×
Ad

ಬಿಜೆಪಿಯಿಂದ ಇಡೀ ಸಮಾಜಕ್ಕೆ ಬೆಂಕಿ: ಸಿದ್ದರಾಮಯ್ಯ ವಾಗ್ದಾಳಿ

Update: 2022-04-11 19:11 IST

ಬೆಂಗಳೂರು, ಎ.11: ಬಿಜೆಪಿ ಪಕ್ಷದಿಂದ ಬರೀ ಕಾಂಗ್ರೆಸ್‍ಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಬೆಂಕಿ ಬಿದ್ದಿದ್ದು, ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ಫ್ರೀಡಂ ಪಾರ್ಕ್ ಮೈದಾನದಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಇಂಧನ ಹಾಗೂ ಅಗತ್ಯ ವಸ್ತುಗಳ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಜೆಪಿ ಬೆಂಬಲಿಸುವವರಿಗೂ ಹೇಳುತ್ತಿದ್ದೇನೆ, ಬಿಜೆಪಿ ಲೂಟಿ ಮಾಡುತ್ತಿದೆ. ಇದು ಕಾಂಗ್ರೆಸ್ ಮನೆಗೆ ಮಾತ್ರ ಬಿದ್ದಿರುವ ಬೆಂಕಿಯಲ್ಲ, ಇಡೀ ಸಮಾಜ, ದೇಶದಲ್ಲಿ ದರೋಡೆ ಆಗುತ್ತಿದೆ. ಹೀಗಾಗಿ, ನಿಮಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಬಿಜೆಪಿಯಿಂದ ಮುಕ್ತವಾಗಬೇಕಾದರೆ, ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಅವರು ಕರೆ ನೀಡಿದರು.

ನಾವು ಉಳುವವನೇ ಭೂಮಿಯ ಒಡೆಯ ಮಾಡಿದರೆ, ನೀವು ಉಳ್ಳವನೆ ಭೂಮಿಯ ಒಡೆಯ ಮಾಡಿದ್ದೀರಿ. ಈ ರೀತಿ ಆದರೆ ಬಡವರು ಉಳಿಯುತ್ತಾರಾ ಎಂದು ಪ್ರಶ್ನಿಸಿದ ಅವರು, ದಲಿತರು, ಹಿಂದುಳಿದವರು, ಮಹಿಳೆಯರು, ರೈತರನ್ನು ಹಾಳು ಮಾಡುತ್ತಿದ್ದೀರಿ. ಜತೆಗೆ, ಎಲ್ಲರ ಮನೆಗೂ ಬೆಂಕಿ ಬಿದ್ದಿದ್ದೆ. ಈ ಬೆಂಕಿ ಆರಿಸುವುದು ಕಾಂಗ್ರೆಸ್ ಜವಾಬ್ದಾರಿ ಎಂದು ಸಿದ್ದರಾಮಯ್ಯ ನುಡಿದರು.

ಈ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 11 ಕೋಟಿ ಉದ್ಯೋಗ ನೀಡುತ್ತಿದ್ದವು, ಈಗ ಅವುಗಳು 2.5 ಕೋಟಿ ಉದ್ಯೋಗ ಮಾತ್ರ ನೀಡುತ್ತಿವೆ. ಯುವಕರು ಉದ್ಯೋಗ ಕೇಳಿದರೆ ಪಕೋಡ ಮಾರಲು ಹೋಗಿ ಎಂದು ಹೇಳುತ್ತೀರಲ್ಲ ಮೋದಿ ಅವರೇ, ನಿಮಗೆ ಮಾನ ಮರ್ಯಾದೆ ಇದೆಯೇ ಎಂದು ಟೀಕಿಸಿದರು.

ಯುವಕರು ಗೊತ್ತಿಲ್ಲದೇ ಮೋದಿ ಮೋದಿ ಎಂದರು. ಅವರ ಹೊಟ್ಟೆ ಮೇಲೆ ಹೊಡೆದಿರಲ್ಲಾ. ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಇಲ್ಲಿನ ಬೊಮ್ಮಾಯಿ ಸರಕಾರ ಇದನ್ನು ಮುಚ್ಚಿಕೊಳ್ಳಲು ಹಿಜಾಬ್, ಹಲಾಲ್, ಭಗವದ್ಗೀತೆ, ವ್ಯಾಪಾರ ನಿರ್ಬಂಧ, ಧ್ವನಿವರ್ಧಕ ವಿಚಾರ ಆರಂಭಿಸಿದ್ದೀರಲ್ಲಾ. ಇದು ಸಂಘ ಪರಿವಾರದವರ ದೇಶವಲ್ಲ, ಈ ಬಗ್ಗೆ ಸಚಿವ ಮಾಧುಸ್ವಾಮಿ ಸ್ವಲ್ಪ ನಿಜ ಹೇಳಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News