ಮುಳ್ಳಿನ ತೋಟದಅಸಲಿ ಕೆಲಸಗಾರನ ‘ಬೇರೆಯೇ ಮಾತು’

Update: 2022-04-16 04:37 GMT

‘ಬೇರೆಯೇ ಮಾತು’ ಕೃತಿ ಕನ್ನಡ ಪತ್ರಿಕಾ ವಲಯ ಕಂಡ ಅಪರೂಪದ ಪತ್ರಕರ್ತ, ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರೊಳಗಿನ ಪತ್ರಕರ್ತ, ಸಂಪಾದಕ ಹಾಗೂ ದೇಸಿ ಚಿಂತಕನೊಬ್ಬನಲ್ಲಿ ಮಾತ್ರ ಕಾಣಬಹುದಾದ ಭಿನ್ನ ನೋಟಕ್ರಮ, ಅರಿವು, ನಿಲುವು, ತಾತ್ವಿಕತೆ, ಬದ್ಧತೆ, ಪತ್ರಿಕಾ ಧರ್ಮದ ಪ್ರಾಮಾಣಿಕತೆಯ ಜೊತೆಜೊತೆಗೆ ವ್ಯಕ್ತಿಗತವಾಗಿ ವಡ್ಡರ್ಸೆಯವರಲ್ಲಿ ಇದ್ದ ನಿಷ್ಠುರತೆ, ಮಾನವೀಯತೆ, ಸಾಮಾಜಿಕ ಕಳಕಳಿ ಹಾಗೂ ಹೃದಯ ವೈಶಾಲ್ಯತೆ, ಹಾಗೂ ವ್ಯವಹಾರಕ್ಕೆ ಬೇಕಾದ ವ್ಯಾಪಾರಿ ಮನೋಧರ್ಮದಲ್ಲಿನ ತೀವ್ರ ಕೊರತೆ ಇತ್ಯಾದಿಗಳ ಅನಾವರಣವನ್ನು ಕಾಣಬಹುದು.

 ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯುವ ಮಾಧ್ಯಮ ಕ್ಷೇತ್ರ ದೇಶದಲ್ಲಿ ಇವತ್ತು ನೈತಿಕವಾಗಿ, ತಾತ್ವಿಕವಾಗಿ ಮತ್ತು ಗುಣಮಟ್ಟದ ಹಿನ್ನೆಲೆಯಲ್ಲಿ ತಲುಪಿರುವ ಅಧೋಗತಿಯನ್ನು ನೋಡುತ್ತಿದ್ದರೆ, ಈ ಮಾಧ್ಯಮ ಜಗತ್ತಿನ ಪರಂಪರೆಯೇ ಇಂತಹದ್ದು ಎಂಬ ತಪ್ಪುಕಲ್ಪನೆ ಇವತ್ತಿನ ತಲೆಮಾರಿನ ಓದುಗರಿಗೆ ಅನ್ನಿಸುವುದು ಸಹಜ. ಕನ್ನಡ ನಾಡಿನ ಮಾಧ್ಯಮ ಜಗತ್ತನ್ನು ನೋಡಿದರೂ ಈ ಕಾರಣಗಳೇ ಎದ್ದು ಕಾಣುವುದು. ಇದಕ್ಕೆ ಕಾರಣ ಮಾಧ್ಯಮ ಕ್ಷೇತ್ರ ಎನ್ನುವುದು ಯಾವತ್ತಿನಿಂದಲೂ ವಾಣಿಜ್ಯ ಜಗತ್ತು, ಸಿನೆಮಾ ಜಗತ್ತು ಮತ್ತು ರಾಜಕೀಯ ಕ್ಷೇತ್ರದೊಂದಿಗೆ ಅದು ಹೊಂದಿರುವ ವಿಶಿಷ್ಟ ಅಂತಃಸಂಬಂಧದಿಂದ ಅಂತ ಆ ಕ್ಷಣಕ್ಕೆ ಅನ್ನಿಸಿ, ಅಂತಿಮ ತೀರ್ಮಾನಕ್ಕೆ ಬರಬಹುದಾದರೂ ವಾಸ್ತವದಲ್ಲಿ ಅದು ಅಷ್ಟು ಸರಳವಾದ ವಿಚಾರವಲ್ಲ. ಏಕೆಂದರೆ ವಾಸ್ತವದಲ್ಲಿ ಮಾಧ್ಯಮ ಕ್ಷೇತ್ರವೆಂಬುದು ಒಂದು ಮುಳ್ಳಿನ ತೋಟವಿದ್ದಂತೆ. ಆ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರ/ ಪತ್ರಕರ್ತ/ ಸಂಪಾದಕ ಯಾರೇ ಆಗಿದ್ದರೂ ವಾಣಿಜ್ಯ, ಗ್ಲಾಮರ್, ರಾಜಕೀಯ ಇತ್ಯಾದಿಗಳು ತೋಟದ ಮುಳ್ಳುಗಳಿದ್ದಂತೆ ಆ ಮುಳ್ಳುಗಳನ್ನು ಹೆಕ್ಕಿ, ತೆಗೆದು ಹೇಗೆ (ಬೇಲಿಯಾಗಾದರೂ) ಬಳಸಿಕೊಳ್ಳಬೇಕೆಂಬ ಜಾಣ್ಮೆ ಬೇಕು, ಅದು ಗೊತ್ತಿಲ್ಲದೆ ಇದ್ದರೆ ಆ ತೋಟದ ಮುಳ್ಳುಗಳೊಂದಿಗೆ ಕೆಲಸ ನಿರ್ವಹಿಸಬೇಕು, ಇಲ್ಲವೆ ಮುಳ್ಳುಗಳನ್ನು ತೆಗೆದು ಅಲ್ಲಿ ಬೇಕಾದ ಬೆಳೆ ತೆಗೆಯುವ ಕೆಲಸಕ್ಕೆ ತೊಡಗಬೇಕು. ಆದರದು ಅಷ್ಟು ಸುಲಭದ, ಸರಳದ ಕೆಲಸವಲ್ಲ. ತನ್ನ ಕೆಲಸದ ಬಗ್ಗೆ ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ, ನೈತಿಕತೆ, ವ್ಯಾವಹಾರಿಕ ಜಾಣ್ಮೆ, ಬರೆಯುತ್ತೇನೆ ಎನ್ನುವ ಹುಮ್ಮಸ್ಸು ಇರುವ ಪತ್ರಕರ್ತನಿಗೆ ಆ ಕೆಲಸ ಅಸಾಧ್ಯವೇನಲ್ಲ. ಕನ್ನಡ ಮಾಧ್ಯಮ ಜಗತ್ತಿನ ಪತ್ರಿಕಾ ರಂಗದ ಪರಂಪರೆಯ ಅರಿವಿರುವವರಿಗೆ ಕನ್ನಡ ಪತ್ರಿಕಾ ರಂಗದಲ್ಲಿ ಇಂತಹ ಮುಳ್ಳಿನ ತೋಟದ ಪತ್ರಕರ್ತ ಕೆಲಸಗಾರರು ಸಿಗುತ್ತಾರೆ, ಆದರೆ ಅವರಲ್ಲಿ ‘ಅಸಲಿ’ ಕೆಲಸಗಾರರು ಒಂದಿಬ್ಬರು ಸಿಕ್ಕಾರು ಅಷ್ಟೆ. 1984ರಲ್ಲಿ ಓದುಗರ ಒಡೆತನದ ಪತ್ರಿಕೆಯಾಗಿ, ಸಾಮಾಜಿಕ ದುರ್ಬಲರ ಪಕ್ಷಪಾತಿಯಾಗಿ, ಎಲ್ಲಾ ಕಾಲದಲ್ಲೂ ಸಮಾಜಕ್ಕಂಟುವ ಮಿಥ್ಯದ ಕೊಳೆ ತೊಳೆವ, ಚಿಂತನೆಯ ಮಳೆ ಸುರಿಸಿ, ವಿಚಾರಗಳ ಹೊಳೆ ಹರಿಸಿ ಈ ನಾಡಿನಲ್ಲಿ ‘ಜನಶಕ್ತಿ’ ಬೆಳೆ ತೆಗೆಯುವ ಮಹತ್ವಾಕಾಂಕ್ಷೆಯಿಂದ ಹುಟ್ಟಿಕೊಂಡ ಅಸಲಿ ಪತ್ರಿಕೆ ‘ಮುಂಗಾರು’. ಇದರ ಸಂಸ್ಥಾಪಕ ಸಂಪಾದಕ ವಡ್ಡರ್ಸೆ ರಘುರಾಮಶೆಟ್ಟರು. 1984ರಿಂದ 1995ರವರೆಗೂ ಸುಮಾರು ಹನ್ನೊಂದು ವರ್ಷಗಳ ಕಾಲ ರಘುರಾಮ ಶೆಟ್ಟರು ಮುಂಗಾರು ಪತ್ರಿಕೆಯನ್ನು ನಡೆಸಿದ ಸಂದರ್ಭದಲ್ಲಿ ಆ ಪತ್ರಿಕೆಯಲ್ಲಿ ವಡ್ಡರ್ಸೆಯವರು ಬರೆಯುತ್ತಿದ್ದ ವಿಶಿಷ್ಟ ಅಂಕಣ ಬರಹ ‘ಬೇರೆಯೇ ಮಾತು’ ಜೊತೆಗೆ ವ್ಯಕ್ತಿತ್ವ ಬರಹ ಮತ್ತು ಓದುಗರೊಡನೆ ಸಂಪಾದಕ ಎನ್ನುವ ವಿಶಿಷ್ಟ ಬರಹ - ಹೀಗೆ ಸುಮಾರು 300ಕ್ಕೂ ಹೆಚ್ಚಿನ ಬರಹಗಳಲ್ಲಿ ಈ ಮೂರು ಬಗೆಯ ಬರಹಗಳಲ್ಲಿ ಕೆಲವನ್ನು ಆಯ್ದು ‘ಬೇರೆಯೇ ಮಾತು’ ಎನ್ನುವ ಕೃತಿಯನ್ನು ವಡ್ಡರ್ಸೆಯವರ ಶಿಷ್ಯ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿ ಕೊಟ್ಟಿದ್ದಾರೆ.

