ಸರಕಾರದಿಂದ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರ ಸುಲಿಗೆ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ
ಬೆಂಗಳೂರು, ಎ.9: ದೇಶದಲ್ಲಿ ಅಚ್ಛೇ ದಿನದ ಕನಸುಗಳನ್ನ ಜನರಿಗೆ ಹಗಲಿನಲ್ಲೇ ಬಿತ್ತಿದ್ದ ಕೇಂದ್ರದ ಮೋದಿ ಸರ್ಕಾರ ಕೊರೋನದಿಂದ ತತ್ತರಿಸಿರುವ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಿನಬೆಳಗಾದರೆ ಪೆಟ್ರೋಲ್ ಡಿಸೇಲ್, ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳು, ಅಡುಗೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು ಹಳೆಯ ವಿಷಯ. ಈಗ ಗಗನದಲ್ಲೇ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರಿಂದ ಸುಲಿಗೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ದತ್ತಾಂಶ ನೀಡದೆ ವಂಚಿಸುತ್ತಿದೆ. ಜಿಡಿಪಿ ಬೆಳೆಯುತ್ತಿದೆಯಲ್ಲ ನಿಮಗೇನು ಸಮಸ್ಯೆ ಎಂದು ಹೇಳಲಾಗುತ್ತಿದೆ. ಆದರೆ 65,000 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಡವಿಡಲಾಗಿದೆ. ಇದರ ಬಗ್ಗೆ ಇಲ್ಲಿವರೆಗೆ ಕೇಂದ್ರ ಸರ್ಕಾರ ತುಟಿ ಬಿಚ್ತಿಲ್ಲ. ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎನ್ನುತ್ತಾರೆ. ದೇಶದಲ್ಲಿ ರೈತರ ತಲಾ ಆದಾಯ 28 ರೂ. ಇಡೀ ಜಗತ್ತಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದುಬಾರಿ ದೇಶ ಭಾರತ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಪೆಟ್ರೋಲ್ ದರ 3 ಹಾಗೂ ಡೀಸೆಲ್ ನಲ್ಲಿ 6ನೇ ಸ್ಥಾನದಲ್ಲಿ ಭಾರತವಿದೆ ಎಂದು ವಿವರಿಸಿದರು.
ಪೆಟ್ರೋಲ್, ಡೀಸೆಲ್ ನಲ್ಲಿ ಸರ್ಕಾರ ಪ್ರತಿ ವರ್ಷ 4.5 ಲಕ್ಷ ಕೋಟಿ ರೂ. ಗಳಿಸುತ್ತಿದೆ. 2.5 ರಷ್ಟು ಸೆಸ್ ಹಾಕುತ್ತಿದೆ. ಇದನ್ನು ರಾಜ್ಯ ಸರ್ಕಾರಗಳಿಗೆ ಕೊಡುವುದಿಲ್ಲ. ಯಾವಾಗಲೂ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದರೆ ಇಂಧನ ಬೆಲೆ ಏರುವುದಿಲ್ಲ. 2014ರಲ್ಲಿ 1 ರೂ.ನಲ್ಲಿ 33 ಪೈಸೆ ಬರುತ್ತಿತ್ತು. ಅದು ಈಗ 20 ಪೈಸೆಯಾಗಿದೆ. ಇದರ ಕುರಿತು ಜನಸಮಾನ್ಯರು ಯೋಚಿಸುತ್ತಿಲ್ಲ. ಇಂತಹ ಗಂಭೀರ ಸಮಸ್ಯೆಗಳು ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ಬಿ.ಕೆ. ಹರಿಪ್ರಸಾದ್ ಕಳವಳ ವ್ಯಕ್ತಪಡಿಸಿದರು.
