ಮೊಬೈಲ್ ಮೂಲಕವೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್

Update: 2022-04-06 16:46 GMT

ಬೆಂಗಳೂರು, ಎ.6: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಹವಾನಿಯಂತ್ರಿತ ಸೇರಿ ಎಲ್ಲ ಮಾದರಿ ಬಸ್‍ಗಳ ಪಾಸುಗಳು ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸಿಗಲಿದೆ ಎಂದು ಬಿಎಂಟಿಸಿ ಹೇಳಿದೆ. ಪಾಸುಗಳನ್ನು ಪಡೆಯಲು ಬಯಸುವ ಪ್ರಯಾಣಿಕರು ಟುಮ್ಯಾಕ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಬೇಕು.

ಈಗ ಪಾಸುಗಳನ್ನು ಪಡೆಯಲು ಪ್ರಯಾಣಿಕರು ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡುತ್ತಾರೆ. ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್‍ಗಳ ಮೂಲಕವೇ ಬಿಎಂಟಿಸಿ ಮಾಸಿಕ, ದಿನದ ಪಾಸುಗಳು ಲಭ್ಯವಾಗಲಿವೆ ಎಂದು ಬಿಎಂಟಿಸಿ ಎಚಿಡಿ ಅನ್ಬುಕುಮಾರ್ ತಿಳಿಸಿದ್ದಾರೆ. 

ಈ ಕುರಿತು ಮಾತನಾಡಿರುವ ಅನ್ಬುಕುಮಾರ್ ಅವರು, ಬಸ್ ಪಾಸುಗಳನ್ನು ಪಡೆಯಲು ಎಲ್ಲಾ ವಿಧದ ಎಲೆಕ್ಟ್ರಾನಿಕ್ ಪೇಮೆಂಟ್, ಕ್ಯೂರ್ ಕೋಡ್ ಬಳಕೆ ಮಾಡಬಹುದಾಗಿದೆ. ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಂಡು ಪಾಸು ಪಡೆಯಬಹುದು ಎಂದು ಹೇಳಿದ್ದಾರೆ.

ಎಸಿ ಬಸ್‍ಗಳಲ್ಲಿ ಸ್ಮಾರ್ಟ್ ಪಾಸುಗಳನ್ನು ತೋರಿಸಲು ಯಂತ್ರದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ 1000 ಬಸ್‍ಗಳಲ್ಲಿ ಈ ವ್ಯವಸ್ಥೆ ಇರಲಿದೆ. 2023ಕ್ಕೆ ನಿರ್ವಾಹಕ ರಹಿತ ಬಸ್ ವ್ಯವಸ್ಥೆ ಪರಿಚಯಿಸಲು ಮುಂದಾಗಿರುವ ಬಿಎಂಟಿಸಿಗೆ ಈ ಪಾಸ್ ಸೌಲಭ್ಯ ಸಹಕಾರಿಯಾಗಲಿದೆ.

ಟುಮ್ಯಾಕ್ 1400 ಆಧುನಿಕ ತಂತ್ರಜ್ಞಾನ ಹೊಂದಿರುವ ಇಟಿಎಂ ಮೆಷಿನ್‍ಗಳನ್ನು ನೀಡಲಿದೆ. ಇವುಗಳನ್ನು ವಜ್ರ ಮತ್ತು ವಾಯು ವಜ್ರ ಹವಾನಿಯಂತ್ರಿತ ಬಸ್‍ಗಳಲ್ಲಿ ಬಳಕೆ ಮಾಡಲಾಗುತ್ತದೆ.

ಪ್ರಸ್ತುತ ಬಿಎಂಟಿಸಿಯು 5,500 ಬಸ್‍ಗಳನ್ನು ಓಡಿಸುತ್ತಿದೆ. ಇವುಗಳಲ್ಲಿ ಸುಮಾರು 2 ಸಾವಿರ ಬಸ್‍ಗಳಲ್ಲಿ ಇಟಿಎಂ ಮೆಷಿನ್‍ಗಳನ್ನು ಬಳಕೆ ಮಾಡಲಾಗುತ್ತದೆ. ಉಳಿದ ಬಸ್‍ಗಳಲ್ಲಿ ಟಿಕೆಟ್ ಬಳಕೆ ಮಾಡಲಾಗುತ್ತಿದೆ.

2019ರಲ್ಲಿ ಬಿಎಂಟಿಸಿ ಮತ್ತು ಸ್ಟಾರ್ಟ್ ಅಪ್ ಕಂಪೆನಿಯೊಂದು ಸೇರಿ ಬಿಎಂಟಿಸಿ ನಮ್ಮ ಪಾಸು ಎಂಬ ಡಿಜಿಟಲ್ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭಿಸಿತ್ತು. ಆದರೆ ಇದು ವೊಲ್ವೋ ವಾಯು ವಜ್ರ ಬಸ್‍ಗಳಿಗೆ ಮಾತ್ರ ಸೀಮಿತವಾಗಿತ್ತು.

ಐಟಿಪಿಎಲ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆ ಸಾಗುವ ಪ್ರಯಾಣಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋವಿಡ್ ಸಂದರ್ಭದಲ್ಲಿ ಈ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಟುಮ್ಯಾಕ್ ಅಪ್ಲಿಕೇಶನ್ ಮೂಲಕ ಪಡೆಯುವ ದಿನ, ವಾರ, ಮಾಸಿಕ ಪಾಸುಗಳಿಗೆ ಪ್ರತ್ಯೇಕವಾದ ಯೂನಿಕ್ ಐಡಿ ಮತ್ತು ಕ್ಯೂರ್ ಕೋಡ್ ಇರಲಿದೆ. ಪ್ರಯಾಣಿಕರ ಮೊಬೈಲ್‍ನಲ್ಲಿಯೂ ಪಾಸ್ ತೋರಿಸುವ ಮೂಲಕ ಬಸ್‍ಗಳಲ್ಲಿ ಸಂಚಾರ ನಡೆಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News