‘ಬೇರೆಯೇ ಮಾತು’ ಕೃತಿ ಕನ್ನಡ ಪತ್ರಿಕಾ ವಲಯ ಕಂಡ ಅಪರೂಪದ ಪತ್ರಕರ್ತ, ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರೊಳಗಿನ ಪತ್ರಕರ್ತ, ಸಂಪಾದಕ ಹಾಗೂ ದೇಸಿ ಚಿಂತಕನೊಬ್ಬನಲ್ಲಿ ಮಾತ್ರ ಕಾಣಬಹುದಾದ ಭಿನ್ನ ನೋಟಕ್ರಮ, ಅರಿವು, ನಿಲುವು, ತಾತ್ವಿಕತೆ, ಬದ್ಧತೆ, ಪತ್ರಿಕಾ ಧರ್ಮದ ಪ್ರಾಮಾಣಿಕತೆಯ ಜೊತೆಜೊತೆಗೆ ವ್ಯಕ್ತಿಗತವಾಗಿ ವಡ್ಡರ್ಸೆಯವರಲ್ಲಿ ಇದ್ದ ನಿಷ್ಠುರತೆ, ಮಾನವೀಯತೆ, ಸಾಮಾಜಿಕ ಕಳಕಳಿ ಹಾಗೂ ಹೃದಯ ವೈಶಾಲ್ಯತೆ, ಹಾಗೂ ವ್ಯವಹಾರಕ್ಕೆ ಬೇಕಾದ ವ್ಯಾಪಾರಿ ಮನೋಧರ್ಮದಲ್ಲಿನ ತೀವ್ರ ಕೊರತೆ ಇತ್ಯಾದಿಗಳ ಅನಾವರಣವನ್ನು ಕಾಣಬಹುದು.

 ವಡ್ಡರ್ಸೆಯವರ ಬೇರೆ ಬೇರೆ ಅಂಕಣಗಳ ಬರಹಗಳನ್ನು ಇಲ್ಲಿ ‘ಚಿಂತನೆಯ ಬೆಳೆ’, ‘ನಮ್ಮವರು’, ‘ಓದುಗರೊಡನೆ ಸಂಪಾದಕ’ ಎಂದು ಮೂರು ವಿಭಾಗಗಳಲ್ಲಿ ದಿನೇಶ್ ಅಮಿನ್ ಮಟ್ಟು ಅವರು ವಿಂಗಡಿಸಿ ಕೊಟ್ಟಿದ್ದಾರೆ. ಈ ವಿಭಾಗಕ್ರಮ ಕೂಡ ವಿಶೇಷತೆಯಿಂದ ಕೂಡಿದೆ.