ಶ್ರೀಮಂತ ರಾಜಕೀಯ ಪಕ್ಷ ಬಿಜೆಪಿ ಮತದಾರರನ್ನ ಬಡವರನ್ನಾಗಿ ಮಾಡುತ್ತಿದೆ. ಶೇ.67ರಷ್ಟು ಜನರಿಗೆ ಆಹಾರ ನೀಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 3 ಮಿಲಿಯನ್ ಟನ್ ಗೋದಾಮುಗಳಲ್ಲಿದೆ. ಇದರ ಬೆಲೆ 6 ಲಕ್ಷ ಕೋಟಿ ರೂ. ಇದೆ. ಗೋದಾಮಿನಲ್ಲಿ ಆಹಾರ ತುಂಬಿತುಳುಕುತ್ತಿರುವ ದೇಶದ ಜನರ ಹೊಟ್ಟೆ ಖಾಲಿ ಇದೆ. ಭಾರತ ಹಸಿವಿನಲ್ಲಿ 102ನೇ ಸ್ಥಾನದಲ್ಲಿದೆ ಎಂದರು. ಶೇ.80ರಷ್ಟು ಹಣವನ್ನು ಪ್ರಚಾರಕ್ಕೆ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದರೇ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗುತ್ತೆ ಎಂದು ಬೊಗಲೇ ಬಿಟ್ಟಿದ್ದ ಬಿಜೆಪಿ ಈಗ ಡಬಲ್ ಇಂಜಿನ್ ಬದಲು ಡಬ್ಬಾ ಸರ್ಕಾರವಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವುದರಲ್ಲಿ ಬೊಮ್ಮಾಯಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವರೇ ಮತೀಯವಾದಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಸಂಘಪರಿವಾರದ ಸಂಘಟನೆಗಳು ಇಡೀ ರಾಜ್ಯದಲ್ಲಿ ಭಯದ ವಾತಾವರಣವನ್ನ ಸೃಷ್ಟಿಸಿವೆ. ಅಲ್ಪ ಸಂಖ್ಯಾತರ ಮೇಲೆ ನಿರಂತವಾಗಿ ದಾಳಿಗಳು ಆರಂಭವಾಗಿದೆ. ಇದಕ್ಕೆ ಮುಖ್ಯ ಕಾರಣವೇ ಸರ್ಕಾರ ತಮ್ಮ ವೈಫಲ್ಯಗಳನ್ನ ಮುಚ್ಚಿ ಹಾಕಲು ಮಾಡುತ್ತಿರುವ ಷಡ್ಯಂತ್ರ ಎಂದರು.
ಮುಸ್ಲಿಮ್ ಸಮುದಾಯಗಳ ಅಂಗಡಿಗಳನ್ನ ತೆರೆವುಗೊಳಿಸಲಾಗುತ್ತಿದೆ, ಆಹಾರದ ಹಕ್ಕಿನ ಮೇಲೆ ದಾಳಿ ನಡೆಸಲಾಗುತ್ತಿದೆ. ಹಲಾಲ್ ಮಾಡಿದ ಮಾಂಸವನ್ನ ಖರೀದಿಸಬೇಡಿ, ತಿನ್ನಬೇಡಿ ಎಂದು ಮಾಂಸ ತಿನ್ನದ ವ್ಯಕ್ತಿಗಳು ನಿರ್ಧಾರ ಮಾಡುತ್ತಿದ್ದಾರೆ. ದೇಶದ ಅತಿದೊಡ್ಡ ಮಾಂಸ ರಫ್ತು ಮಾಡುವ ಅದಾನಿ, ಅಂಬಾನಿ ಕಂಪೆನಿಗಳ ಎದುರು ಹೋಗಿ ಬಜರಂಗದಳ, ವಿಎಚ್ ಪಿ ಸಂಘಟನೆಗಳು ಪ್ರತಿಭಟನೆ ನಡೆಸಲಿ, ಇಲ್ಲ ಮೋದಿಯ ಮುಖಾಂತರ ಬಂದ್ ಮಾಡಿಸಲಿ. ಮುಸ್ಲಿಮರು ಮಾಡಿದ ದೇವರ ಮೂರ್ತಿಗಳನ್ನ ಖರೀದಿಸಬೇಡಿ ಎಂದು ಫರ್ಮಾನು ಹೊರಡಿಸುತ್ತಿದ್ದಾರೆ. ಇವರ ಗಾಡಿಗಳಿಗೆ ಪೆಟ್ರೋಲ್, ಡೀಸೆಲ್ ಅರಬ್ ದೇಶಗಳಿಂದಲೇ ಬರುತ್ತಿದೆ. ನಾಳೆಯಿಂದ ಪೆಟ್ರೋಲ್ ಡೀಸೆಲ್ ಹಾಕಿಸುವುದಿಲ್ಲ ಎಂದು ಘೋಷಿಸಲಿ ನೋಡೋಣ. ಈ ಎಲ್ಲಾ ಕೃಪಾಪೋಷಿತ ಕೃತ್ಯಗಳ ಹಿಂದೆ ಬಿಜೆಪಿ ಸರ್ಕಾರ ಮೌನ ವಹಿಸಿ ಬೆಂಬಲ ನೀಡುತ್ತಿದೆ. ಶಾಂತಿ ಸಹಬಾಳ್ವೆ, ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುತ್ತಿದ್ದಾರೆ. ಇತಿಹಾಸದಲ್ಲಿ ಬಸವರಾಜ ಬೊಮ್ಮಾಯಿ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದವರು ಟೀಕಿಸಿದರು.
