇ ಲೌಡ್ ಸ್ಪೀಕರ್ ಬಳಸುವಂತೆಯೇ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಲೌಡ್ ಸ್ಪೀಕರ್ ಬಳಸುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧವನ್ನು ವಿಧಿಸಲಾಗಿದೆ.
ಇನ್ನು ಆಡಿಟೋರಿಯಂ, ಮುಚ್ಚಿದ ಸಭಾಂಗಣಗಳಲ್ಲಾದರೆ ಮಿತಿಯಲ್ಲಿ ಬಳಸಬಹುದು. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಲೌಡ್ ಸ್ಪೀಕರ್ ಬಳಸಬಹುದು. ರಾಜ್ಯ ಸರಕಾರ ರಾತ್ರಿ 10 ರಿಂದ 12 ಗಂಟೆವರೆಗೆ ಕೆಲವೊಮ್ಮೆ ಅನುಮತಿಸಬಹುದು. ಧಾರ್ಮಿಕ, ಸಾಂಸ್ಕøತಿಕ ಆಚರಣೆಗಳು ನಡೆಯುವಾಗ ರಾತ್ರಿ 10 ರಿಂದ 12 ರವರೆಗೆ ಲೌಡ್ ಸ್ಪೀಕರ್ ಬಳಕೆಗೆ ಸರಕಾರ ವಿನಾಯಿತಿ ನೀಡಬಹುದು. ಆದರೆ 15 ದಿನಗಳಿಗೆ ಸೀಮಿತವಾಗಿ ಮಾತ್ರ ಈ ವಿನಾಯಿತಿ ನೀಡಬಹುದು. ಸುಪ್ರೀಂಕೋರ್ಟ್ ಕೂಡಾ 2005ರಲ್ಲೇ ಈ ಶಬ್ದಮಾಲಿನ್ಯ ನಿಯಮ ಎತ್ತಿ ಹಿಡಿದಿದೆ. ಶಬ್ದಮಾಪನ ಸ್ಥಳೀಯ ಪ್ರದೇಶದಲ್ಲಿ ನಿಗದಿಯಾದ ಮಟ್ಟಕ್ಕಿಂತ 10 ಡೆಸಿಬಲ್ ಅಥವಾ ಗರಿಷ್ಟ 75 ಡೆಸಿಬಲ್ ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಮಾತ್ರ ಅನುಮತಿಯೊಂದಿಗೆ ಬಳಸಬಹುದು.
ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ: ಧರ್ಮಗಳು ಸ್ಥಾಪನೆಯಾದಾಗ ಲೌಡ್ ಸ್ಪೀಕರ್ ಇರಲಿಲ್ಲ, ಹೀಗಾಗಿ ಲೌಡ್ ಸ್ಪೀಕರ್ ಬಳಕೆ ಮೂಲಭೂತ ಹಕ್ಕಲ್ಲ, ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸಿಲ್ಲವೇಕೆ? ಯಾವ ಕಾನೂನಿನಡಿ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಗೆ ಅನುಮತಿ ನೀಡಲಾಗಿದೆ. ಶಬ್ದಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಲು ಸರಕಾರ ಕೈಗೊಂಡ ಕ್ರಮವೇನು? ಲೌಡ್ ಸ್ಪೀಕರ್ ಗಳನ್ನು ನಿರ್ಬಂಧಿಸಲು ಕೈಗೊಂಡ ಕ್ರಮದ ಮಾಹಿತಿ ನೀಡಿ ಎಂದು ಹೈಕೋರ್ಟ್ ಕಳೆದ ನವೆಂಬರ್ 16 ರಂದೇ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.