ಕೋಮುವಾದ, ಹಿಂಸೆ ವಿರೋಧಿಸಿ ಹೊಸತನದೊಂದಿಗೆ ಮಾನವೀಯ ಸಮಾಜ ಕಟ್ಟಬೇಕು: ಲಕ್ಷ್ಮಿ ನಾರಾಯಣ ನಾಗವಾರ
ವಿಜಯಪುರ, ಎ. 10: ‘ಕೋಮುವಾದ, ಹಿಂಸೆ ವಿರೋಧಿಸಿ, ಹೊಸತನದೊಂದಿಗೆ ಮಾನವೀಯ ಸಮ ಸಮಾಜವನ್ನು ಕಟ್ಟಲು ಎಲ್ಲರನ್ನು ನಾವು ಅಣಿಗೊಳಿಸಬೇಕು' ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಇಂದಿಲ್ಲಿ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ನಿಡಗುಂದಿ ತಾಲೂಕಿನ ಆಲಮಟ್ಟಿ ಕೆಬಿಜೆಎನ್‍ಎಲ್ ಸಮುದಾಯ ಭವನದಲ್ಲಿ ದಸಂಸ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ದಲಿತರ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರ, ದೌರ್ಜನ್ಯ ಘಟನೆಗಳಾದ ಸಂದರ್ಭದಲ್ಲಿ ಸಂಘ ಪರಿವಾರದ ಯಾವುದೇ ಸಂಘಟನೆಗಳು ಬರುವುದಿಲ್ಲ. ಆದರೆ, ಮುಸ್ಲಿಮರ ವಿಚಾರಗಳು ಬಂದಾಗ ಮಾತ್ರ ‘ಹಿಂದೂ ನಾವೆಲ್ಲ ಒಂದು' ಎನ್ನುವ ಅಂಶವನ್ನು ಹೊರತಂದು ನಮ್ಮೊಳಗಿನ ಮಾನವೀಯತೆ ತೊರೆದು ಮೃಗಗಳಾಗಿಸಿ ತಮ್ಮ ಇಚ್ಚೆಯ ಆಸೆಯನ್ನು ಈಡೇರಿಸಿಕೊಳ್ಳಲು ನಮ್ಮನ್ನು ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ' ಎಂದು ಎಚ್ಚರಿಸಿದರು.
‘ದಲಿತ ಸಮುದಾಯದ ಸಂಘಟನೆಗಳು ಮಾದಿಗ ದಂಡೋರ, ಛಲವಾದಿ ಮಹಾಸಭಾ ಅಥವಾ ಇನ್ಯಾವುದೇ ಇರಬಹುದು. ದಲಿತರ ಸಮಸ್ಯೆ ಎದುರಾದಾಗ ದಲಿತ ಸಂಘರ್ಷ ಸಮಿತಿ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಾರೆ. ನಾವು ಏನೂ ಮಾಡಿಲ್ಲ. ಆದರೆ ನಮ್ಮನ್ನು ಪ್ರಶ್ನಿಸುವ ಮೊದಲು ನೀವು ಏನು ಮಾಡಿರುವಿರಿ ಅದನ್ನು ಹೇಳಿ ಎಂದು ಪ್ರಶ್ನೆ ಕೇಳಲು ಮುಂದಾಗಬೇಕು' ಎಂದು ಅವರು ತಿಳಿಸಿದರು.
‘ಕೋಮುವಾದಿ ಸಂಘ ಪರಿವಾರದವರು ದಲಿತರನ್ನು ನಾಯಿ-ನರಿಗಳಂತೆ ಕಾಣುವ ಮನುಸ್ಮೃತಿಯನ್ನು ಜಾರಿಗೆ ತರಲು ನಮ್ಮನ್ನೆ ಬಳಸಿ ನಮ್ಮನ್ನೆ ತುಳಿಯಲು ಸಂಚು ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ಹತ್ತಿಕ್ಕಲು ಪ್ರಜೆಗಳ ಹಕ್ಕನ್ನು ಕಸಿಯಲು ಹಿಜಾಬ್, ಹಲಾಲ್‍ನಂತಹ ವಿಚಾರಗಳನ್ನು ತಂದು ನಮ್ಮ ಧ್ವನಿಯ ದಿಕ್ಕನ್ನು ಬದಲಿಸಿ ಹಿಂದಿನ ಸರಕಾರಗಳು ನೀಡಿದ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ನಿಲ್ಲಿಸುತ್ತಿದ್ದಾರೆ' ಎಂದು ಅವರು ವಾಗ್ದಾಳಿ ನಡೆಸಿದರು.
ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಿದ್ದು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಜನರ ಜೀವನದ ಮೇಲೆ ಬರೆ ಎಳೆಯುವುದರೊಂದಿಗೆ ಮಾನವೀಯ ಮೌಲ್ಯವನ್ನು ಹೊರ ದೂಡಿ ಕೋಮುವಾದದ ಹಳ್ಳಕೆ ನೂಕುತ್ತಿದ್ದಾರೆ. ದಲಿತರ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದಾರೆ. ಮತಾಂತರ ಆಗುತ್ತಿರುವವರೆಲ್ಲ ಶೋಷಿತರು. ಅದರಲ್ಲೂ ಕ್ರೈಸ್ತ ಹಾಗೂ ಬೌದ್ದ ಧರ್ಮಕ್ಕೆ ಸೇರುತ್ತಿದ್ದಾರೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಮೂಲಕ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇದರ ವಿರುದ್ಧ ದಲಿತರ ಕಷ್ಟ, ನೋವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಚಳವಳಿ ಕಟ್ಟಬೇಕು ಎಂದು ಅವರು ಕರೆ ನೀಡಿದರು.
ನಿರ್ಣಯಗಳು: ‘ಮೇಲ್ಜಾತಿಯವರು ಮಡಿ ಮೈಲಿಗೆ ಎಂದು ಮಡಿವಂತರು ಕೊಟ್ಟ ಎಸ್ಸಿ-ಎಸ್ಟಿ ಜಾತಿ ಪ್ರಮಾಣಪತ್ರಗಳ ಪಡೆದುಕೊಂಡ ಪ್ರಕರಣಗಳನ್ನು ಉನ್ನತ ಮಟ್ಟದ ತನಿಖೆ ಮಾಡಿ, ತಪ್ಪಿತಸ್ಥರನ್ನ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಶಿಕ್ಷಣದ ಹೊಸ ನೀತಿ ರದ್ದುಪಡಿಸಬೇಕು. ವೀರ ವನಿತೆ ಒನಕೆ ಓಬವ್ವನ ಪ್ರತಿಮೆಗಳ ವೃತ್ತ ನಿರ್ಮಿಸಬೇಕು. ಅಂಬೇಡ್ಕರ್ ನಿಗಮದಿಂದ ಭೂಮಿ ಖರೀದಿ ಯೋಜನೆಯಲ್ಲಿ ಭೂಮಿ ಮಾರಾಟ ಮಾಡಲು ಅರ್ಜಿ ಸಲ್ಲಿಸಿದ 6 ತಿಂಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಭೂಮಿ ಖರೀದಿ ಮಾಡಬೇಕು. ಅಂಬೇಡ್ಕರ್ ನಿಗಮಕ್ಕೆ ವಿವಿಧ ಯೋಜನೆಯ ಬಗ್ಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.
ಎಸ್ಸಿ-ಎಸ್ಟಿ ಆದಾಯದ ಮಿತಿಯನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಶಿಷ್ಯವೇತನ ಬೆಲೆ ಏರಿಕೆಗೆ ತಕ್ಕಂತೆ ಹೆಚ್ಚಿಸಬೇಕು ಮತ್ತು ಕೂಡಲೇ ಮಂಜೂರು ಮಾಡಬೇಕು. ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗಬೇಕು. ನಗರಸಭೆ, ಪುರಸಭೆ, ಮಹಾನಗರ ಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಕೂಡಲೇ ಖಾಯಂಗೊಳಿಸಬೇಕು' ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.