ಅಂಗಾಂಗ ದಾನ: ಎಂಟು ಮಂದಿಗೆ ಹೊಸ ಜೀವನ ನೀಡಿದ ಕಿರುಚಿತ್ರ ನಿರ್ಮಾಪಕ ಗಣೇಶ್
ಬೆಂಗಳೂರು, ಎ. 15: ಕಿರುಚಿತ್ರ ನಿರ್ಮಾಪಕ ಗಣೇಶ್ ವೇಮುಲ್ಕರ್ (42) ಅವರು ತಮ್ಮ ಆರು ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರಿಗೆ ಹೊಸ ಜೀವನ ನೀಡಿದ್ದಾರೆ.
ರೋಗಿಯು ಎರಡು ದಿನಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ಅವರ ಕುಟುಂಬ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಂಡಿದ್ದಾರೆ. ಮೂರನೆಯ ದಿನವೂ ಅವರು ನಿರಂತರ ತಲೆನೋವು, ವಾಂತಿ ಮತ್ತು ಸಾಮಾನ್ಯೀಕರಿಸಿದ ಟಾನಿಕ್, ಕ್ಲೋನಿಕ್ ಎಂಬ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದು, ಅವರನ್ನು ಎ.6ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತರಲಾಯಿತು. ಸೆರೆಬ್ರಲ್ ವೆನಸ್ ಥ್ರಂಬೋಸಿಸ್‍ಗೆ ಅವರು ತುತ್ತಾಗಿದ್ದಾರೆ ಎಂದು ಶಂಕಿಸಲಾಯಿತು.
ಎಂಆರ್ ಐ ಪರೀಕ್ಷೆ ಅದೇ ರೋಗ ಎಂದು ದೃಢಪಡಿಸಿತು. ತಕ್ಷಣ ಅವರನ್ನು ಐಸಿಯುಗೆ ಸ್ಥಳಾಂತರಿಸಿ ವೆಂಟಿಲೇಟರ್‍ಗೆ ಒಳಪಡಿಸಿದ ಚಿಕಿತ್ಸೆ ನೀಡಲಾಯಿತು. ಯಾವುದೇ ವಿಳಂಬವಿಲ್ಲದೆ, ಮೆದುಳನ್ನು ಡಿಕಂಪ್ರೆಸ್ ಮಾಡಲು ರೋಗಿಯನ್ನು ತುರ್ತು ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಯಿತು( ಫ್ರಂಟ್ ಟೆಂಪೊರಲ್ ಪ್ಯಾರಿಯೆಟಲ್ ಕ್ರಾನಿಯೆಕ್ಟಮಿ). ಎಲ್ಲ ಚಿಕಿತ್ಸೆಯ ಹೊರತಾಗಿಯೂ, ರೋಗಿಯು ಔಷಧಿಗೆ ಪ್ರತಿಕ್ರಿಯಿಸಲಿಲ್ಲ ಮತ್ತು ಎ.13ರ ಸಂಜೆ 5ಗಂಟೆಗೆ ಬ್ರೈನ್‍ಡೆಡ್ ಎಂದು ಘೋಷಿಸಲಾಯಿತು. ಅವರು ಪತ್ನಿ ಹಾಗೂ ನಾಲ್ಕು ವರ್ಷದ ಮಗನನ್ನು ಅಗಲಿದ್ದಾರೆ.
ಗಣೇಶ್ ಅವರ ಹಠಾತ್ ನಿಧನದಿಂದಾಗ ದುಃಖಿತರಾಗಿದ್ದರೂ, ಅವರ ಕುಟುಂಬ ಸದಸ್ಯರು 2 ಮೂತ್ರಪಿಂಡಗಳು, ಯಕೃತ್ತು (2 ಜನರಿಗೆ ದಾನ), ಹೃದಯ, ಶ್ವಾಸಕೋಶಗಳು ಮತ್ತು ಕಾರ್ನಿಯಾಗಳು ಸೇರಿದಂತೆ ಅವರ ಅಂಗಗಳನ್ನು ದಾನ ಮಾಡಲು ಒಪ್ಪಿಕೊಂಡರು, ಇದರಿಂದಾಗಿ ನಗರದ 8 ರೋಗಿಗಳಿಗೆ ಪ್ರಯೋಜನವಾಗಿದೆ ಎಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆ ವೈಧ್ಯ ಡಾ.ಪಿ.ಸಿ.ಮೋಹನ್ ತಿಳಿಸಿದ್ದಾರೆ.