ಸರ್ಕಾರದ ಜನವಿರೋಧಿ ನೀತಿಗಳನ್ನ ಪ್ರಶ್ನೆ ಮಾಡುವ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುತ್ತಿದೆ. ಮಧ್ಯಪ್ರದೇಶದಲ್ಲಿ ಸರ್ಕಾರವನ್ನ ಪ್ರಶ್ನಿಸಿದಕ್ಕೆ ಬೆತ್ತಲೆ ಮಾಡಿ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರನ್ನ ಬಂಧಿಸಲಾಗಿದೆ. ಹಿರಿಯ ಪತ್ರಕರ್ತ ಆಕಾರ್ ಪಟೇಲ್ ಅವರಿಗೆ ವಿದೇಶಿ ಪ್ರಯಾಣಕ್ಕೆ ಅನುಮತಿಯೇ ನೀಡುತ್ತಿಲ್ಲ. ದೆಹಲಿ ಹೈಕೋರ್ಟ್ ಸಿಬಿಐ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಸಾಹಿತಿಗಳಿಗೆ, ರಾಜಕಾರಣಿಗಳಿಗೆ ಕೊಲೆ ಬೆದರಿಕೆ ಪತ್ರಗಳು ಬರೆಯಲಾಗುತ್ತಿದೆ. ಇವೆಲ್ಲವೂ ಪೂರ್ವ ನಿಯೋಜಿತ ಕೃತ್ಯಗಳು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಗಳು ಎಂದು ಆರೋಪಿಸಿದರು.
ಶಾಂತಿ, ಸುವ್ಯವಸ್ಥೆ, ನೆಮ್ಮದಿಯ ಬದುಕಿಗೂ ರಾಜ್ಯ ಮತ್ತು ದೇಶದ ಅಭಿವೃದ್ಧಿಗೂ ನೇರ ಸಂಬಂಧವಿದೆ. ಶಾಂತಿ, ಸುವ್ಯವಸ್ಥೆ ಇಲ್ಲದ ರಾಜ್ಯ, ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಭಾರತ ಬಹು ಸಂಸ್ಕೃತಿಯ ದೇಶ. ಇಲ್ಲಿ ಧಾರ್ಮಿಕ ವಿಷಯಗಳನ್ನು, ಸಮಾಜದ ಶಾಂತಿ ಕದಡುವ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದರೆ ದೇಶ ಅಭಿವೃದ್ಧಿ ಆಗಲ್ಲ.
ಸರ್ಕಾರದ ಬಳಿ ಕಳೆದ ಎರಡೂವರೆ ವರ್ಷಗಳಲ್ಲಿ ಸೃಷ್ಟಿಯಾದ ಉದ್ಯೋಗ ಮತ್ತು ಬಂದಿರುವ ಬಂಡವಾಳದ ಬಗ್ಗೆ ಮಾಹಿತಿಯೇ ಇಲ್ಲ. ಅಧಿವೇಶನದಲ್ಲಿ ಸರ್ಕಾರ ಯಾವುದೇ ಬಂಡವಾಳ ಹೊಸದಾಗಿ ರಾಜ್ಯಕ್ಕೆ ಬಂದಿಲ್ಲ ಮತ್ತು ಒಂದೇ ಒಂದು ಉದ್ಯೋಗ ಸೃಷ್ಟಿ ಆಗಿಲ್ಲ ಎಂಬ ಉತ್ತರ ನೀಡಿದೆ. ಇದು ಬಿಜೆಪಿಯವರ ಸಾಧನೆ.
