ಜನನಾಯಕನೊಬ್ಬನ ನೋವಿನ ನಿರ್ಗಮನ

Update: 2022-04-17 19:30 GMT

ಕಮ್ಯುನಿಸ್ಟ್ ಚಳವಳಿಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ದು ಬೆಳೆಸಬೇಕೆಂಬ ಆಸೆ ಇಟ್ಟುಕೊಂಡಿದ್ದ ಜಿ.ವಿ.ಎಸ್. ಯುವಕರಿಗೆ ವಿಶೇಷವಾಗಿ ಪ್ರೋತ್ಸಾಹ ಕೊಡುತ್ತಿದ್ದರು. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜಿ.ವಿ.ಎಸ್. ಕಾರಣಕ್ಕಾಗಿ ದಲಿತರ ಮೇಲೆ ಮೇಲ್ಜಾತಿಯ ಮೇಲ್‌ವರ್ಗದ ಜಾತಿವಾದಿ ಭೂಮಾಲಕರು ದೌರ್ಜನ್ಯ ಮಾಡಲು ಹೆದರುತ್ತಿದ್ದರು. ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದರು. ರಾಜ್ಯದ ಎಲ್ಲೇ ಕೋಮು ಗಲಭೆ ನಡೆದರೂ ಬಾಗೇಪಲ್ಲಿ ಸುತ್ತಮುತ್ತಲಿನ ಪ್ರದೇಶ ಗಲಭೆ ಮುಕ್ತವಾಗಿರುತ್ತಿತ್ತು.


ಸ್ವಾತಂತ್ರಾ ನಂತರದ ಏಳು ದಶಕಗಳ ಈಚೆ ನಿಂತು ನೋಡಿದರೆ ಅಂದಿಗೂ ಇಂದಿಗೂ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಅಂದು ಗಾಂಧಿ, ನೆಹರೂ, ಅಂಬೇಡ್ಕರ್, ಸುಭಾಷ್‌ರಂಥ ಐಕಾನ್‌ಗಳಿದ್ದರು. ಈಗ ಐಕಾನ್‌ಗಳು ಹೋಗಲಿ ಜಾತಿ ಮತಗಳನ್ನು ಮೀರಿ ನಿಲ್ಲಬಲ್ಲ ನಾಯಕರೇ ಸಿಗುವುದಿಲ್ಲ. ಇಂದಿನ ಸಮಾಜದಲ್ಲಿ ಜಾತಿ ನಾಯಕರು, ಯೂನಿಯನ್ ನಾಯಕರು, ಗುಂಪಿನ ನಾಯಕರು, ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಾಯಕರು, ರಿಯಲ್ ಎಸ್ಟೇಟ್ ನಾಯಕರು, ಮೈನಿಂಗ್ ಮಾಫಿಯಾಗಳ ನಾಯಕರು ಸಿಗುತ್ತಾರೆ. ಆದರೆ, ಸಮಾಜದ ಎಲ್ಲ ಜನರನ್ನು ಪ್ರೀತಿಸುವ, ಎಲ್ಲರ ಪ್ರೀತಿ ಗಳಿಸಿದ ನಾಯಕರು ಸಿಗುವುದು ಅಪರೂಪ. ನಾನು ಕಂಡಂತೆ ಕಳೆದ ವಾರ ನಮ್ಮನ್ನಗಲಿದ ಬಾಗೇಪಲ್ಲಿಯ ಕಾಮ್ರೇಡ್ ಜಿ.ವಿ.ಶ್ರೀರಾಮರೆಡ್ಡಿ ಇಂಥ ಅಪರೂಪದ ನಾಯಕರು.