   ‘ಚಿಂತನೆಯ ಬೆಳೆ’ ಎನ್ನುವ ಭಾಗದಲ್ಲಿ ವಡ್ಡರ್ಸೆಯವರು ಬರೆಯುತ್ತಿದ್ದ ವಿಶೇಷ ಅಂಕಣ ‘ಬೇರೇಯೇ ಮಾತು’ ಅಂಕಣದ ಬರಹಗಳು. ಒಟ್ಟು 25 ಬರಹಗಳಿವೆ. ಈ ಬರಹಗಳ ವಸ್ತು, ವಿಷಯ ಭಾರತದ ಸಾಂಸ್ಕೃತಿಕ ರಾಜಕಾರಣದ ಕ್ಯಾನ್‌ವಾಸ್ ಇಟ್ಟುಕೊಂಡೇ ಕರ್ನಾಟಕದ ಒಟ್ಟು ಸಾಂಸ್ಕೃತಿಕ ರಾಜಕಾರಣದ ವಿಶ್ಲೇಷಣೆಗೆ ವಡ್ಡರ್ಸೆಯವರು ತೊಡಗುತ್ತಾರೆ. ಸ್ವಾತಂತ್ರ್ಯೋತ್ತರ ಕಾಲದಿಂದ 90ರ ದಶಕದವರೆಗಿನ ಇಲ್ಲಿನ ರಾಜಕಾರಣ, ಆರ್ಥಿಕ, ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಪರಿಸರ, ಸಂಸ್ಕೃತಿ, ಚುನಾವಣಾ ರಾಜಕೀಯ, ಪುರಾಣ ಪುರುಷರು, ಹೀಗೆ ಎಲ್ಲ ವಿಚಾರಗಳನ್ನು ಚರ್ಚೆಗೆ ಎಳೆದು ವಿಶ್ಲೇಷಿಸುತ್ತಾರೆ. ಇಲ್ಲಿನ ‘ಭಾರತದ ಸ್ವಾತಂತ್ರ್ಯಕ್ಕೆ ಮುಳುವಾಗಿರುವ ಜಾತಿ ವ್ಯವಸ್ಥೆ’, ‘ಬೇಕಾಗಿರುವುದು ಬದಲಾವಣೆಯಲ್ಲ ಪರಿವರ್ತನೆ’, ‘ಪಂಚತಾರ ಸಂಸ್ಕೃತಿಯ ಕರಿನೆರಳಲ್ಲಿ ಭಾರತ’, ‘ರಾಷ್ಟ್ರೀಯತೆಗೆ ಮಾರಕ ಆಗುತ್ತಿದೆ ಸಾಮಾಜಿಕ ಅನ್ಯಾಯ’, ‘ಜನ ವಿರೋಧಿ ತೀರ್ಪು’, ‘ವಿಷಕ್ಕೆ ಬಾಯಿ ಬಿಡಬೇಡಿ’ ಇತ್ಯಾದಿ ಬಹುತೇಕ ಲೇಖನಗಳಲ್ಲಿ ಚರ್ಚಿಸಿರುವ ವಿಚಾರಗಳು ನಾಡಿನ 80, 90ರ ದಶಕದ ಭಾರತೀಯ ಸಮಾಜದ ರಾಜಕಾರಣದ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕಾರಣ, ಇಲ್ಲಿನ ಪರಿಸರ, ಸಾಹಿತ್ಯ-ಸಂಸ್ಕೃತಿ ಜಗತ್ತಿನ ರಾಜಕಾರಣ, ನೈತಿಕವಾಗಿ, ವಾಸ್ತವವಾಗಿ ತಲುಪಿರುವ ಅಧೋಗತಿ ಮತ್ತದು ಇಲ್ಲಿನ ಸಾಮಾಜಿಕ ಜೀವನದ ಮೇಲೆ ಉಂಟು ಮಾಡಿರುವ ಪರಿಣಾಮಗಳು, ಈ ಎಲ್ಲಾ ವಿಚಾರಗಳನ್ನು ವಡ್ಡರ್ಸೆಯವರು ಒಬ್ಬ ನುರಿತ ಪತ್ರಕರ್ತನಾಗಿ ಅಂಕಿ- ಅಂಶಗಳ ಉದಾಹರಣೆಯೊಂದಿಗೆ ಚರ್ಚಿಸಿದ್ದರೂ ಈ ಎಲ್ಲ ಬರಹಗಳ ಚರ್ಚೆಯೊಳಗೆ ಒಬ್ಬ ಸೂಕ್ಷ್ಮ ಮಾರ್ಕ್ಸ್‌ವಾದಿ ಮತ್ತು ಸಮಾಜವಾದಿ, ಅಂಬೇಡ್ಕರ್ ವಾದಿ ಚಿಂತಕನ ಚಿಂತನೆಗಳಿವೆ.

