×
Ad

ಇಂದಿನ ಕಾಲಘಟ್ಟದಲ್ಲಿ ಓದುಗ ಪತ್ರಿಕೆಯ ಒಡೆಯನಲ್ಲ: ದಿನೇಶ್ ಅಮೀನ್ ಮಟ್ಟು

Update: 2022-04-16 19:40 IST

ಬೆಂಗಳೂರು: ಇಂದಿನ ಕಾಲಘಟ್ಟದಲ್ಲಿ ಓದುಗ ಪತ್ರಿಕೆಯ ಒಡೆಯನಲ್ಲ ಎಂಬುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ನುಡಿದರು.

ಶನಿವಾರ ನಗರದ ಗಾಂಧಿ ಭವನದ ಸಭಾಂಗಣದಲ್ಲಿ ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನ ಸಹಯೋಗದೊಂದಿಗೆ ಆಯೋಜಿಸಿದ್ದ ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇಂದಿನ ಪತ್ರಿಕೋದ್ಯಮ, ಪತ್ರಕರ್ತರು ಟ್ರ್ಯಾಪ್‍ನಲ್ಲಿ ಮುಳುಗಿದ್ದಾರೆ. ಇದಕ್ಕೆ ಪರ್ಯಾಯ ಏನು ಎಂದರೆ, ಮುಂಗಾರು ಎಂದೇ ಹೇಳಬಲ್ಲೆ. ಓದುಗರ ಒಡೆತನದ ಪತ್ರಿಕೆ ಆಗಬೇಕು. ಆದರೆ ಇಂದಿನ ಮಾಧ್ಯಮದಲ್ಲಿ ಓದುಗರಿಗೂ ಮತ್ತು ಪತ್ರಿಕೆಗೂ ಸಂಬಂಧವೇ ಇರುವುದಿಲ್ಲ. ಮಾಹಿತಿಗಿಂತ ಜಾಹೀರಾತು ಮುಖ್ಯವಾಗಿದೆ. ಇದರಿಂದ ಹೊರಗೆ ಬರಬೇಕು ಎಂದರೆ ಹೊಸ ದಾರಿಯನ್ನು ಹುಡುಕಬೇಕು ಎಂದರು.

ಸದ್ಯ ಇ-ಪತ್ರಿಕೆಗಳು, ಇದು ಓದುಗರು ಮತ್ತು ಪತ್ರಿಕೆಯನ್ನು ನೇರವಾಗಿ ಸಂಪರ್ಕಿಸಲಾಗುತ್ತಿದೆ. ಜಾಹೀರಾತುಗಳ ಪ್ರಪಂಚದಿಂದ ಮಾಧ್ಯಮವನ್ನು ಹೊರ ತಂದು ಹಾದಿ ತಪ್ಪುತ್ತಿರುವ ಪತ್ರಿಕೋದ್ಯಮವನ್ನು ಮತ್ತೆ ಸರಿ ದಾರಿಗೆ ತರಲು ಸಾಧ್ಯ ಎಂಬುದಾಗಿ ಅವರು ಹೇಳಿದರು.

ನಾವು ಪತ್ರಿಕಾ ವೃತ್ತಿಗೆ ಪ್ರವೇಶ ಮಾಡುವಾಗ ಇದ್ದ ಮಾಧ್ಯಮ  ಕ್ಷೇತ್ರಕ್ಕೂ ಇವತ್ತಿನ ಮಾಧ್ಯಮ ಕ್ಷೇತ್ರಕ್ಕೆ ಸಾಕಷ್ಟು ವ್ಯತ್ಯಾಸ ಇವೆ. ಇದಕ್ಕೆ ಪತ್ರಕರ್ತರನ್ನು ಪತ್ರಿಕಾ ಮಾಲಕರನ್ನು ದೂರಲು ಹೋಗುವುದಿಲ್ಲ ಎಂದ ಅವರು, ಓದುಗ ಮತ್ತು ಸಂಪಾದಕರ ನಡುವೆ ಸಂವಾದ ಇಂದು ಮುರಿದು ಬಿದ್ದಿದೆ. ಓದುಗ ಅಪ್ರಸ್ತುತನಾಗಿದ್ದಾನೆ. ಓದುಗ, ವೀಕ್ಷಕ ತಿರಸ್ಕಾರ ಮಾಡಿದರೂ ಜಾಹೀರಾತುದಾರರ ನಿರ್ದೇಶನದಂತೆ ಮಾಧ್ಯಮ ನಡೆಯುತ್ತದೆ. ಇದರಿಂದ ಮುಕ್ತಗೊಳಿಸುವುದು ಹೇಗೆ ಎಂಬ ಪ್ರಯತ್ನವನ್ನು ರಘುರಾಮ ಶೆಟ್ಟರು ಅಂದು ಮಾಡಿದ್ದರು ಎಂದು ಅವರು ಹೇಳಿದರು.

ಸಂಶೋಧನ ಕೇಂದ್ರ ಕನಸಿತ್ತು..!

ದಿವಂಗತ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರೊಂದಿಗೆ ಜತೆಗೂಡಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ನೆನಪಿನಲ್ಲಿ ಸಂಶೋಧನ ಕೇಂದ್ರ ಸ್ಥಾಪಿಸುವ ಕನಸಿತ್ತು. ಆದರೆ, ಅದು ಕನಸಾಗಿಯೇ ಉಳಿದಿದೆ ಎಂದು ದಿನೇಶ್ ಅಮೀನ್ ಮಟ್ಟು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News