×
Ad

ಬೆಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಹಠಾತ್‍ ಬೆಂಕಿ; 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Update: 2022-04-09 14:38 IST

ಬೆಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಹಠಾತ್‍ ಬೆಂಕಿ; 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಬೆಂಗಳೂರು, ಎ.9: ಚಲಿಸುತ್ತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಭಾಗಶಃ ಸುಟ್ಟು ಕರಕಲಾದ ಘಟನೆ  ಶೇಷಾದ್ರಿಪುರ ರಸ್ತೆಯ ಕೆ.ಆರ್.ಸರ್ಕಲ್ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಮೆಜೆಸ್ಟಿಕ್ ನಿಂದ ಹೊಸಕೆರೆಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ಈ ಬಸ್ ಮಧ್ಯಾಹ್ನ 12:40ರ ಸುಮಾರಿಗೆ ಕೆ.ಆರ್ ಸರ್ಕಲ್ ಬಳಿ ತಲುಪಿದಾಗ ಇಂಜಿನ್‍ ನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದೆ‌. ಇದನ್ನು ಗಮನಿಸಿದ ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿದ್ದಾನೆ. ಅಷ್ಟರಲ್ಲಿ ಬಸ್ ಡೋರ್ ಲಾಕ್ ಆಗಿತ್ತು. ಬಳಿಕ ಬಸ್ ನ ಎಮರ್ಜೆನ್ಸಿ ಎಕ್ಸಿಟ್  ಮೂಲಕ ಮೂವತ್ತರಷ್ಟಿದ್ದ ಪ್ರಯಾಣಿಕರನ್ನು ಯಾವುದೇ ಅಪಾಯಗಳಿಲ್ಲದೆ ಹೊರಗೆ ಕರೆತರಲಾಯಿತು.

ಬೆಂಕಿಯಿಂದ ಬಸ್ ನ ಎದುರಿನ ಭಾಗ ಸಂಪೂರ್ಣ ಸುಟ್ಟುಕರಕಲಾಗಿದೆ. ವಿಷಯ ಅರಿತು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ನಗರದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಬಸ್ಸಿನಲ್ಲಿ ಅಗ್ನಿ ಅನಾಹುತ ಸಂಭವಿಸಿದ 3ನೇ ಪ್ರಕರಣ ಇದಾಗಿದೆ.

ಇದೇರೀತಿ ಮಂಗಳೂರಿನಲ್ಲೂ ಬಸ್ಸೊಂದು ಶುಕ್ರವಾರ ಬೆಂಕಿಗಾಹುತಿಯಾಗಿತ್ತು. ಮಂಗಳೂರು ನಗರದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಸಂದರ್ಭ ಕಾಣಿಸಿಕೊಂಡ ಬೆಂಕಿಯಿಂದ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಅದರಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News