×
Ad

ಕುಂದಾಪ್ರ ಕನ್ನಡಕ್ಕೆ ಭಾಷಾ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಲಿ: ಪ್ರೊ.ಎ.ವಿ.ನಾವಡ ಪ್ರತಿಪಾದನೆ

Update: 2022-04-15 18:16 IST

ಕುಂದಾಪುರ : ಕುಂದಾಪ್ರ ಕನ್ನಡಕ್ಕೆ ಒಂದು ಭಾಷಾ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಬೇಕು. ಜನಭಾಷೆಯಲ್ಲಿ ಕುಂದಾಪ್ರ ಕನ್ನಡ ಸೃಜನಶೀಲ ಸಾಹಿತ್ಯದ ರಚನೆಗೆ ಇಂಬು ಕೊಡಬೇಕು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಾಪ್ರ ಕನ್ನಡ ಅಧ್ಯಯನಪೀಠವೊಂದು ಆರಂಭಗೊಳ್ಳಬೇಕು.ಈ ಮೂಲಕ ‘ಕನ್ನಡಂಗಳ’ ಅಭಿವೃದ್ಧಿಯಾಗ ಬೇಕು ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಹಾಗೂ ಸಂಶೋಧಕ ಪ್ರೊ.ಎ.ವಿ. ನಾವಡ ಪ್ರತಿಪಾದಿಸಿದ್ದಾರೆ.

ಶುಕ್ರವಾರ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ ಮಂದಿರದ ಕವಿಮುದ್ದಣ್ಣ ವೇದಿಕೆಯಲ್ಲಿ ನಡೆದ ಉಡುಪಿ ಜಿಲ್ಲಾ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ತುರಾಯಿ’ಯ ಸಮ್ಮೇಳನಾಧ್ಯಕ್ಷ ಸ್ಥಾನ ದಿಂದ ಅವರು  ಮಾತನಾಡುತಿದ್ದರು.

ಕುಂದಾಪುರ ಕನ್ನಡಕ್ಕೆ ಹೊಸ ಕಸುವು ತುಂಬಬೇಕು ಎಂದು ನಾವು ಬಹುಕಾಲ ದಿಂದ ಸರಕಾರವನ್ನು ಒತ್ತಾಯಿಸುತ್ತಲೇ ಬಂದ್ದಿದ್ದೇವೆ. ಈ ದಿಸೆಯಲ್ಲಿ ಭಾಷಾ ಅನನ್ಯತೆಯನ್ನು ಉಳಿಸಿಕೊಂಡಿರುವ ಕುಂದಾಪ್ರ ಕನ್ನಡಕ್ಕೆ ಒಂದು ಭಾಷಾ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಬೇಕು ಹಾಗೂ ಮಂಗಳೂರು ವಿವಿಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠವೊಂದನ್ನು ಆರಂಭಿಸಬೇಕು ಎಂದವರು ಒತ್ತಾಯಿಸಿದರು.

ಇನ್ನೊಂದು ಕನ್ನಡದ ಸೃಜನಶೀಲ ಕೃತಿಗಳು ಆಡುಮಾತುಗಳಿಗೆ ಭಾಷಿಕ ರೂಪಾಂತರವಾಗಬೇಕು. ಉದಾಹರಣೆಗೆ, ಪ್ರಾದೇಶಿಕ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಕಾರಂತರ ‘ಮರಳಿ ಮಣ್ಣಿಗೆ’ಯಂತಹ ಕಾದಂಬರಿ ಯನ್ನು ಕುಂದಾಪ್ರ ಕನ್ನಡಕ್ಕೆ ರೂಪಾಂತರಿಸಬೇಕು. ಜೊತೆಗೆ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಸಮಾಜಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಮಹನೀಯರ ಹೆಸರಲ್ಲಿ ಸರಕಾರ ಪ್ರತಿಷ್ಠಾನಗಳನ್ನು ಸ್ಥಾಪಿಸಬೇಕು. ಆ ಮೂಲಕ ಒಂದು ಪ್ರಾದೇಶಿಕ ಸಂಸ್ಕೃತಿಯ ಶೋಧದ ಕೆಲಸ ಇಲ್ಲಿ ನಡೆಯಬೇಕು. ಇದು ಕನ್ನಡ ಮರುಕಟ್ಟುವ ಕೆಲಸಗಳಲ್ಲಿ ಬಹಳ ಮುಖ್ಯ ಎಂದು ಭಾಷಾ ಸಂಶೋಧಕರೂ ಆಗಿರುವ ಪ್ರೊ.ನಾವಡ ಹೇಳಿದರು.

