ಡಾ.ಕೆ. ಸುಧಾಕರ್ ಅತಿ ಭ್ರಷ್ಟ ಸಚಿವ, ರಾಜೀನಾಮೆ ಪಡೆದು ತನಿಖೆಗೆ ಒಳಪಡಿಸಿ: ಎಎಪಿ ಆಗ್ರಹ

Update: 2022-04-14 16:18 GMT

ಬೆಂಗಳೂರು, ಎ.14: ಡಾ.ಕೆ. ಸುಧಾಕರ್ ಅವರು ರಾಜ್ಯ ಸಚಿವ ಸಂಪುಟದಲ್ಲಿರುವ ಅತಿ ಭ್ರಷ್ಟ ಸಚಿವರಾಗಿದ್ದು, ಆರೋಗ್ಯ ಇಲಾಖೆಯ ಸಾಲುಸಾಲು ಹಗರಣಗಳು ವರದಿಯಾಗುತ್ತಿವೆ. ಆದರೂ ಅವರ ವಿರುದ್ಧ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಸಚಿವ ಸುಧಾಕರ್‍ರಿಂದ ರಾಜೀನಾಮೆ ಪಡೆದು ಹಗರಣಗಳ ಕುರಿತು ಸಮಗ್ರ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಸರಕಾರವನ್ನು ಆಮ್ ಆದ್ಮಿ ಪಕ್ಷವು ಒತ್ತಾಯಿಸಿದೆ. 

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಎಎಪಿ ಮುಖಂಡ ಮೋಹನ್ ದಾಸರಿ, “ಆರೋಗ್ಯ ಇಲಾಖೆಯು 2020ರ ಸೆ.23ರಂದು ನೀಡಲಾದ KDL/EQPT/ TND/LE-3 ಭಾಗ HAE/103/2020-21  ಹಾಗೂ KDL/EQPT/ Re-TND/LE-5  ಭಾಗ HA/104/2020-21  ಸಂಖ್ಯೆಯ ಟೆಂಡರ್‍ನಲ್ಲಿ ಅಕ್ರಮವಾಗಿದೆ. ಸಚಿವ ಸುಧಾಕರ್ ಅವರ ಅಣತಿಯಂತೆ, ಬಯೋ ಕೆಮಿಸ್ಟ್ರಿ ಮತ್ತು ಹೆಮಟೋಲಜಿ ಉಪಕರಣಗಳ ಗುತ್ತಿಗೆಯನ್ನು ಸಚಿವರ ಆಪ್ತ ಕಂಪನಿಗೆ ನೀಡಲಾಗಿದೆ. ಈ ಬಗ್ಗೆ ಕಳೆದ ವರ್ಷವೇ ನಾವು ದಾಖಲೆ ಬಿಡುಗಡೆ ಮಾಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಆರೋಗ್ಯ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರವಾಗುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬುಧವಾರ ನೀಡಿದ ಹೇಳಿಕೆಯನ್ನು ಪಕ್ಷವು ಬೆಂಬಲಿಸುತ್ತದೆ ಎಂದು ತಿಳಿಸಿದರು.

ಒಂದು ಅಲ್ಪಾವಧಿ ಗುತ್ತಿಗೆಯನ್ನು ರದ್ದು ಮಾಡಿ ಮರುಟೆಂಡರ್ ಮಾಡುವಾಗ, ಟೆಂಡರ್ ಸ್ಪೆಸಿಫಿಕೇಶನ್ ಬದಲಿಸಲು ಅವಕಾಶವಿಲ್ಲ. ಆದರೂ ಬದಲಾವಣೆ ಮಾಡಿದ್ದಾರೆ. ಟೆಂಡರ್‍ನಲ್ಲಿ ಕೇವಲ ಒಂದೇ ಬಿಡ್ ಬಂದಿದ್ದರೂ ಅದನ್ನು ಆಯ್ಕೆ ಸಮಿತಿ ಹೇಗೆ ಪರಿಗಣಿಸಿದೆ ಎಂದು ಅವರು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಎಎಪಿಯ ವಕ್ತಾರ ಉಷಾ ಮೋಹನ್ ಹಾಗೂ ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್ ಉಪಸ್ಥಿತರಿದ್ದರು.

ಹೆಚ್ಚುವರಿ ಕೊಟ್ಟು ಖರೀದಿಸಿದ್ದೇಕೆ?

ಸಿಸ್ಮೆಕ್ಸ್ ಎಂಬ ಕಂಪನಿಯಿಂದ ತ್ರೀ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್ ಉಪಕರಣವನ್ನು ದೆಹಲಿ ಸರಕಾರವು 1,80,540 ರೂಪಾಯಿಗೆ, ಹಿಮಾಚಲ ಪ್ರದೇಶ ಸರಕಾರವು 1,30,000 ರೂಪಾಯಿಗೆ ಮತ್ತು ದೆಹಲಿಯ ಮುನಿಸಿಪಾಲಿಟಿ 1,44,000 ರೂಪಾಯಿಗೆ ಖರೀದಿಸಿದೆ. ಆದರೆ ನಮ್ಮ ಕರ್ನಾಟಕ ಸರಕಾರವು ಅದೇ ಉಪಕರಣಕ್ಕೆ ಬರೋಬ್ಬರಿ 2,96,180 ರೂಪಾಯಿ ನೀಡಿ ಖರೀದಿಸಿದೆ. ಒಟ್ಟು 1,195 ಉಪಕರಣ ಖರೀದಿಸಲು 19.85 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅದೇ ರೀತಿ ಫೈವ್ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್‍ಗಳನ್ನು ಸಿಸ್ಮೆಕ್ಸ್ ಕಂಪನಿಯು ಕೇರಳ ಸರಕಾರಕ್ಕೆ 4.60 ಲಕ್ಷ ರೂಪಾಯಿಗೆ ನೀಡಿದೆ. ಆದರೆ ಕರ್ನಾಟಕ ಸರಕಾರವು ಅದೇ ಕಂಪನಿಯಿಂದ 8.35 ಲಕ್ಷ ರೂಪಾಯಿಯಂತೆ ಖರೀದಿಸಿದೆ. ಒಟ್ಟು 165 ಈ ಉಪಕರಣಗಳ ಖರೀದಿಯಿಂದಾಗಿ 6.18 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಿದೆ.

-ಮೋಹನ್ ದಾಸರಿ, ಎಎಪಿ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News