ಸುಮಾರು ಇಪ್ಪತ್ತು ಸಾವಿರ ಉದ್ಯೋಗ ಸೃಷ್ಟಿ ಮಾಡುತ್ತಿದ್ದ ಓಲಾ ಬೈಕ್ಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ ರಾಜ್ಯದಿಂದ ತಮಿಳುನಾಡಿಗೆ ಹೋಯಿತು. ಕಾರಣ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತವಾದ ವಾತಾವರಣ ಇರಲಿಲ್ಲ. ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಇಲ್ಲದಿರುವುದು ಈ ನಷ್ಟಕ್ಕೆ ಕಾರಣ. ಖ್ಯಾತ ಉದ್ಯಮಿ ಕಿರಣ್ ಮುಜಮ್ದಾರ್ ಬೊಮ್ಮಾಯಿಯವರಿಗೆ ಟ್ವಿಟ್ ಮಾಡಿ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡಿ, ಇಲ್ಲದಿದ್ದರೆ ಬಂಡವಾಳ ಹೂಡಿಕೆ ಸಾಧ್ಯವಿಲ್ಲ ಎಂದಿದ್ದಾರೆ. ಇದರ ಅರ್ಥವೇನು?
ಬಹು ಸ್ವರೂಪದ ಬಡತನಕ್ಕೆ ಸಂಬಂಧಿಸಿದಂತೆ ನೀತಿ ಆಯೋಗದ ಸಮೀಕ್ಷೆಯೊಂದರ ಪ್ರಕಾರ ಕೇರಳ 0.7%, ತಮಿಳುನಾಡು 4.9%, ತೆಲಂಗಾಣ 13.7%, ಆಂದ್ರ ಪ್ರದೇಶ 12.3%, ಕರ್ನಾಟಕ 13.2% ಬಡತನ ಇದೆ. ಕರ್ನಾಟಕ ಬೇರೆಲ್ಲಾ ದಕ್ಷಿಣದ ರಾಜ್ಯಗಳಿಗಿಂತ ಹೆಚ್ಚು ಬಡತನವನ್ನು ಹೊಂದಿದೆ. ಗುಜರಾತ್ 18.6%, ಉತ್ತರ ಪ್ರದೇಶದಲ್ಲಿ 37.8% ಬಡತನ ಇದೆ. ಇದು ಉತ್ತರ ಪ್ರದೇಶ, ಗುಜರಾತ್ ಮಾದರಿ. ಇದು ನಮಗೆ ಬೇಕಾ? ಎಂದವರು ಪ್ರಶ್ನಿಸಿದರು.
ರಾಜ್ಯದಲ್ಲಿ 40% ಸರ್ಕಾರ ಇದೆ ಎಂದು ನಾವು ಕಾಂಗ್ರೆಸ್ ನವರು ಆರೋಪ ಮಾಡ್ತಿಲ್ಲ. ಲಕ್ಷಕ್ಕೂ ಹೆಚ್ಚು ಜನ ಗುತ್ತಿಗೆದಾರರು ಸದಸ್ಯರಾಗಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಬರೆದಿದ್ದಾರೆ. ನಾ ಖಾವೂಂಗಾ, ನಾ ಖಾನೇದುಂಗಾ ಮಾತು ಎಲ್ಲಿ ಹೋಯ್ತು? ಈಗ ಆಪ್ ಖಾವೋ, ಮೈ ಚುಪ್ ಬೇಡ್ತಾ ಹೂ ಆಗಿದೆ ಎಂದರು.
