ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆಯಂತಹ ದಿನಬಳಕೆ ವಸ್ತುಗಳು, ರೈತರ ರಸಗೊಬ್ಬರದಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಕಬ್ಬಿಣ, ಸಿಮೆಂಟ್ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಬದುಕನ್ನು ದುಸ್ತರ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ, ‘ಬೆಲೆ ಏರಿಕೆ ಮುಕ್ತ ಭಾರತ’ಕ್ಕೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.
ಅಖಿಲ ಭಾರತ ಕಾಂಗ್ರೆಸ್ ಬೆಲೆ ಏರಿಕೆ ಖಂಡಿಸಿ ದೇಶಾದ್ಯಾಂತ ನಡೆಸಿದ ಆಂದೋಲದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಿತು. ಈ ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ರಮಿಂದರ್ ಸಿಂಗ್ ಅವ್ಲಾ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿಧಾನಸಭೆ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಧೃವನಾರಾಯಣ, ಈಶ್ವರ್ ಖಂಡ್ರೆ, ಮಾಜಿ ಸಚಿವರುಗಳಾದ ಕೃಷ್ಣ ಭೈರೇಗೌಡ, ಕೆ.ಜೆ ಜಾರ್ಜ್ ಹಾಗೂ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ. ನಮ್ಮ ರಾಷ್ಟ್ರೀಯ ನಾಯಕರು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದ್ದರು. ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ, ಪತ್ರಿಕಾಗೋಷ್ಠಿಗಳನ್ನು ನಡೆಸಲಾಗಿದೆ. ರಾಜ್ಯಮಟ್ಟದ ಪ್ರತಿಭಟನೆಯನ್ನು ಮೆರವಣಿಗೆ ಮೂಲಕ ಮಾಡಬೇಕು ಎಂದು ತೀರ್ಮಾನಿಸಿದ್ದೆವು. ಆದರೆ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಅದಕ್ಕೆ ಗೌರವ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ನಾವೆಲ್ಲರೂ ಇಂದು ಬೆಲೆ ಏರಿಕೆ ವಿರುದ್ಧ ಮಾತನಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಚುನಾವಣೆ ಗೆದ್ದ ನಂತರ ಬಡವರ ಲೂಟಿಗೆ ಇಳಿದಿದೆ. ಪಂಚರಾಜ್ಯ ಚುನಾವಣೆ ನಂತರ ಪ್ರತಿ ನಿತ್ಯ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದರೆ ಆದಾಯ ಮಾತ್ರ ಪಾತಾಳಕ್ಕೆ ಹೋಗುತ್ತಿದೆ. ಮೋದಿ ಅವರು ಎಲ್ಲ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ನಾನು ಹೋದ ಕಡೆಯೆಲ್ಲಾ ಕೇಳುತ್ತಿದ್ದೇನೆ. ಎಲ್ಲರೂ ನಮ್ಮ ಆದಾಯ ಕುಸಿದಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ಆದಾಯ ಹೆಚ್ಚಾಗಿದೆ ಎಂದು ಯಾರೂ ಹೇಳಿಲ್ಲ.
ದೇಶದ 17 ಸಾವಿರ ಉದ್ದಿಮೆದಾರರು ಈ ಸರ್ಕಾರದ ಕಿರುಕುಳ ತಾಳಲಾರದೆ ದೇಶ ತೊರೆದು ಆಸ್ಟ್ರೇಲಿಯಾ, ಸೌದಿ, ಕೆನಡಾಕ್ಕೆ ಹೋಗುತ್ತಿದ್ದಾರೆ. ಪ್ರತಿ ವ್ಯಕ್ತಿಯೂ ಈ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿದ್ದಾನೆ. ಸಣ್ಣ ಬೈಕು, ಕಾರು ಇಟ್ಟುಕೊಂಡ ಕುಟುಂಬಕ್ಕೆ ದಿನಕ್ಕೆ 100 ರೂ, ವೆಚ್ಚ ಹೆಚ್ಚಾಗಿದೆ. ಅಡುಗೆ ಅನಿಲ 410 ರಿಂದ 1000 ಆಗಿದೆ, ಪೆಟ್ರೋಲ್ 68 ರಿಂದ 111 ಆಗಿದೆ, ಡೀಸಲ್ 57 ರಿಂದ 97 ರೂ. ಆಗಿದೆ. ಅಡುಗೆ ಎಣ್ಣೆ 90 ರಿಂದ 210 ಆಗಿದೆ. ಗೊಬ್ಬರ 150 ರೂ. ಹೆಚ್ಚಾಗಿದೆ. ಹಾಲು ಶೇ. 20 ರಷ್ಟು, ವಿದ್ಯುತ್ ಬೆಲೆ ಹೆಚ್ಚಾಗುತ್ತಿದೆ. ಬಟ್ಟೆ ಬೆಲೆ ಶೇ. 20 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.