×
Ad

ಮಂಗಳೂರು ನಗರ -ಗ್ರಾಮಾಂತರ ಪ್ರದೇಶದಲ್ಲಿ ಭಾರೀ ಮಳೆ

Update: 2022-04-13 20:00 IST

ಮಂಗಳೂರು : ದ.ಕ.ಜಿಲ್ಲೆಯ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಬುಧವಾರ ಸಿಡಿಲಬ್ಬರದ ಜೊತೆ ಭಾರೀ  ಮಳೆಯಾಗಿದೆ. ಕರಾವಳಿ ತೀರ ಮತ್ತು ಘಟ್ಟದ ತಪ್ಪಲು ಪ್ರದೇಶದಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ.

ನಗರ ಪ್ರದೇಶದ ಬಹುತೇಕ ಕಡೆಗಳಲ್ಲಿ ಮುಸ್ಸಂಜೆಯ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳ್ತಂಗಡಿ ತಾಲೂಕಿನ ಪೀಲ್ಯ ಗ್ರಾಮದ ಶ್ರೀಧರ ಆಚಾರ್ಯ ಎಂಬವರ ತೋಟದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ ಶೀನ ಮೂಲ್ಯ ಅವರ ಮನೆಯ ವಿದ್ಯುತ್ ಮೀಟರ್ ಬಾಕ್ಸ್‌ಗೆ ಸಿಡಿಲು ಬಡಿದು ಹಾನಿಯಾಗಿದೆ. ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕುಕ್ಕೆ ಸಬ್ರಹ್ಮಣ್ಯ, ಕಡಬ, ಉಜಿರೆ, ಮುಂಡಾಜೆ, ಪುತ್ತೂರು ನಗರ, ಬಡಗನ್ನೂರು, ವಿಟ್ಲ,ಬಿ.ಸಿ.ರೋಡ್ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗಿದೆ.

ಸುಳ್ಯದ ಸಂಪಾಜೆಯಲ್ಲಿ ಅತ್ಯಧಿಕ ೭೦ ಮಿ.ಮೀ.,ಬಳ್ಪ ೩೭, ಪುತ್ತೂರಿನ ಕೊಳ್ತಿಗೆ ೫೦, ಅರಿಯಡ್ಕ ೫೪.೫, ಕಡಬದ ಪೆರಾಬೆಯಲ್ಲಿ ೪೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ದಿನವಿಡೀ ಹಗಲು ವೇಳೆ ಮೋಡ ಕವಿದ ಬಿಸಿಲ ವಾತಾವರಣವಿತ್ತು. ಇದರಿಂದ ಸೆಖೆಯ ತೀವ್ರತೆ ಅಧಿಕವಿತ್ತು. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ ೩೧.೭ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ ೨೬.೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News