ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್ ಈಶ್ವರಪ್ಪ

Update: 2022-04-15 18:59 GMT

ಬೆಂಗಳೂರು, ಎ. 15: ‘ಸಂಘ ಪರಿವಾರದ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ' ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪನವರು ಕೊನೆಗೂ ತಮ್ಮ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಸ್ಥಾನಕ್ಕೆ ಶುಕ್ರವಾರ ರಾತ್ರಿ ಒಂದು ಸಾಲಿನ ಪತ್ರದ ಮೂಲಕ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಎ.14ರ ಗುರುವಾರ ದಿಢೀರ್ ಸುದ್ದಿಗೋಷ್ಠಿ ನಡೆಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಘೋಷಣೆ ಮಾಡಿದ್ದ ಕೆ.ಎಸ್.ಈಶ್ವರಪ್ಪ ಅವರು ಇಂದು ಶಿವಮೊಗ್ಗದಿಂದ ತುಮಕೂರು ಮಾರ್ಗವಾಗಿ ರಸ್ತೆಯ ಮೂಲಕ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಬೆಂಗಳೂರಿಗೆ ಆಗಮಿಸಿದ ಈಶ್ವರಪ್ಪ, ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿನ ಸಿಎಂ ನಿವಾಸಕ್ಕೆ ಖುದ್ದು ಭೇಟಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ಬೆಳಗಾವಿಯ ಹಿಂಡಲಗಾ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನೂರಕ್ಕೂ ಹೆಚ್ಚು ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರ ಸಂತೋಷ್ ಪಾಟೀಲ್‍ಗೆ 4 ಕೋಟಿ ರೂ.ಮೊತ್ತದ ಬಿಲ್ ಬಿಡುಗಡೆಗೆ ಶೇ.40ರಷ್ಟು ಕಮಿಷನ್ ಬೇಡಿಕೆ ಕಿರುಕುಳದ ಹಿನ್ನೆಲೆಯಲ್ಲಿ ಸಂತೋಷ್, ಉಡುಪಿಯ ಲಾಡ್ಜ್‍ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪನವರು ಪ್ರಮುಖ ಆರೋಪಿಯಾಗಿದ್ದರು.

ಈ ಮಧ್ಯೆ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು. ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯಾದ್ಯಂತ ಹೋರಾಟ ಮುಂದುವರಿಸಿದೆ. ಹೀಗಾಗಿ ‘ತಾನು ಕಳಂಕ ರಹಿತ ವ್ಯಕ್ತಿ' ಎಂಬುದನ್ನು ಸಾಬೀತುಪಡಿಸುವ ದೃಷ್ಟಿಯಿಂದ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸುವ ಮಾರ್ಗದಲ್ಲಿ ತಮ್ಮದೇ ಆದ ರೀತಿಯಲ್ಲಿ ‘ಶಕ್ತಿ ಪ್ರದರ್ಶನ' ನಡೆಸಿದರು.

ಶಿವಮೊಗ್ಗದಿಂದ ಮಧ್ಯಾಹ್ನವೇ ಹೊರಟ ಈಶ್ವರಪ್ಪ, ಕಡೂರು ಮಾರ್ಗವಾಗಿ ತಿಪಟೂರಿಗೆ ಆಗಮಿಸಿದರು. ಅಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿ, ಅಲ್ಲಿಂದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಅವರಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಸಾಥ್ ನೀಡಿದರು.

ಅಲ್ಲಿಂದ ಬೆಂಗಳೂರಿನ ಕುಮಾರಕೃಪಾ ಬಳಿಯಲ್ಲಿನ ತಮ್ಮ ಸರಕಾರಿ ನಿವಾಸಕ್ಕೆ ಆಗಮಿಸಿದ ಅವರು ಕೆಲಕಾಲ ಅಲ್ಲಿದ್ದು, ಪೊಲೀಸರು ವ್ಯವಸ್ಥೆ ಮಾಡಿದ ಸಿಗ್ನಲ್ ಫ್ರೀ ಮೂಲಕ ಅಲ್ಲಿಂದ ನೇರವಾಗಿ ರೇಸ್‍ಕೋರ್ಸ್ ರಸ್ತೆಯಲ್ಲಿ ಸಿಎಂ ನಿವಾಸಕ್ಕೆ ತೆರಳಿ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುರುಬ ಸಮುದಾಯದ ಸಚಿವರಾದ ಭೈರತಿ ಬಸವರಾಜ್, ಎಂಟಿಬಿ ನಾಗರಾಜ್ ಉಪಸ್ಥಿತರಿದ್ದರು. 

ಈ ಮಧ್ಯೆ ಬೆಂಗಳೂರಿನಲ್ಲಿರುವ ಈಶ್ವರಪ್ಪ ನಿವಾಸ ಹಾಗೂ ಸಿಎಂ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು, ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಘೋಷಣೆ ಕೂಗಿದರು. 

ಸೋಮವಾರ ಅಂಗೀಕಾರ: ‘ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಪಾಲರಿಗೆ ಸಲ್ಲಿಕೆ ಮಾಡಲಿದ್ದು, ಗುಜರಾತ್ ಪ್ರವಾಸಕ್ಕೆ ತೆರಳಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ರಾಜ್ಯಕ್ಕೆ ಹಿಂದಿರುಗಲಿದ್ದು, ಅಂದೇ ಈಶ್ವರಪ್ಪ ರಾಜೀನಾಮೆ ಅಂಗೀಕಾರ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

ಸಿಎಂ ಸಾಂತ್ವನ 

ಸಿಎಂ ಅಧಿಕೃತ ನಿವಾಸದಲ್ಲಿ ರಾಜೀನಾಮೆ ಸಲ್ಲಿಸಿದ ಕೆ.ಎಸ್.ಈಶ್ವರಪ್ಪನವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ತನಿಖೆ ನಡೆಯಲಿ, ಸರಕಾರ ಮತ್ತು ಪಕ್ಷ ನಿಮ್ಮ ಜೊತೆಗಿದೆ ಎಂದು ಸಾಂತ್ವನ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News