ಬೆಂಗಳೂರು: ಮಗುವನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ
ಆನೇಕಲ್, ಎ.10: ತನ್ನ ಅಣ್ಣನ ಎರಡು ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರಗೈದು ಮಗುವಿನ ಸಾವಿಗೆ ಕಾರಣನಾದ ಪ್ರಕರಣದ ಆರೋಪದಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದ ಆರೋಪಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ.
ಅತ್ತಿಬೆಲೆ ನೆರಳೂರಿನ ನಿವಾಸಿ ದೀಪು (31) ಆತ್ಮಹತ್ಯೆ ಮಾಡಿಕೊಂಡ ಕೈದಿ. ಈತ ರವಿವಾರ ಮುಂಜಾನೆ 5:25ರ ಸುಮಾರಿಗೆ ಸ್ನಾನದ ಕೋಣೆಯಲ್ಲಿ ಬೆಡ್ ಶೀಟ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಕಳೆದ ತಿಂಗಳು ಆರೋಪಿ ದೀಪು ದೊಡ್ಡಬಳ್ಳಾಪುರದಲ್ಲಿರುವ ತನ್ನ ಅಣ್ಣನ ಎರಡುವ ವರ್ಷದ ಮಗಳನ್ನು ತಾನು ವಾಸಿಸುತ್ತಿದ್ದ ಅತ್ತಿಬೆಲೆ ಬಳಿಯ ನೆರಳೂರು ಗೇಟ್ ಗೆ ಕರೆತಂದಿದ್ದನೆನ್ನಲಾಗಿದೆ. ಬಳಿಕ ಚಿಕನ್ ತರಲು ಸ್ನೇಹಿತನ ಜೊತೆ ಹೋಗುವ ವೇಳೆ ಮಗುವನ್ನು ಕಾರಿನಲ್ಲಿ ಕರೆದೊಯ್ದಿದ್ದ. ದಾರಿಮಧ್ಯೆ ಸ್ನೇಹಿತನನ್ನು ಮದ್ಯ ತರಲು ಕಳುಹಿಸಿ ಕಾರಿನಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದನೆನ್ನಲಾಗಿತ್ತು. ಪೈಶಾಚಿಕ ಕೃತ್ಯದಿಂದ ಮಗು ಮೃತಪಟ್ಟಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.