×
Ad

ಅತಿ ಹೆಚ್ಚು ತೆರಿಗೆ ಕಟ್ಟಿದರೂ ದಿಲ್ಲಿಯಿಂದ ಬೆಂಗಳೂರಿನ ಕಡೆಗಣನೆ !

Update: 2022-04-10 16:05 IST
ಮೋಹನದಾಸ್ ಪೈ (PTI)

ಬೆಂಗಳೂರು: ಪ್ರಭಾವೀ ಉದ್ಯಮಿ ಹಾಗೂ ಬಿಜೆಪಿ, ಬಲಪಂಥೀಯ ಕಟ್ಟಾ ಬೆಂಬಲಿಗ ಮೋಹನದಾಸ ಪೈ, ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕೊರತೆಯ ಬಗ್ಗೆ ದನಿಯೆತ್ತಿ ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರಗಳಿಗೆ  ಇರಿಸು-ಮುರಿಸು ತಂದಿಟ್ಟಿದ್ದಾರೆ.

"2021-22 ನೇ ಸಾಲಿನಲ್ಲಿ ಬೆಂಗಳೂರು ಎರಡನೇ ಅತಿ ಹೆಚ್ಚು 1.69 ಲಕ್ಷ  ಕೋಟಿ ತೆರಿಗೆ ಪಾವತಿಸಿದೆ, ಆದರೂ ನಾವು ದಿಲ್ಲಿಯಿಂದ ಕಡೆಗಣಿಸಲ್ಪಟ್ಟಿದ್ದೇವೆ. ನಮ್ಮ ರಸ್ತೆಗಳು ಕೆಟ್ಟದಾಗಿವೆ, ಟ್ರಾಫಿಕ್‌ ಸಮಸ್ಯೆ ಇದೆ, ಜೀವನ ಗುಣಮಟ್ಟ ಕುಸಿದಿದೆ" ಎಂದು ಮೋಹನ ದಾಸ್‌ ಪೈ ಟ್ವೀಟ್‌ ಮಾಡಿದ್ದರು, ಮಾತ್ರವಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಅವರು  ಮಧ್ಯಪ್ರವೇಶಿಸಿ ಸಹಾಯ ಮಾಡುವಂತೆಯೂ ಮನವಿ ಮಾಡಿದ್ದಾರೆ. ಜೊತೆ ಸಿಎಂ ಬೊಮ್ಮಾಯಿ, ವಿತ್ತ ಸಚಿವೆ ನಿರ್ಮಲ ಸೀತಾರಾಮನ್, ಸಚಿವ ನಿತಿನ್ ಗಡ್ಕರಿ ಅವರನ್ನೂ ಟ್ಯಾಗ್ ಮಾಡಿದ್ದಾರೆ.  

ಇದಕ್ಕೆ ಹಲವು ಬೆಂಗಳೂರಿಗರು ಪ್ರತಿಕ್ರಿಯಿಸಿದ್ದು, "ಇದು ಸತ್ಯ. ಬೆಂಗಳೂರು ನಗರದ ರಸ್ತೆಗಳು ಹಿಂದಿನಿಂದಲೂ ಕೆಟ್ಟು ಹೋಗಿವೆ. ಜತೆಗೆ ವಿದ್ಯುತ್ ಕಡಿತ, ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಎಲ್ಲದಕ್ಕೂ ನಾಗರಿಕರು ಇಷ್ಟೊಂದು ತೆರಿಗೆ ಕಟ್ಟುತ್ತಿದ್ದರೂ ಮೂಲ ಸೌಕರ್ಯಗಳು ಏಕೆ ಸುಧಾರಿಸಿಲ್ಲ ಎಂಬುದು ಅರ್ಥವಾಗುತ್ತಿಲ್ಲ?ʼ ಎಂದು ಅಮಿತ್‌ ಕುಮಾರ್‌ ಚಿರಿಪಾಲ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಅದಾಗ್ಯೂ, ಸರ್ಕಾರವನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡದಿರುವ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದೆ. "ಪೈ ಮತ್ತು ಇತರ ಬೆಂಗಳೂರಿನ ಪ್ರಭಾವಿ ನಾಗರಿಕರು ಸರ್ಕಾರವನ್ನು ನೇರವಾಗಿ ಪ್ರಶ್ನಿಸುವ ಧೈರ್ಯವನ್ನು ಹೊಂದಿಲ್ಲ ಮತ್ತು ಹೊಣೆಗಾರರನ್ನು ಹೆಸರಿಸದೆ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ. ಹಾಗಾಗಿ ಸರ್ಕಾರವು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ." ಎಂದು ಅಜಯ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

ʼಬೆಂಗಳೂರಿನಿಂದಲೇ ಜಿಎಸ್‌ಟಿ ಆದಾಯವಾಗಿ 60,000 ಕೋಟಿ ರೂ. ಸಂಗ್ರಹವಾಗಿದೆ, ನಾಚಿಕೆಗೇಡಿನ ಬಿಬಿಎಂಪಿ ಬಜೆಟ್ ಕೇವಲ 10,000 ಕೋಟಿ ರೂ. ಇದೆ. ಮತ್ತು ಉಳಿದೆಲ್ಲವೂ ಯುಪಿ ಮತ್ತು ಬಿಹಾರಕ್ಕೆ ಹರಿದುಬಂದಿದೆʼ ಎಂದು @I_LOVE_BLR ಖಾತೆದಾರರು ಟ್ವೀಟ್‌ ಮಾಡಿದ್ದಾರೆ.