ಈ ಅಂಕಣ ಬರಹಗಳು 80, 90ರ ದಶಕದ ಕರ್ನಾಟಕದ ಸಾಂಸ್ಕೃತಿಕ ಜೀವನದ ಚರಿತ್ರೆಯನ್ನು ಹೇಳುವುದಷ್ಟೇ ಅಲ್ಲದೆ ಸಾಂಸ್ಕೃತಿಕವಾದ ಈ ಅಧಃಪತನ ಮುಂದೆ ಕರ್ನಾಟಕ ಎದುರಿಸಬಹುದಾದ ಆಪತ್ತುಗಳ ಸೂಚನೆಯನ್ನು ಹೇಳುತ್ತವೆ. ಈ ಬರಹಗಳಲ್ಲಿ ಒಬ್ಬ ಪತ್ರಕರ್ತನಾಗಿ ಒಂದು ವಿಷಯದ ಬಗೆಗೆ ವಡ್ಡರ್ಸೆಯವರಲ್ಲಿ ಇದ್ದ ಅಪಾರ ಜ್ಞಾನ, ನೆನಪಿನ ಶಕ್ತಿ, ಅಂಕಿ-ಅಂಶಗಳು, ಸಾಮಾನ್ಯ ಓದುಗನಿಗೂ ಅರ್ಥವಾಗುವ ನುಡಿಗಟ್ಟು, ಭಾಷೆಯ ಬಳಕೆ, ಮಂಡನಾಕ್ರಮ ಇತ್ಯಾದಿಗಳು ಗಮನ ಸೆಳೆಯುತ್ತವೆ. ಎರಡನೇ ವಿಭಾಗದಲ್ಲಿನ ‘ನಮ್ಮವರು’ ಬರಹಗಳು ವ್ಯಕ್ತಿ ಬರಹಗಳ ಕುರಿತವು. ಇಲ್ಲಿ ಸಮಾಜದಲ್ಲಿ ಗಣ್ಯರು ಎನಿಸಿಕೊಂಡ ವ್ಯಕ್ತಿಗಳ ವ್ಯಕ್ತಿತ್ವದ ವಿಶೇಷ ಪರಿಚಯವಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ವ್ಯಕ್ತಿಗಳಷ್ಟೇ ಅಲ್ಲದೇ ಜಿಲ್ಲಾಮಟ್ಟದಲ್ಲಿ ತನ್ನ ನಡೆಯಿಂದ ಪ್ರಸಿದ್ಧರಾದ ವ್ಯಕ್ತಿಗಳಿಗೂ ಸ್ಥಾನ ಕೊಟ್ಟಿದ್ದಾರೆ.

 ವಡ್ಡರ್ಸೆಯವರ ಪ್ರಕಾರ ವ್ಯಕ್ತಿ ಮತ್ತು ವ್ಯಕ್ತಿತ್ವ ಎನ್ನುವುದು ಅಭೇದ್ಯವಾದದ್ದು. ವಚನಕಾರರ ನಡೆ- ನುಡಿಯೊಳ್ ಒಂದಾದದ್ದು. ಹೀಗೆ ನಾಡಿನ ರಾಜಕಾರಣ, ಸಾಮಾಜೀಕ ಜೀವನ, ವೈಚಾರಿಕ ಲೋಕ, ಸಾಹಿತ್ಯ, ಮತ್ತು ನೈತಿಕ ಜಗತ್ತಿನಲ್ಲಿ ನಡೆ - ನುಡಿಯಲ್ಲಿ ಒಂದಾದ, ಒಂದಾಗದ ಈ ಎರಡೂ ಸ್ವಭಾವಗಳ ವ್ಯಕ್ತಿಗಳ ಚರಿತ್ರೆಯನ್ನು ನಿರ್ವ್ಯಾಜವಾಗಿ ಚಿತ್ರಿಸುವುದರ ಜೊತೆಗೆ ಆಕರ್ಷಕ, ಅನ್ವರ್ಥಕ ಶೀರ್ಷಿಕೆಯನ್ನು ಕೊಟ್ಟಿದ್ದಾರೆ.

