×
Ad

ನಟ ರವಿಚಂದ್ರನ್ ಸೇರಿ ಮೂವರು ಸಾಧಕರಿಗೆ ಬೆಂಗಳೂರು ನಗರ ವಿವಿಯಿಂದ ಗೌರವ ಡಾಕ್ಟರೇಟ್

Update: 2022-04-09 17:41 IST
ರವಿಚಂದ್ರನ್

ಬೆಂಗಳೂರು, ಎ.9: ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಘಟಿಕೋತ್ಸವ ಸೋಮವಾರ(ಎ.11) ನಡೆಯಲಿದ್ದು, ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ನಟ ವಿ.ರವಿಚಂದ್ರನ್ ಸೇರಿ ಹಲವು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

ಶನಿವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗರಾಜ ಗಾಂಧಿ,  ಪ್ರಥಮ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿನ ಗೌರವ ಡಾಕ್ಟರೇಟ್ ಪ್ರದಾನಿಸಲಾಗುತ್ತಿದ್ದು, ಅದರಂತೆ, ಸಮಾಜ ಸೇವಕ ಎಂ.ಆರ್.ಜೈಶಂಕರ್, ಕನ್ನಡ ಚಿತ್ರರಂಗದ ನಟ ವಿ.ರವಿಚಂದ್ರನ್, ಮಣಿಪಾಲ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸತ್ಯನಾರಾಯಣ ಅವರಿಗೆ ಈ ಬಾರಿಯ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದರು.

ಘಟಿಕೋತ್ಸವ ಸಮಾರಂಭ ಸೋಮವಾರ ಬೆಳಗ್ಗೆ 10:30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು, ಪದ್ಮವಿಭೂಷಣ ಡಾ.ಕೆ.ಕಸ್ತೂರಿ ರಂಗನ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.

ಪ್ರಥಮ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 41,768  ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, ಈ ಪೈಕಿ 14,823 ಪುರುಷ ಹಾಗೂ 26,945 ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಸ್ನಾತಕ ಪದವಿಗೆ ಒಟ್ಟು 29,240 ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.

ಅದೇ ರೀತಿ, ಸ್ನಾತಕೋತ್ತರ ಪದವಿಗೆ ಒಟ್ಟು 12,528 ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ ಎಂದ ಅವರು, ಈ ಘಟಿಕೋತ್ಸವದಲ್ಲಿ ಒಟ್ಟು 84 ಪ್ರಥಮ ದರ್ಜೆ ಪ್ರಮಾಣ ಪತ್ರ ಪಡೆಯಲಿದ್ದಾರೆ. ಹಾಗೇ 32 ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ಸಾಲಿನ ಅನ್ವಯ ಚಿನ್ನದ ಪದಕ ಮತ್ತು ನಗದು ಬಹುಮಾನ ಸ್ವೀಕರಿಸಲಿದ್ದಾರೆ. ಜೊತೆಗೆ ವಿವಿಧ ದಾನಿಗಳು ಸ್ಥಾಪಿಸಿರುವ ಒಟ್ಟು 7 ಚಿನ್ನದ ಪದಕಗಳನ್ನು ಸಹ ವಿದ್ಯಾರ್ಥಿಗಳು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿ ವಿವಿಯ ರಿಜಿಸ್ಟ್ರಾರ್ ಸಿ.ಎನ್.ಶ್ರೀಧರ್, (ಮೌಲ್ಯಮಾಪನ) ರಿಜಿಸ್ಟ್ರಾರ್ ಬಿ.ರಮೇಶ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News