×
Ad

'ಲವ್ ಕೇಸರಿ' ದರೋಡೆಗೆ ಪ್ರಚೋದಿಸುವಂತಿದೆ: ಹಿರಿಯ ಸಾಹಿತಿ ದೇವನೂರ ಮಹಾದೇವ

Update: 2022-04-16 16:08 IST

ಬೆಂಗಳೂರು: 'ಲವ್ ಜಿಹಾದ್' ವಿರುದ್ಧವಾಗಿ 'ಲವ್ ಕೇಸರಿ' ಮಾಡುವಂತೆ ಕರೆ ಕೊಟ್ಟಿರುವುದು ದರೋಡೆಗೆ ಪ್ರಚೋದನೆ ನೀಡುವಂತೆ ಇದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ವಿಶ್ಲೇಷಿಸಿದರು.

ಶನಿವಾರ ನಗರದ ಕುಮಾರಕೃಪಾದಲ್ಲಿರುವ ಗಾಂಧಿಭವನ ಸಭಾಂಗಣದಲ್ಲಿ ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನ ಸಹಯೋಗದೊಂದಿಗೆ ಆಯೋಜಿಸಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಸಂಪಾದನೆಯ ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೆಲ ಸಂಘಟನೆಗಳ ಸದಸ್ಯರು ಕತ್ತಿ ಝಳಪಿಸುತ್ತಾ ಲವ್ ಕೇಸರಿ ಎನ್ನುತ್ತಿದ್ದ ಸುದ್ದಿಯನ್ನು ಇತ್ತೀಚಿಗೆ ಟಿವಿಯಲ್ಲಿ ಕಂಡೆ. ಆದರೆ, ಈ ಮೊದಲು ಲವ್ ಜಿಹಾದ್ ಅನ್ನು ಇವರೇ ಆರೋಪಿಸಿ, ಇದೀಗ ಇದಕ್ಕೆ ಪ್ರತಿಯಾಗಿ ಲವ್ ಕೇಸರಿ ಮಾಡಿ ಎಂದು ಕರೆ ನೀಡಿ, ಅಬ್ಬರಿಸುತ್ತಿದ್ದಾರೆ. ಇದು ಹೇಗೆಂದರೆ, ಅವರು ಕಳ್ಳತನ ಮಾಡುತ್ತಾರೆಂದು, ನಾವು ದರೋಡೆ ಮಾಡಬೇಕು ಎಂದು ಪ್ರಚೋದಿಸಿದಂತೆ ಎಂದು ನುಡಿದರು.

ಲವ್ ಎಂದರೆ ಎಲ್ಲರಿಗೂ ಗೊತ್ತಿದೆ. ಜಿಹಾದ್ ಅನ್ನು ಧರ್ಮ ಯುದ್ಧ ಎನ್ನುತ್ತಾರೆ. ಇನ್ನೂ, ನಿಜವಾದ ಲವ್ ಧರ್ಮವನ್ನೂ ಮೀರಿದೆ. ಲವ್ ಮತ್ತು ಯುದ್ಧದಲ್ಲೂ ಅಜಗಜಾಂತರ ಕ್ರಿಯೆಗಳಿವೆ. ಆದರೆ, ಈ ಲವ್ ಕೇಸರಿಯಲ್ಲಿ ಕೇಸರಿ ಎಂದರೆ ವಿರಕ್ತವಾಗಿದೆ. ಲವ್ ಮತ್ತು ವಿರಕ್ತ ಹೇಗೆ ಸೇರುತ್ತದೆ. ವಿರಕ್ತಿ ಇರುವವರನ್ನು ಲವ್ ಮಾಡಿದರೆ, ಮಾಡಿದವರ ಪಾಡೇನು? ಜತೆಗೆ ಇದೊಂದು ಪುರುಷರ ಸಮಸ್ಯೆ ಆಗಿ ಬಿಟ್ಟಿದೆ ಎಂದು ಹೇಳಿದರು.

ಇಂದು ಮಾಧ್ಯಮ ಕ್ಷೇತ್ರವು ಸಮಸ್ಯೆಗಳನ್ನು ಮಾಡುತ್ತಿವೆಯೊ, ಅಥವಾ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆಯೂ ಗೊತ್ತಾಗುತ್ತಿಲ್ಲ. ಅಲ್ಲದೆ, ಹಿಜಾಬ್ ಪ್ರಕರಣದಲ್ಲಿ ನಿಜವಾದ ಸಮಸ್ಯೆಯ ಪಾಲು ಎಷ್ಟು ಇದನ್ನು ಸಮಸ್ಯಾತ್ಮಕ ಮಾಡಿದ ಮಾಧ್ಯಮಗಳ ಪಾಲು ಎಷ್ಟು ಇರಬಹುದು ಎಂದು ಪ್ರಶ್ನಿಸಿದ ಅವರು, ಇಂದಿನ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರವು ತನ್ನ ನೀತಿ, ನಿಯಮ, ಸಂಯಮ, ಮಾನ, ಘನತೆಗಳನ್ನು ತಾನೇ ತುಳಿದು ನಿಂತಿದೆ. ಇಂತಹ ಸಂದರ್ಭದಲ್ಲಿ ರಘುರಾಮ ಶೆಟ್ಟರು ನೆನಪಾಗುತ್ತಾರೆ ಎಂದು ಹೇಳಿದರು.