ಜಿ.ವಿ.ಎಸ್. ಎಂದೇ ಆತ್ಮೀಯ ವಲಯಗಳಲ್ಲಿ ಕರೆಯಲ್ಪಡುತ್ತಿದ್ದ ಶ್ರೀರಾಮರೆಡ್ಡಿ ಬಾಲ್ಯದಿಂದಲೂ ಕಮ್ಯುನಿಸ್ಟ್ ಚಳವಳಿಯ ಜೊತೆಗೆ ಗುರುತಿಸಿಕೊಂಡವರು. ಕಮ್ಯುನಿಸ್ಟರಾಗಿಯೇ ಕೊನೆಯುಸಿರೆಳೆದರು. ಕಮ್ಯುನಿಸ್ಟ್ ಎಂದು ಜನ ಅವರನ್ನು ಎಂದೋ ಗುರುತಿಸಿದ್ದರು. ಸದಸ್ಯತ್ವದ ಸಾಂಕೇತಿಕತೆಯನ್ನು ಮೀರಿದ ಬದ್ಧತೆ ಮತ್ತು ಜನ ಪ್ರೀತಿ ಅವರಿಗಿತ್ತು. ಅಂತಲೇ ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳಲ್ಲಿ ಮಾತ್ರವಲ್ಲ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜಿ.ವಿ.ಎಸ್. ಅವರಿಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗಳಲ್ಲೂ ಅಭಿಮಾನಿಗಳಿದ್ದರು. ರೆಡ್ಡಿ ಅವರ ಅಂತಿಮ ಯಾತ್ರೆಯಲ್ಲಿ ಬಂದ ಜನರನ್ನು ನೋಡಿದರೆ ಅವರ ಜನಪ್ರಿಯತೆ ಗೊತ್ತಾಗುತ್ತದೆ.

ಕರ್ನಾಟಕದ ಕಮ್ಯುನಿಸ್ಟ್ ಚಳವಳಿಯಲ್ಲಿ ಪಕ್ಷದ ಸೀಮಿತ ಎಲ್ಲೆಗಳನ್ನು ದಾಟಿ ಜನ ನಾಯಕರಾಗಿ ಬೆಳೆದವರು ಕೆಲವೇ ಕೆಲವರು. ನಾನು ಕಂಡಂತೆ ಹುಬ್ಬಳ್ಳಿಯ ಎ.ಜೆ.ಮುಧೋಳ, ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದಿಂದ ಬಂದವರಾದರೂ ಎಲ್ಲ ಸಮುದಾಯಗಳ ಪ್ರೀತಿಯ ನಾಯಕರಾಗಿ ಬೆಳೆದರು. ಅಂತಲೇ ಬಿಜೆಪಿ ಅಭ್ಯರ್ಥಿ ಎದುರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಬಾರಿ ನೂರೈವತ್ತು ಮತಗಳಲ್ಲಿ ಪರಾಭವಗೊಂಡಿದ್ದರು. ಮುಧೋಳರಿಗೂ ಎಲ್ಲ ಪಕ್ಷಗಳಲ್ಲಿ ಅಭಿಮಾನಿಗಳಿದ್ದರು. ಅವರು ತೀರಿಕೊಂಡಾಗ ಅವರ ಅಂತಿಮ ಯಾತ್ರೆಗೂ ಎಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಮುಧೋಳರನ್ನು ಬಿಟ್ಟರೆ ದಾವಣಗೆರೆಯ ಪಂಪಾಪತಿ ಅತ್ಯಂತ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದಿಂದ ಬಂದು ಜವಳಿ ಮಿಲ್ ಕಾರ್ಮಿಕರಾಗಿ, ನಂತರ ದಾವಣಗೆರೆ ನಗರಸಭಾಧ್ಯಕ್ಷರಾಗಿ ಎರಡು ಬಾರಿ ಶಾಸಕರಾಗಿ ಎಲ್ಲಾ ಸಮುದಾಯಗಳ ನಾಯಕರಾಗಿ ಬೆಳೆದವರು. ಅದೇ ರೀತಿ ಮಂಗಳೂರಿನ ಕಮ್ಯುನಿಸ್ಟ್ ನಾಯಕ ಬಿ.ವಿ.ಕಕ್ಕಿಲ್ಲಾಯರು, ಎಂ.ಎಚ್.ಕೃಷ್ಣಪ್ಪ, ಬೆಂಗಳೂರಿನ ಸೂರಿ, ಕಲಬುರಗಿಯ ಗಂಗಾಧರ ನಮೋಶಿ, ಮಾರುತಿ ಮಾನ್ಪಡೆ ಹೀಗೆ ಕೆಲ ನಾಯಕರು ಪಕ್ಷದ ಗೆರೆ ದಾಟಿ ಜನನಾಯಕರಾಗಿ ಬೆಳೆದರು. ಆ ಸಾಲಿನ ಕೊನೆಯ ಸಂಗಾತಿ ಜಿ.ವಿ.ಶ್ರೀರಾಮರೆಡ್ಡಿ ಅವರೆಂದರೆ ಅತಿಶಯೋಕ್ತಿಯಲ್ಲ.