ಶಾಲಾ-ಕಾಲೇಜುಗಳು, ಸಂಘಸಂಸ್ಥೆಗಳು ತಮ್ಮ ಸಮಾರಂಭಗಳಲ್ಲಿ ವಿದೇಶಿ ಡ್ರಮ್ ಡ್ಯಾನ್ಸ್‌ಗಳ ಬದಲಾಗಿ ಸ್ಥಳೀಯ ಜನಭಾಷೆಯಲ್ಲಿ ಹಾಡು, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನಗೊಳ್ಳಬೇಕು. ಇಂದು ನಮ್ಮ ಬದುಕು, ಓದುವ ಸಂಸ್ಕೃತಿಯಿಂದ ಕೇಳುವ ಸಂಸ್ಕೃತಿಗೆ, ಕೇಳುವ ಸಂಸ್ಕೃತಿಯಿಂದ ನೋಡುವ ಸಂಸ್ಕೃತಿಗೆ ಬದಲಾಗಿದೆ ಎಂದವರು ನುಡಿದರು.

ತಂತ್ರಜ್ಞಾನಕ್ಕೆ ತೆರೆದುಕೊಳ್ಳಿ: ಇಂದು ಡಿಜಿಟಲ್ ತಂತ್ರಜ್ಞಾನದ ಬಹುರೂಪಿ ಬೆಳಕಿಂಡಿ ಓದುವ ಲೋಕಕ್ಕೆ ತೆರೆದಿದೆ. ಅನೇಕರಲ್ಲಿ ಇದು ಒಂದು ಆತಂಕ, ತಲ್ಲಣವನ್ನು ಸೃಷ್ಟಿಸಿದ್ದು ನಿಜ. ಪುಸ್ತಕ ಲೋಕವನ್ನು ತೀರಾ ಭಾವನಾತ್ಮಕತೆಗೆ ಎಳೆದುನೋಡುವ ನೋಟಕ್ಕೆ ಬದಲಾಗಿ ಇದನ್ನು ಹೊಸತಂತ್ರಜ್ಞಾನದ ಗುಣಾತ್ಮಕತೆಯ ಅರಿವಿನಲ್ಲಿ ನೋಡಬೇಕು. ಅಂದರೆ ಡಿಜಿಟಲ್ ತಂತ್ರಜ್ಞಾನದ ಇ-ಬುಕ್, ಆಡಿಯೋ ಬುಕ್, ಫೇಸ್ಬುಕ್, ಟ್ವಿಟರ್, ಇನ್‌ಸ್ಟ್ಟಾಗ್ರಾಂ, ಯುಟ್ಯೂಬ್, ವಾಟ್ಸಪ್‌ಗಳನ್ನು ಓದು, ಬರೆವ ಸಂಸ್ಕೃತಿಗೆ ತೆರೆದ ಹೊಸ ಬಾಗಿಲಾಗಿ ಕಂಡುಕೊಳ್ಳಬೇಕಾಗಿದೆ ಎಂದರು.

ಈ ಬುಕ್‌ವರ್ಲ್ಡ್‌ನ್ನು ಪುಸ್ತಕಕ್ಕೆ ಪರ್ಯಾಯ, ಮಸ್ತಕ ರೂಪದ ಪಲ್ಲಟವೆಂದು ಗ್ರಹಿಸಬೇಕೇ ಹೊರತು ಪುಸ್ತಕ ಲೋಕದ ಮುಂದಿರುವ ಆತಂಕ, ಕುಂದು ಎಂದು ತಿಳಿಯಬೇಕಿಲ್ಲ. ಅದು ‘ಚರಿತ್ರೆಯ ಹಿಂದಿನ ಪುಟಗಳ ಮುಂದಿನ ಹಾಳೆಯಂತೆ’ ಎನ್ನುವುದು ನನ್ನ ನಿಲುವಾಗಿದೆ ಎಂದರು.

