ಸಾವಿನ ಮನೆಯಲ್ಲೂ ಬಿಜೆಪಿ ರಾಜಕೀಯ: ಶಾಸಕ ಝಮೀರ್ ಅಹ್ಮದ್ ಖಾನ್ ವಾಗ್ದಾಳಿ

Update: 2022-04-11 12:03 GMT

ಬೆಂಗಳೂರು, ಎ. 11: ‘ಆಡಳಿತಾರೂಢ ಬಿಜೆಪಿ ಸಾವಿನ ಮನೆಯಲ್ಲಿಯೂ ರಾಜಕೀಯ ಮಾಡುತ್ತಿದೆ. ನಾವು ಪಾಕಿಸ್ತಾನದ ಮುಸ್ಲಿಮರಲ್ಲ. ನಾವು ಭಾರತೀಯ ಮುಸ್ಲಿಮರು. ಶಾಂತಿ, ಸಹೋದರತೆ, ಸಹಬಾಳ್ವೆ ನಮ್ಮ ಮೊದಲ ಆದ್ಯತೆಯಾಗಿದೆ' ಎಂದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಕ್ಷೇತ್ರದ ಹಾಲಿ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಗೌರವದಿಂದ ಇಲ್ಲಿ ಬಾಳುತ್ತಿದ್ದೇವೆ. ಮುಂದೆಯೂ ಗೌರವಯುತವಾಗಿ ಇರುತ್ತೇವೆ. ನಾವು ಯಾರೂ ಪಾಕಿಸ್ತಾನದಿಂದ ಭಾರತಕ್ಕೆ ಬಂದವರಲ್ಲ. ನಾವು ಭಾರತೀಯ ಮುಸ್ಲಿಮರು. ಹಿಂದಿನಿಂದಲೂ ಚಾಮರಾಜಪೇಟೆಯಲ್ಲಿ ನಾನು ಶಾಸಕನಾಗಿರುವುದಕ್ಕಿಂತ ಮುಂಚೆ ಒಂದಲ್ಲ ಒಂದು ರೀತಿಯಲ್ಲಿ ಗಲಭೆಗಳು, ಕೋಮು ಸಂಘರ್ಷಗಳು ನಡೆಯುತ್ತಿದ್ದವು, ಆದರೆ ಈಗ ನಾನು ಶಾಸಕನಾದ ಮೇಲೆ ಒಂದೇ ಒಂದು ಗಲಭೆಗಳು ಇಲ್ಲಿ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದರು.

ನಮ್ಮ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರು ಒಟ್ಟಿಗೆ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದು, ಕ್ಷೇತ್ರ ಶಾಂತಿಯುತವಾಗಿರುವುದನ್ನು ಗಮನಿಸಿದ ಬಿಜೆಪಿ ಮುಖಂಡರು ಇಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಗಲಭೆಯನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಚಂದ್ರುವಿನ ಕೊಲೆಯನ್ನು ರಾಜಕಾರಣಕ್ಕೆ ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಆದರೆ, ನಾವು ಯಾವುದೇ ಕಾರಣಕ್ಕೂ ಇದನ್ನು ಮಾಡಲು ಬಿಡುವುದಿಲ್ಲ. ಮುಂಬರುವ ದಿನಗಳಲ್ಲಿ ಚಾಮರಾಜಪೇಟೆ ಇನ್ನಷ್ಟು ಶಾಂತಿಯ ನೆಲೆವೀಡು ಆಗಲಿದೆ. ಚಂದ್ರು ಸಾವಿನ ನಂತರ ತನಿಖೆ ನಡೆಸಿದಂತಹ ನಗರ ಪೊಲೀಸ್ ಆಯುಕ್ತರು ಇದೊಂದು ಕೊಲೆ. ಬೈಕ್ ಢಿಕ್ಕಿ ವಿಚಾರಕ್ಕೆ ಗಲಾಟೆ ಆಗಿ ನಡೆದಂತಹ ಕೊಲೆ ಎಂದು ತಿಳಿಸಿದ್ದಾರೆ. ಆದರೆ ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ತಂತ್ರಕ್ಕೆ ಕ್ಷೇತ್ರದ ಮತದಾರರು ಮಣಿಯಬಾರದು. ಶಾಂತಿ ಸಹಬಾಳ್ವೆಯಿಂದ ನಾವು ಇರಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News