ಮಂಗಳೂರು; ಬಸ್ ಬೆಂಕಿಗಾಹುತಿಯಾದ ಪ್ರಕರಣ: ಚಾಲಕ ಸೆರೆ
Update: 2022-04-14 20:19 IST
ಮಂಗಳೂರು : ನಗರದ ಹಂಪನಕಟ್ಟೆ ಬಳಿ ಎ.8ರಂದು ಖಾಸಗಿ ಬಸ್ಸೊಂದು ಬೈಕ್‌ಗೆ ಢಿಕ್ಕಿಯಾಗಿ ಬೆಂಕಿಗಾಹುತಿ ಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕ ಬಿಜು ಮೋನು ಎಂಬಾತನನ್ನು ಕದ್ರಿ ಸಂಚಾರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿದ್ದು, ಆ ಹಿನ್ನೆಲೆಯಲ್ಲಿ ಬಿಜು ಮೋನುನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗೆ ಎ.26ರ ತನಕ ನ್ಯಾಯಾಂಗ ಬಂಧನವಾಗಿದೆ.
ಸುರತ್ಕಲ್ ಜನತಾ ಕಾಲನಿಯಿಂದ ಬಿಜು ಮೋನು ಚಲಾಯಿಸಿಕೊಂಡು ಬರುತ್ತಿದ್ದ ರೂಟ್ ನಂಬರ್ 45ಜಿ ಸಂಖ್ಯೆಯ ಏಶೆಲ್ ಹೆಸರಿನ ಬಸ್ ಹಾಗೂ ವೆಲೆನ್ಸಿಯಾದಲ್ಲಿ ಚಾರ್ಟೆಡ್ ಅಕೌಂಟ್ಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಬಳ್ಳಾಲ್ ಭಾಗ್ ನಿವಾಸಿ ಡೇಲನ್ (26) ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಇದರಿಂದ ಎರಡೂ ವಾಹನಗಳು ಬೆಂಕಿಗಾಹುತಿಯಾಗಿದ್ದವು. ಘಟನೆಯಲ್ಲಿ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.