ನಾನು ಜಿ.ವಿ.ಶ್ರೀರಾಮರೆಡ್ಡಿ ಅವರನ್ನು ಮೊದಲ ಬಾರಿ ನೋಡಿದ್ದು ಐವತ್ತು ವರ್ಷಗಳ ಹಿಂದೆ. ಆಗ ತಾನೇ ಚಿಂತಾಮಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತ ಎಸ್‌ಎಫ್‌ಐ ಸಂಘಟನೆಯಲ್ಲಿ ಕ್ರಿಯಾಶೀಲರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ಅವರನ್ನು ಆಗ ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದ ಎಂ.ಕೆ.ಭಟ್ಟರು ಪರಿಚಯಿಸಿದ್ದರು. ಅಂದಿನಿಂದಲೂ ನಾವು ಎಡಪಂಥೀಯ ಚಳವಳಿಯ ಸಹ ಪಯಣಿಗರು. ರೆಡ್ಡಿಯವರು ಸಿಪಿಎಂ ಪೂರ್ಣಾವಧಿ ಕಾರ್ಯಕರ್ತರಾದರು. ಬಾಗೇಪಲ್ಲಿಯ ಜನ ಅವರನ್ನು ಶಾಸಕನನ್ನಾಗಿ ಮಾಡಿ ವಿಧಾನಸಭೆಗೆ ಕಳಿಸಿದರು. ನಾನು ಪತ್ರಿಕೋದ್ಯಮ ಪ್ರವೇಶಿಸಿ ಬರವಣಿಗೆ ಮತ್ತು ಸಂಘಟನೆಯ ಚಟುವಟಿಕೆ ಎರಡರಲ್ಲೂ ತೊಡಗಿಸಿಕೊಂಡೆ.

ಶ್ರೀರಾಮರೆಡ್ಡಿ ಅವರ ಸಂಪರ್ಕ ನಂತರ ತಪ್ಪಿ ಹೋಗಿತ್ತು. ಅವರು ಶಾಸಕರಾಗಿ ವಿಧಾನಸಭೆಗೆ ಬಂದ ನಂತರ ಒಮ್ಮೆ ಸಿಕ್ಕರು. ಆ ದಿನ ಅವರು ಉಡುಪಿಯಲ್ಲಿ ಗೋ ರಕ್ಷಕರೆಂಬ ಪುಂಡರಿಂದ ಹಲ್ಲೆಗೊಳಗಾಗಿ ಬೆತ್ತಲೆ ಮಾಡಲ್ಪಟ್ಟ ಹಾಜಬ್ಬ, ಹಸನಬ್ಬ ಎಂಬ ತಂದೆ ಮಕ್ಕಳ ದಾರುಣ ಸ್ಥಿತಿಯ ಬಗ್ಗೆ ಸದನದಲ್ಲಿ ರೋಷಾವೇಶದಿಂದ ಪ್ರಸ್ತಾಪಿಸಿದರೆ, ಸೆಕ್ಯುಲರ್ ಎಂದು ಹೇಳಿಕೊಳ್ಳುವ ಉಳಿದ ಪಕ್ಷಗಳು ಮೌನ ತಾಳಿದಾಗ, ಕಮ್ಯುನಿಸ್ಟ್ ಸದಸ್ಯ ಶ್ರೀರಾಮರೆಡ್ಡಿ ಏಕಾಂಗಿಯಾಗಿ ನಿಂತು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಅಡ್ಡ ಮಾತಾಡಿದ ಬಿಜೆಪಿ ಸದಸ್ಯರ ಭೂತ ಬಿಡಿಸಿದರು.

ಜನಸಾಮಾನ್ಯರನ್ನು ಜಾತಿ, ಮತದ ಹೆಸರಿನಲ್ಲಿ ವಿಭಜಿಸುತ್ತಿರುವ ಕೋಮುವಾದಿಗಳನ್ನು, ಜಾತಿವಾದಿಗಳನ್ನು ಕಂಡರೆ ಜಿ.ವಿ.ಎಸ್. ಕೆಂಡಾಮಂಡಲರಾಗುತ್ತಿದ್ದರು. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಕುರಿತು ಬಿಜೆಪಿ ಸದಸ್ಯರಾದ ಜಗದೀಶ್ ಶೆಟ್ಟರ್ ಮತ್ತು ಅಶೋಕ ಕಾಟವೆ ಪ್ರಸ್ತಾಪಿಸಲು ಮುಂದಾದಾಗ ಕೋಪಾವಿಷ್ಟರಾದ ಜಿ.ವಿ.ಎಸ್., 'ಅಲ್ಲಿ ಬೆಂಕಿ ಹಚ್ಚಿ ಇಲ್ಲಿ ಪ್ರಸ್ತಾಪಿಸಲು ಬರುವಿರಾ' ಎಂದು ತರಾಟೆಗೆ ತೆಗೆದುಕೊಂಡರು. ರೆಡ್ಡಿ ಅವರ ಕೋಪದ ಬಗ್ಗೆ ಜಗದೀಶ್ ಶೆಟ್ಟರ್ ನಂತರ ಸಿಕ್ಕಾಗ ನೆನಪಿಸಿಕೊಂಡು ಹೇಳಿದರು.

