ಮಂಗಳೂರು | ಎಸ್.ಡಿ.ಪಿ.ಐ. ಕಾರ್ಯಕರ್ತರಿಂದ ಸಿಎಂಗೆ ಕಪ್ಪು ಬಾವುಟ ಪ್ರದರ್ಶನ
ಬಂಟ್ವಾಳ, ಎ.13: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಉದ್ವಿಗ್ನತೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಮಂಗಳೂರು ತಾಲೂಕಿನ ವಳಚ್ಚಿಲ್ ನಲ್ಲಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಂಟ್ವಾಳದ ಬಂಟರ ಭವನದಲ್ಲಿ ಏರ್ಪಡಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಿಜೆಪಿ ಸಂಘಟನಾತ್ಮಕ ಕಾರ್ಯಕ್ರಮಕ್ಕೆ ಮಂಗಳೂರಿನಿಂದ ಆಗಮಿಸುತ್ತಿದ್ದ ಮುಖ್ಯಮಂತ್ರಿಗೆ ಎಸ್.ಡಿ.ಪಿ.ಐ. ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.
ಮುಖ್ಯಮಂತ್ರಿಯ ಕಾರು ಆಗಮಿಸುತ್ತಿದ್ದಂತೆ ಧಿಕ್ಕಾರ ಘೋಷಣೆ ಕೂಗುತ್ತಾ ರಸ್ತೆಗೆ ಅಡ್ಡ ಬಂದ ಎಸ್.ಡಿ.ಪಿ.ಐ. ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಈ ವೇಳೆ ಎಸ್.ಡಿ.ಪಿ.ಐ. ಕಾರ್ಯಕರ್ತರನ್ನು ತಡೆದ ಪೊಲೀಸರು ಚದುರಿಸಿದರು. ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.