ಇನ್ನು ಶ್ರೀವತ್ಸ ಎಂಬವರು ಪ್ರತಿಕ್ರಿಯಿಸಿ, ಇದು ಪ್ರಾಥಮಿಕವಾಗಿ ಬಿಬಿಎಂಪಿಯ ಕರ್ತವ್ಯ, ಬಿಬಿಎಂಪಿ ತನ್ನ ನಾಗರಿಕರನ್ನು ವಿಫಲಗೊಳಿಸಿದೆ. ನನಗೆ ಯಾವುದೇ ಭರವಸೆಗಳು ಕಾಣಿಸುತ್ತಿಲ್ಲ. ಬಿಬಿಎಂಪಿಯನ್ನು ಸ್ವಚ್ಛಗೊಳಿಸುವುದು ನಮ್ಮ ಕೇಂದ್ರ ಸಚಿವರಿಗೆ/ಬಿಜೆಪಿಗೆ ಸಣ್ಣ ಕೆಲಸ, ಅಥವಾ ಅದರ ಆಂತರಿಕ ಚಲನೆಶೀಲತೆಯಿಂದ ಅವರ ಸಾಮರ್ಥ್ಯವನ್ನು ಮೀರಿದೆ ಎಂದು ಬರೆದಿದ್ದಾರೆ.

 “ನಗರದ ರಸ್ತೆಗಳ ಜವಾಬ್ದಾರಿ ಇಲ್ಲಿ ರಾಜ್ಯ ಸರ್ಕಾರ ಮತ್ತು ಪುರಸಭೆಯ ಅಂದರೆ ಬಿಬಿಎಂಪಿಯದ್ದಲ್ಲವೇ? ಕೇಂದ್ರ ಸರ್ಕಾರವೇ ಎಲ್ಲವನ್ನೂ ಮಾಡಬೇಕಾದರೆ ನಮಗೆ ಇತರ ಫೆಡರಲ್ ಸಂಸ್ಥೆಗಳು ಏಕೆ ಬೇಕು?” ಎಂದು ಮಲ್ಹಾರ್‌ ಅಂಜಾರಿಯಾ ಎಂಬವರು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಾಮ್‌, “ಕೇಂದ್ರವು ತೆರಿಗೆ ಸಂಗ್ರಹಿಸಿ ರಾಜ್ಯಗಳಿಗೆ ಹಂಚುತ್ತದೆ. ಇದು ಬೆಂಗಳೂರಿನಿಂದ ಬೃಹತ್ ತೆರಿಗೆಯನ್ನು ಸಂಗ್ರಹಿಸುತ್ತದೆ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಕಡಲೆಕಾಯಿಯನ್ನು ನೀಡುತ್ತದೆ (ಅಂದರೆ ಸಣ್ಣ ಪ್ರಮಾಣವನ್ನು ನೀಡುತ್ತದೆ). ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ್ ಕರ್ನಾಟಕದಲ್ಲಿ ವಿಫಲಗೊಂಡಿದೆ. ಚುನಾವಣಾ ವರ್ಷವಾದರೂ ಕರ್ನಾಟಕಕ್ಕೆ ಕೇಂದ್ರದಿಂದ ಬೆಂಬಲ ಸಿಗುತ್ತಿಲ್ಲʼ ಎಂದು ಬರೆದಿದ್ದಾರೆ.

ಒಟ್ಟಾರೆ, ಬಿಜೆಪಿ ಬೆಂಬಲಿಗರೇ ಆಗಿರುವ ಮೋಹನ್‌ ದಾಸ್‌ ಪೈ ಅವರು ಬೆಂಗಳೂರಿನ ಮೂಲಭೂತ ಸೌಕರ್ಯದ ಕೊರತೆ ಬಗ್ಗೆ ಎತ್ತಿರುವ ಪ್ರಶ್ನೆಯು ಟ್ವಿಟರಿನಲ್ಲಿ ಚರ್ಚೆಯನ್ನು ಸೃಷ್ಟಿಸಿದೆ. ಇದು ಅನಿವಾರ್ಯವಾಗಿ ಮುಖ್ಯಮಂತ್ರಿ ಬೊಮ್ಮಾಯಿಯೇ ಈ ಬಗ್ಗೆ ಪ್ರತಿಕ್ರಿಯಿಸುವಂತೆ ಒತ್ತಡ ಹಾಕಿದೆ.

ಮಳೆಗಾಲ ವಿಸ್ತರಿಸಿದ್ದರಿಂದ ಹಿಂದೆ ಸ್ವಲ್ಪ ತೊಂದರೆ ಇತ್ತು. ಇದೀಗ ರಸ್ತೆಗಳು ಸಾಕಷ್ಟು ಸುಧಾರಣೆಯಾಗುತ್ತಿವೆ. ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ಅನುದಾನ ಬಿಡುಗಡೆಯಾಗಿದೆ. ಬಿಬಿಎಂಪಿ ಬಜೆಟ್‌ ಕೂಡ ಮಂಡನೆಯಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆಗಳು ಸುಧಾರಣೆಯಾಗುತ್ತವೆ ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಮೋಹನ್‌ ದಾಸ್‌ ಅವರು ಆತಂಕಪಡಬೇಕಿಲ್ಲ, ನಾನು ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದಾಗಿಯೂ ಬೊಮ್ಮಾಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News