ರಾಜ್ಯದಲ್ಲಿ ಗೃಹ ಸಚಿವ ಸ್ಥಾನಕ್ಕೆ ನಾಲಾಯಕ್ ಆದಂತಹ ವ್ಯಕ್ತಿಯನ್ನ ತಂದು ಬಿಜೆಪಿ ಸರ್ಕಾರ ಕೂರಿಸಿದೆ. ಗೃಹ ಸಚಿವರ ಕೆಲಸ ಶಾಂತಿ ಸುವ್ಯವಸ್ಥೆ ಕಾಪಾಡುವುದು ಆದರೆ, ಒಂದು ಅಪಘಾತವಾಗಿ ಪರಸ್ಪರ ಗುಂಪಿನ ನಡುವೆ ಗಲಾಟೆ ನಡೆದು ಕೊಲೆಯಾಗಿರುವ ಘಟನೆಯನ್ನ ವೈಭವೀಕರಿಸಿ "ಉರ್ದು ಮಾತಾಡು ಎಂದು ಪೀಡಿಸಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡುತ್ತಾರೆ. ಇವರ ಗೃಹ ಸಚಿವರಾಗಲು ಅರ್ಹರಾ? ಇವರಿಗೆ ಪೊಲೀಸ್ ಮೂಲಗಳಿಗಿಂತಲೂ ಕೇಶವ ಕೃಪ, ಹಾವಿನಪುರದ ಮಾಹಿತಿ ಮೂಲದ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಈ ಕೂಡಲೇ ಗೃಹ ಸಚಿವ ಸ್ಥಾನದ ಮೇಲೆ ಗೌರವ ಇದ್ದರೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಯಥಾ ಗುರು ತಥಾ ಶಿಷ್ಯ ಎಂಬಂತೆ ಇಲ್ಲಿನ ಗೃಹ ಸಚಿವರ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಹೇಳಿಕೆ ನೀಡಿದ್ದಾರೆ. ಹಿಂದೆ ಈ ದೇಶದ ಆಡಳಿತ ಭಾಷೆಯಾಗಬೇಕೆಂದು. ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ, ಮಾತೃಭಾಷೆಯ ಘನತೆ, ಗೌರವ ಇಲ್ಲದ ವ್ಯಕ್ತಿಗಳು ಮಾತ್ರ ಈ ಹೇಳಿಕೆ ನೀಡಲು ಸಾಧ್ಯ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹಿಂದಿ ಹೇರಿಕೆಯ ಭಾಗವಾಗಿ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ಇದನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಹಿಂದಿಯ ಗುಲಾಮಗಿರಿಯನ್ನು ಪೋಷಿಸುತ್ತಿರುವ ಕೇಂದ್ರ ಸರ್ಕಾರ ಭಾಷಾವಾರು ಪ್ರಾಂತ್ಯಗಳ ಮೇಲೆ ದಾಳಿ ನಡೆಸುತ್ತಿದೆ. ತಮಿಳಿನಂಥ ಭಾಷೆಗೆ ಕಳೆದ ಏಳು ವರ್ಷಗಳಲ್ಲಿ 50 ಕೋಟಿ ರೂ. ಅನುದಾನವನ್ನು ನೀಡಿದ್ದರೆ, ಕರ್ನಾಟಕಕ್ಕೆ ದಕ್ಕಿರುವುದು ಕೇವಲ 8.39 ಕೋಟಿ. ಆದರೆ ಸಂಸ್ಕೃತ ಭಾಷೆಗೆ ಇದೇ ಅವಧಿಯಲ್ಲಿ 1,200 ಕೋಟಿ ರೂ. ಅನುದಾನ ನೀಡಿದೆ. ಜನಸಮಾನ್ಯರು ಇಂತಹ ವಿಷಯಗಳ ಬಗ್ಗೆ ಪ್ರಶ್ನೆ ಮಾಡಬೇಕಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ಸಿಗ ವೆಂಕಟರಾವ್ ಘೋರ್ಪಡೆ, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಬಿ.ವಿ.ಶಿವಯೋಗಿ, ಕೂಡ್ಲಗಿ ಕಾಂಗ್ರೆಸ್ ಮುಖಂಡ ರಘು ಗುಜ್ಜಲ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.