ಅಸಮಾನತೆ ಮೌಲ್ಯದ ಚಾತುರ್ವರ್ಣದ ಹಿಂದೂ ಗುಂಪಿನ ಪ್ರತಿಪಾದಕ ಆರೆಸ್ಸೆಸ್ಸಿನ ಗೋಲ್ವಾಲ್ಕರ್ ಹಾಗೂ ಹಿಂಸಾಮೂರ್ತಿ ನಾಥುರಾಂ ಗೋಡ್ಸೆ ಕುಮೌಲ್ಯಗಳನ್ನು ಭಾರತದಲ್ಲೆಡೆ ಬಿತ್ತಿ ಬೆಳೆಯಲು ನಾಗಪುರ ಆರೆಸ್ಸೆಸ್ ಅವಿರತ ಪ್ರಯತ್ನಿಸುತ್ತಲೇ ಇದೆ. ಅಷ್ಟೇ ಅಲ್ಲದೆ, ಭಾರತದ ತುಂಬೆಲ್ಲಾ ಗೋಲ್ವಾಲ್ಕರ್ ಮತ್ತು ಗೋಡ್ಸೆ ನಿರ್ಮಾಣ ಮಾಡಲು ಸ್ಥಳಾವಕಾಶಕ್ಕಾಗಿ ಈ ಚಾತುರ್ವರ್ಣದ ಹಿಂದೂ ಗುಂಪು, ಭಾರತವನ್ನೆಲ್ಲಾ ಆವರಿಸಿ ಕೊಂಡಿರುವ ಗಾಂಧಿ ಮತ್ತು ಅಂಬೇಡ್ಕರ್ ರನ್ನು ನಿರ್ನಾಮ ಮಾಡಲು ಸತತವಾಗಿ ಗಾಂಧಿ ಅಂಬೇಡ್ಕರ್ ಎಂಬ ಆಲ ಮತ್ತು ಅರಳಿಮರಗಳನ್ನು ಕೊಚ್ಚಿ ತರಿದು ಕತ್ತರಿಸಿ ತುಳಿದು ಏನೆಲ್ಲಾ ಮಾಡುತ್ತಿದೆ ಎಂದು ಟೀಕಿಸಿದರು.

ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, ನಾವು ಪತ್ರಿಕಾ ವೃತ್ತಿಗೆ ಪ್ರವೇಶ ಮಾಡುವಾಗ ಇದ್ದ ಮಾಧ್ಯಮ‌  ಕ್ಷೇತ್ರಕ್ಕೂ ಇವತ್ತಿನ ಮಾಧ್ಯಮ ಕ್ಷೇತ್ರಕ್ಕೆ ಸಾಕಷ್ಟು ವ್ಯತ್ಯಾಸ ಇವೆ. ಇದಕ್ಕೆ ಪತ್ರಕರ್ತರನ್ನು ಪತ್ರಿಕಾ ಮಾಲೀಕರನ್ನು ದೂರಲು ಹೋಗುವುದಿಲ್ಲ. ಮಾಧ್ಯಮ ಟ್ರಾಪ್ ನಲ್ಲಿ ಬಿದ್ದಿದೆ. ಇಂತಹ ಸಂದರ್ಭಗಳಲ್ಲಿ ಪರ್ಯಾಯ ಮಾಧ್ಯಮ ಯಾವುದು ಎಂದರೆ ನಮ್ಮ ಕಣ್ಣ ಮುಂದೆ ಬರುವುದು ಮುಂಗಾರು ಮಾತ್ರ ಎಂದರು.

ಓದುಗ ಮತ್ತು ಸಂಪಾದಕರ ನಡುವೆ ಸಂವಾದ ಇಂದು ಮುರಿದು ಬಿದ್ದಿದೆ.  ಓದುಗ ಅಪ್ರಸ್ತುತನಾಗಿದ್ದಾನೆ. ಓದುಗ, ವೀಕ್ಷಕ ‌ತಿರಸ್ಕಾರ ಮಾಡಿದರೂ ಜಾಹೀರಾತುದಾರರ ನಿರ್ದೇಶನದಂತೆ ಮಾಧ್ಯಮ ನಡೆಯುತ್ತದೆ. ಇದರಿಂದ ಮುಕ್ತಗೊಳಿಸುವುದು ಹೇಗೆ ಎಂಬ ಪ್ರಯತ್ನವನ್ನು ರಘುರಾಮ ಶೆಟ್ಟರು  ಅಂದು ಮಾಡಿದ್ದರು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಕೆ.ಮರುಳಸಿದ್ಧಪ್ಪ, ಪ್ರೊ.ಸಿದ್ದರಾಮಯ್ಯ, ಲೇಖಕ ಕೆ‌.ಪುಟ್ಟಸ್ವಾಮಿ, ಅನಂತ್ ನಾಯ್ಕ್, ಅಕ್ಷತಾ ಹುಂಚದಕಟ್ಟೆ  ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News