ರಾಜ್ಯೋತ್ಸವಕ್ಕೆ ಸೀಮಿತವಾಗದಿರಲಿ: ಕನ್ನಡ ರಾಜ್ಯೋತ್ಸವಕ್ಕಷ್ಟೇ ಕನ್ನಡ ಸೀಮಿತವಾಗದಿರಲಿ. ಕನ್ನಡಪ್ರಜ್ಞೆ ಬರಿಯ ಒಂದು ದಿನದ ರಾಜ್ಯೋತ್ಸವವನ್ನು ವೈಭವದಲ್ಲಿ ಆಚರಿಸಿ ಕನ್ನಡ ಬಾವುಟ ಹಾರಿಸಿ ಕನ್ನಡದ ಉದ್ಧಾರದ ಉದ್ದುದ್ದ ಘೋಷಣೆ ಕೂಗಿದರೆ ಕನ್ನಡದ ಅಭಿವೃದ್ಧಿಯಾಗುವುದಿಲ್ಲ. ಕನ್ನಡಪ್ರಜ್ಞೆ ಕಟ್ಟುವ ಕಾರ್ಯ ನಿರಂತರ ಯಜ್ಞವಾಗಬೇಕು. ಅದು ತಪಸ್ಸಿನ ಶ್ರದ್ಧೆಯಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ನಾಡು, ನುಡಿ, ಬದುಕಿನ ಮುಂದಿರುವ ಸವಾಲುಗಳ ಬಗೆಗೆ ಗಂಭೀರವಾದ ಚರ್ಚೆ ನಡೆದು ಕನ್ನಡ ಮರುಕಟ್ಟುವ ಸಂಕಥನಗಳು, ಕಾರ್ಯ ಯೋಜನೆಗಳು ರೂಪುಗೊಳ್ಳಬೇಕು. ಕನ್ನಡದ ಸಬಲೀಕರಣ, ಮರುಕಟ್ಟುವ ಕಾರ್ಯ ಎಂದರೆ ರಾಜ್ಯಭಾಷೆ ಕನ್ನಡದ ಗ್ರಹಿಕೆಯಷ್ಟೇ ಅಲ್ಲ. ಜನಭಾಷೆ ‘ಕನ್ನಡಂಗಳ’ ಅಸ್ಮಿತೆಯನ್ನು ಕಟ್ಟುವುದೂ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕುವೆಂಪು ಕವಿವಾಣಿಯೊಂದಿಗೆ ಪ್ರಾರಂಭ

೧೫ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಕನ್ನಡ ವಿದ್ವಾಂಸ ಪ್ರೊ.ಎ.ವಿ.ನಾವಡ ಅವರು ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯೊಂದಿಗೆ ಮಾತನ್ನು ಪ್ರಾರಂಭಿಸಿದರು. 

ಕುವೆಂಪು ಅವರ ‘ಸತ್ತಂತಿಹರನು ಬಡಿದೆಚ್ಚರಿಸು... ಕಚ್ಚಾಡುವರನು ಕೂಡಿಸಿ ಒಲಿಸು’ ಕವಿವಾಣಿ ಎಲ್ಲ ಕನ್ನಡಿಗರ ಸಂಕಲ್ಪವಾಗಲಿ ಎಂದು ಅಧ್ಯಕ್ಷ ಭಾಷಣ ಪ್ರಾರಂಭಿಸಿದ ಅವರು, ಈಗಷ್ಟೆ ಮೂರ್ತಗೊಂಡ ಉಡುಪಿ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ’ಶುಭನುಡಿಯೆ ಶುಭನುಡಿಯೆ ಶಕುನದ ಹಕ್ಕಿ’ ಎಂದು ಹಾರೈಸಿ ಕನ್ನಡತನಕ್ಕೆ ಹೊಸ ಮುಗಿಲ್ ತೆರೆಯಲಿ ಎಂದು ಆಶಿಸುತ್ತೇನೆ ಎಂದರು.

ನನಗೆ ನುಡಿ ಕೊಟ್ಟ ಕನ್ನಡಾಂಬೆಯ ಪದತಲಕ್ಕೆ ತಲೆಯಿಟ್ಟು, ಪೊಡವಿಗೊಡೆಯ ಕೃಷ್ಣನಿಗೆ ಪೊಡಮಟ್ಟು, ಊರ ಅಧಿದೈವ ಕುಂದೇಶ್ವರ, ಗುರುನರಸಿಂಹ, ಮೂಕಾಂಬಿಕೆಗೆ ಮತ್ತು ಎಲ್ಲ ದೈವದೇವರಿಗೆ ಮಣಿದು, ದೇಶಕ್ಕೆ ಸ್ವಾತಂತ್ರ್ಯದ ಸವಿಯನ್ನು ಉಣಿಸಿದ ಈ ನೆಲದ ವೀರಚೇತನಕ್ಕೆ ಕೈಮುಗಿದು ಪೂರ್ವಸೂರಿಗಳನ್ನು ನೆನೆದು, ‘ರಕ್ಷಿಸಲಿ ನಮ್ಮನನವರತ’ ಎಂದು ಪ್ರಾರ್ಥಿಸುತ್ತೇನೆ ಎಂದರು.

‘ಕನ್ನಡ ನಮ್ಮ ಹೆಮ್ಮೆಯಾಗಬೇಕು. ಕನ್ನಡ ನಮ್ಮ ಸ್ವಾಭಿಮಾನವಾಗಬೇಕು. ನಮ್ಮ ಬದುಕಿನ ಪ್ರೀತಿಯಾಗಬೇಕು. ಬದುಕಿನ ರೀತಿಯಾಗಬೇಕು. ಬದುಕಿನ ಭಾಗವಾಗಬೇಕು. ಅದು ಬದುಕಾಗಬೇಕು.’
-ಪ್ರೊ.ಎ.ವಿ.ನಾವಡ, ೧೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News