ಎ. 11ರಂದು ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ
ಕಾಪು : ಕಾಪು ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ನಿವೇಶನ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಪು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಎಪ್ರಿಲ್ 11ರಂದು ಬೆಳಿಗ್ಗೆ 10 ಕ್ಕೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ನಿವೇಶನ ರಹಿತರಿಗೆ ಒಂದೇ ಒಂದು ನಿವೇಶನ ನೀಡಲು ಸಾಧ್ಯವಾಗದ ಸರ್ಕಾರದ ಬಡಜನ-ವಿರೋಧಿ ನಿಲುವನ್ನು ವಿರೋಧಿಸಿ, ಅಕ್ರಮ-ಸಕ್ರಮಕ್ಕಾಗಿ 94 ಸಿ/ 94ಸಿ ಸಿ ಯಡಿ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರವೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ, ವಾಸಿಸಲು ಸೂರಿಲ್ಲದೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಶಿರ್ವ ಗ್ರಾಮದ ವೃದ್ಧ, ಬಡ-ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದು ಮನೆಯನ್ನು ನೆಲಸಮಗೊಳಿಸಿ ಬೀದಿಪಾಲಾಗಿಸಿದ ಅಮಾನವೀಯ ನಡೆಯನ್ನು ಖಂಡಿಸಿ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ, ಅದೇ ಸ್ಥಳದಲ್ಲಿ ಮನೆಯನ್ನು ಪುನರ್ನಿರ್ಮಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನಾ ಜಾಥಾ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಳಿಗ್ಗೆ ಘಂಟೆ 9.30ಕ್ಕೆ ಕಾಪು ರಾಜೀವ್ ಭವನದಲ್ಲಿ ಸಮಾವೇಶಗೊಂಡು, ಅಲ್ಲಿಂದ ತಾಲೂಕು ಕಚೇರಿಯವರೆಗೆ ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ನಡೆಯಲಿದೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.