ಉದಾಹರಣೆಗೆ: ಗುಂಡೂರಾವ್ ಅವರ ದುರಾಡಳಿತದ ನಂತರ 1983ರ ಚುನಾವಣಾ ಸೋಲು ಕಂಡ ಮೇಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಹೊಣೆ ವಹಿಸಬೇಕೆಂಬ ಸುದ್ದಿ ಬಂದಾಗ ವಡ್ಡರ್ಸೆಯವರು ಗುಂಡೂರಾವ್ ಅವರ ಬಗೆಗೆ ಬರೆದ ವ್ಯಕ್ತಿ ಚಿತ್ರಣ ಬರಹ ‘ಅನಾಹುತಕಾರಿ ಉಲ್ಕೆಗೆ ಮತ್ತೆ ಮಣೆ’.

 ಬರಹವಾಗವುದು ಇಲ್ಲವೇ ಎಚ್. ಡಿ. ದೇವೇಗೌಡರ ಬಗ್ಗೆ ಬರೆದ ‘ಹಾದಿ ತಪ್ಪಿದ ಮಣ್ಣಿನ ಮಗ’ ಬರಹದಲ್ಲಿ ದೇವೇಗೌಡರ ರಾಜಕೀಯ ವ್ಯಕ್ತಿತ್ವವನ್ನು ಚಿತ್ರಿಸುತ್ತಾ ‘‘ಈಗಲೂ ಜನತಾ ಅನ್ನಿಸಿಕೊಂಡಿರುವ ಈ ಹಳೆಯ ಕಾಂಗ್ರೆಸ್‌ನ ವೀರಶೈವ - ಒಕ್ಕಲಿಗ ಪ್ರಭಾವ ತಕ್ಕಡಿಯ ತೂಕದ ಬಟ್ಟು ಆಗಿಯೇ ಉಳಿದಿದ್ದಾರೆ. ದೇವೇಗೌಡರ ರಾಜಕೀಯ ಜೀವನದ ಸ್ವಾರಸ್ಯವಿದು. ಆದರೆ ದೇವೇಗೌಡರು ಮಾತ್ರ ತಾವು ತೂಕದ ಬಟ್ಟು ಎಂಬುದನ್ನು ಎಷ್ಟು ಮಾತ್ರಕ್ಕೂ ಒಪ್ಪಿಕೊಳ್ಳಲಾರರು.’’ - ದೇವೇಗೌಡರ ರಾಜಕೀಯ ತೀರ್ಮಾನಗಳ ಕುರಿತು ಇವತ್ತಿಗೂ ಜನಮಾನಸದಲ್ಲಿ ಅವರ ವ್ಯಕ್ತಿತ್ವದ ಬಗೆಗೆ ಇರುವ ಚಿತ್ರವನ್ನು ವಡ್ಡರ್ಸೆಯವರು ಅಂದೇ ಎಷ್ಟು ಅದ್ಭುತವಾಗಿ ಕಂಡರಿಸಿದ್ದಾರೆ ನೋಡಿ.