ಅದೊಂದು ಕಾಲವಿತ್ತು. ವಿಧಾನಸಭೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ, ವಾಟಾಳ್ ನಾಗರಾಜ್, ಮಾಧು ಸ್ವಾಮಿ, ಜಯಪ್ರಕಾಶ್ ಹೆಗ್ಡೆ ಇವರ ತಂಡ ಸರಕಾರವನ್ನು ತುದಿಗಾಲ ಮೇಲೆ ನಿಲ್ಲಿಸಲು ಸದಾ ಕ್ರಿಯಾಶೀಲ ಆಗಿರುತ್ತಿತ್ತು. ಜಿ.ವಿ.ಎಸ್. ಅವರಂತೂ ಸದನಕ್ಕೆ ಬರುವ ಮುಂಚೆ ಸಾಕಷ್ಟು ಹೋಮ್‌ವರ್ಕ್ ಮಾಡಿಕೊಂಡು ಬರುತ್ತಿದ್ದರು. ಅಂಕಿ, ಅಂಶಗಳ ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದರು. ಅವಿಭಜಿತ ಕೋಲಾರ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು.

ಕೋಲಾರ ಜಿಲ್ಲೆಯ ಚಿಂತಾಮಣಿಯ ಭೈರಬಂಡಾ ಎಂಬ ಹಳ್ಳಿಯ ಭೂಮಾಲಕರ ಕುಟುಂಬದಲ್ಲಿ ಜನಿಸಿದ ಜಿ.ವಿ.ಎಸ್. ಬಾಗೇಪಲ್ಲಿಗೆ ಬಂದು ನೆಲೆಸಿ ಶಾಸಕರಾಗಿದ್ದು ಒಂದು ರೋಮಾಂಚಕ ಕತೆ. ಜಿ.ವಿ.ಎಸ್. ಅಣ್ಣ ಅಶ್ವತ್ಥನಾರಾಯಣ ರೆಡ್ಡಿ ಕೂಡ ಕಮ್ಯುನಿಸ್ಟ್ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದರು. ತೆಲಂಗಾಣ ರೈತರ ಸಶಸ್ತ್ರ ಹೋರಾಟದ ಕಾಲದಿಂದಲೂ ಕೋಲಾರ ಜಿಲ್ಲೆಯ ಜೊತೆಗೆ ಆಂಧ್ರಪ್ರದೇಶದ ಕಮ್ಯುನಿಸ್ಟ್ ನಾಯಕರ ಒಡನಾಟವಿತ್ತು. ಸಿ.ರಾಜೇಶ್ವರರಾವ್, ಪಿ.ಸುಂದರಯ್ಯ, ನೀಲಂ ರಾಜಶೇಖರ ರೆಡ್ಡಿ, ಕೊಂಡಪಲ್ಲಿ ಸೀತಾರಾಮಯ್ಯ ಅವರು ಆಗಾಗ ಬಂದು ಹೋಗುತ್ತಿದ್ದರು. ಈ ಹಿನ್ನೆಲೆಯಿಂದ ಬಂದ ಶ್ರೀರಾಮರೆಡ್ಡಿ ಮದುವೆಯಾಗದೆ ಪಕ್ಷದ ಪೂರ್ಣಾವಧಿ ಕಾರ್ಯಕರ್ತರಾಗಿ ತಮ್ಮ ಜೀವನವನ್ನು ಸಾರ್ವಜನಿಕ ಬದುಕಿಗೆ ಸಮರ್ಪಿಸಿಕೊಂಡರು.

ಸೋವಿಯತ್ ಸಮಾಜವಾದಿ ವ್ಯವಸ್ಥೆ ