ರಾಜ್ಯದಲ್ಲಿ ಲಕ್ಷದ ಗಡಿ ದಾಟಿದ ಎಲೆಕ್ಟ್ರಿಕ್ ವಾಹನಗಳು
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಮುಖಿಯಾಗಿರುವ ಹಿನ್ನೆಲೆಯಲ್ಲಿ ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳು ರಾಜ್ಯದಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವುದರ ಸೂಚಕವಾಗಿ, ರಾಜ್ಯದಲ್ಲಿ ಒಟ್ಟು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ.
ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಾರಿಗೆ ಸಚಿವಾಲಯದ ಪ್ರಕಾರ ಕರ್ನಾಟಕದಲ್ಲಿ ಎಪ್ರಿಲ್ 15ರವರೆಗೆ ಒಟ್ಟು 1,00,432 ವಿದ್ಯುತ್ ವಾಹನಗಳು ನೋಂದಣಿಯಾಗಿವೆ. ಮೂರು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಿರುವ ಉತ್ತರ ಪ್ರದೇಶ ದೇಶದಲ್ಲೇ ಅಗ್ರಸ್ಥಾನಿಯಾಗಿದ್ದು, 1.4 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ ದೆಹಲಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನ ರಾಜ್ಯದ ಪಾಲಾಗಿದೆ.
ರಾಜ್ಯದಲ್ಲಿ 2.2 ಕೋಟಿ ಪೆಟ್ರೋಲ್ ವಾಹನಗಳು, 42.2 ಲಕ್ಷ ಡೀಸೆಲ್ ವಾಹಗಳು, 4.2 ಲಕ್ಷ ಪೆಟ್ರೋಲ್/ಎಲ್‍ಪಿಜಿ, 34168 ಪೆಟ್ರೋಲ್/ಹೈಬ್ರೀಡ್, 16743 ಪೆಟ್ರೋಲ್/ ಸಿಎನ್‍ಜಿ, 13408 ಎಲ್‍ಪಿಜಿ ಚಾಲಿತ ವಾಹನಗಳಿವೆ. ಸಿಎನ್‍ಜಿ ಮಾತ್ರ ಬಳಸುವ 7508 ವಾಹನಗಳು ಮತ್ತು 4775 ಡೀಸೆಲ್/ಹೈಬ್ರೀಡ್ ವಾಹನಗಳಿವೆ.
ದೇಶದಲ್ಲಿ ಅಗ್ರ ಮೂರು ರಾಜ್ಯಗಳನ್ನು ಹೊರತುಪಡಿಸಿದರೆ ಮಹಾರಾಷ್ಟ್ರ (88479), ಬಿಹಾರ (73259), ತಮಿಳುನಾಡು (71393), ರಾಜಸ್ಥಾನ (65080), ಅಸ್ಸಾಂ (55974) ಮತ್ತು ಗುಜರಾತ್ (28637) ಅತಿಹೆಚ್ಚು ಇವಿಗಳನ್ನು ಹೊಂದಿರುವ ರಾಜ್ಯಗಳು.
ಕರ್ನಾಟಕದಲ್ಲಿ ನೋಂದಣಿಯಾಗಿರುವ ಒಂದು ಲಕ್ಷ ಇವಿಗಳ ಪೈಕಿ 73453 ದ್ವಿಚಕ್ರವಾಹನಗಳು, 7763 ಕಾರುಗಳು, 17357 ಆಟೊರಿಕ್ಷಾ ಮತ್ತು 101 ಬಸ್‍ಗಳು ಸೇರಿವೆ. ಇಲೆಕ್ಟ್ರಿಕ್ ವಾಹನಗಳ ನೋಂದಣಿ ರಾಜ್ಯದಲ್ಲಿ ಏರುಗತಿಯಲ್ಲಿದ್ದು, 2022ರ ಮಾರ್ಚ್ ತಿಂಗಳಲ್ಲಿ 7880 ವಾಹನಗಳು ನೋಂದಣಿಯಾಗಿವೆ. ಇದಕ್ಕೆ ಹೋಲಿಕೆಯಾಗಿ 2018ರ ಮಾರ್ಚ್‍ನಲ್ಲಿ ಕೇವಲ 424 ಇ-ವಾಹನಗಳು ನೋಂದಣಿಯಾಗಿದ್ದವು. 2019ರ ಮಾರ್ಚ್‍ನಲ್ಲಿ 1085, 2020ರ ಮಾರ್ಚ್‍ನಲ್ಲಿ 905 ಮತ್ತು 2021ರ ಮಾರ್ಚ್‍ನಲ್ಲಿ 2657 ಇ-ವಾಹನಗಳು ನೋಂದಣಿಯಾಗಿವೆ.
2021ರವರೆಗೆ 33,306 ವಿದ್ಯುತ್ ವಾಹನಗಳು ರಾಜ್ಯದಲ್ಲಿ ನೋಂದಣಿಯಾಗಿದ್ದರೆ ಈ ವರ್ಷದ ಜನವರಿ ಒಂದರಿಂದ ಏಪ್ರಿಲ್ 15ರ ವರೆಗಿನ ಅವಧಿಯಲ್ಲಿ 22839 ವಾಹನಗಳು ನೋಂದಾಯಿಸಲ್ಪಟ್ಟಿವೆ. ಅಂದರೆ ಈ ಹಿಂದಿನ ಎಲ್ಲ ವರ್ಷಗಳಲ್ಲಿ ನೋಂದಣಿಯಾದ ಇ-ವಾಹನಗಳ ಒಟ್ಟು ಸಂಖ್ಯೆಯನ್ನು 2022 ಮೀರುವ ಎಲ್ಲ ಸಾಧ್ಯತೆಗಳಿವೆ.