ಹಾಗೆಯೇ ‘ಮೋಸ ಹೋದ ಮನುಷ್ಯ’ ಎಂದು ರಾಜಕೀಯವಾಗಿ ಮೋಸ ಹೋಗಿದ್ದ ಬಂಗಾರಪ್ಪನವರ ಬಗೆಗಿನ ಬರಹವಾಗಲಿ, ‘ಜಾಣತನಕ್ಕೆ ಬೆಲೆ ಬರಿಸಿದ ರಾಮಕೃಷ್ಣ ಹೆಗಡೆ’, ‘ಪರಂಪರೆಯ ಬಲಿಪಶು ಚಂದ್ರಶೇಖರ್’, ‘ವ್ಯವಸ್ಥೆಗೆ ಸಲ್ಲದ ಶಕ್ತಿ ಚರಣ್ ಸಿಂಗ್’, ‘ಹುಬ್ಬಳ್ಳಿಯ ಹೌದಪ್ಪ ಬೊಮ್ಮಾಯಿ’, ವಿದ್ಯೆ ಇಲ್ಲದ ಬುದ್ಧಿವಂತ ರಾಮಪ್ಪ’, ‘ಸಜ್ಜನಿಕೆಯ ಜೀವಂತ ಸಾಕ್ಷಿ ಜಗಜೀವನದಾಸ ಶೆಟ್ಟಿ’ ಈ ಬರಹಗಳಲ್ಲಿ ವಡ್ಡರ್ಸೆಯವರು ವ್ಯಕ್ತಿಯ ಬದುಕಿನ ತಾತ್ವಿಕ ವಿಚಾರಗಳಲ್ಲಿ ಆತನು ತೆಗೆದುಕೊಂಡ ನಿಲುವಿನ ಆಧಾರದ ಮೇಲೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುತ್ತಾರೆಯೇ ಹೊರತು ಆ ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ಮುಂದು ಮಾಡಿ ವ್ಯಕ್ತಿಯನ್ನು ಹೊಗಳುವುದೋ ಇಲ್ಲ ಟೀಕಿಸುವ ಕೆಲಸವನ್ನು ಮಾಡಹೋಗಿಲ್ಲ.

 ಮೂರನೆಯ ವಿಭಾಗವಾದ ‘ಓದುಗರೊಡನೆ ಸಂಪಾದಕ’ ಬರಹಗಳು ಕನ್ನಡ ಪತ್ರಿಕಾ ರಂಗದಲ್ಲೇ ಒಂದು ಮಾದರಿ ಬರಹವಿದು. ಓದುಗನಿಂದಲೇ ಪತ್ರಿಕೆ, ಓದುಗರಿಗಾಗಿಯೇ ಪತ್ರಿಕೆ ಎಂಬ ಆಶಯದ ಹಿನ್ನೆಲೆಯಲ್ಲಿ ಹೊರತಂದ ‘ಮುಂಗಾರು’ವಿನ ತತ್ವವನ್ನು ಕೃತಿಗಿಳಿಸಿದ ಮಾತುಗಳ ಬರಹಗಳಿವು. ಓದುಗರು ಸಂಪಾದಕರಲ್ಲಿ ಕೇಳಿದ ಯಾವುದೇ ಪ್ರಶ್ನೆಗಳಿಗೆ ಯಾವುದೇ ಮುಚ್ಚು ಮರೆಯಿಲ್ಲದೆ, ಸಮಾಧಾನದಿಂದ ಓದುಗನ ಎಲ್ಲ ಪ್ರಶ್ನೆ ಮತ್ತು ಅನುಮಾನಗಳಿಗೆ ಉತ್ತರವಾದವು. ಇಲ್ಲಿನ 18 ಬರಹಗಳಲ್ಲಿ ಹೆಚ್ಚಿನ ಬರಹಗಳು ಓದುಗರು ಕೇಳಿದ ಪ್ರಶ್ನೆ, ಎತ್ತಿದ ಅನುಮಾನಗಳಿಗೆ ಸಮರ್ಪಕ ಮತ್ತು ಪ್ರಾಮಾಣಿಕವಾದ ಉತ್ತರವನ್ನು ಕೊಟ್ಟ ಮಾತುಗಳಾಗಿವೆ. ಜೊತೆಗೆ ಆ ಮಾತುಗಳು ವ್ಯಕ್ತಿ ವಡ್ಡರ್ಸೆ ರಘುರಾಮಶೆಟ್ಟರ ಇಲ್ಲವೆ, ಸಂಪಾದಕ ರಘುರಾಮ ಶೆಟ್ಟರ ಮಾತುಗಳಾಗದೆ ಮುಂಗಾರು ಪತ್ರಿಕೆಯ ಒಟ್ಟು ಆಶಯವೇನಿತ್ತು ಆ ಆಶಯದ ಭಾಗವಾಗಿವೆ. ಇಲ್ಲಿನ ಬರಹಗಳಲ್ಲಿ ಎಲ್ಲಿಯೂ ವ್ಯಕ್ತಿಗತವಾದ ದ್ವೇಷ, ಅಸೂಯೆ, ಅಸಹನೆಗಳ ವಾಸನೆಯಿಲ್ಲದಿರುವುದು ವಿಶೇಷ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ‘ಬೀದಿ ಪಾಲಾಗುವ ದುರ್ಬಲ ಇಂದೂಧರ ಅಲ್ಲ’, ‘ಎದ್ದಾಗ ಹೊಗಳಿ ಬಿದ್ದಾಗ ತೆಗಳಲೇ’ ಬರಹಗಳು.

  ‘ಬೇರೆಯೇ ಮಾತು’ ಕೃತಿಯಲ್ಲಿನ ಬರಹಗಳನ್ನು ಓದುತ್ತಿದ್ದರೆ ಇವತ್ತು ಕನ್ನಡ ಜರ್ನಲಿಸಂ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಮತ್ತು ಥಿಯರಿಟಿಕಲ್ ಆದ ಅತ್ಯುತ್ತಮ ಪಠ್ಯಗಳು ಇಲ್ಲಿನ ಲೇಖನಗಳು ಅನ್ನಿಸುತ್ತೆ. ಕನ್ನಡ ಜಾಣ ಜಾಣೆಯರ ಪತ್ರಿಕೆ ಎಂಬ ಟ್ಯಾಗ್ ಲೈನಿನ ಜೊತೆಗೆ ಬರುತ್ತಿದ್ದ ಲಂಕೇಶ್ ಪತ್ರಿಕೆಯ ಕಾಲದಲ್ಲೇ ಸಾಮಾಜಿಕ ನ್ಯಾಯ, ಸಮಾನತೆಯ ಆಶಯಗಳನ್ನು ಹೊತ್ತು, ಓದುಗರ ಸಂಪಾದಕರನ್ನು, ಜಾತ್ಯತೀತ, ಪ್ರಗತಿಪರ ಸಿಬ್ಬಂದಿಯನ್ನು ಹೊಂದಿ ಲಂಕೇಶ್ ಪತ್ರಿಕೆಗಿಂತ ಭಿನ್ನವಾದ, ಹೆಚ್ಚು ನಿಖರ, ನಿಷ್ಟುರ ಸುದ್ಧಿಯನ್ನು ನೀಡುತ್ತಿದ್ದ ‘ಮುಂಗಾರು’ ಪತ್ರಿಕೆ ಹಾಗೂ ಸಂಪಾದಕ, ಹಾಗೂ ಬರವಣಿಗೆಯ ವಿಚಾರದಲ್ಲಿ ಲಂಕೇಶರಗಿಂತ ಹೆಚ್ಚು ನಿಷ್ಟುರ, ನೇರ, ಖಚಿತ, ಪ್ರಾಮಾಣಿಕ ಮತ್ತು ವ್ಯವಹಾರದಲ್ಲಿ ಕಡಿಮೆ ತಿಳುವಳಿಕೆ ಹೊಂದಿದ್ದ ವಡ್ಡರ್ಸೆಯವರು ‘ಪ್ರಸಿದ್ಧ’ ರಾಗದೇ ಹೋದದ್ದು ಕನ್ನಡ ಸಾಹಿತ್ಯ ರಾಜಕಾರಣ ಪತ್ರಿಕಾರಂಗದ ಮೇಲೆ ಹೊಂದಿದ್ದ ಪ್ರಭಾವವೂ ಇರಬಹುದು? ಅಥವಾ 80,90ರ ದಶಕದ ಕನ್ನಡ ಸಾಂಸ್ಕೃತಿಕ ರಾಜಕಾರಣದ ವಿಚಿತ್ರವೂ ಇರಬಹುದು.

ಏನೇ ಆಗಿರಲಿ ಇಂತಹ ವಿಶಿಷ್ಟ ಪತ್ರಕರ್ತ, ಸಂಪಾದಕರನ್ನು, ಅವರ ಬರಹಗಳನ್ನು ತಡವಾಗಿಯಾದರೂ ಕನ್ನಡಿಗರಿಗೆ ಸಂಪಾದಿಸಿ ಕೊಟ್ಟಿರುವ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರಿಗೂ, ಈ ಕೃತಿಯನ್ನು ಪ್ರಕಟಮಾಡಿರುವ ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆಯವರಿಗೂ ಅನಂತ ಧನ್ಯವಾದಗಳು.

* ಈ ಕೃತಿ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

Writer - ಎಚ್. ಎಸ್. ರೇಣುಕಾರಾಧ್ಯ

contributor

Editor - ಎಚ್. ಎಸ್. ರೇಣುಕಾರಾಧ್ಯ

contributor

Similar News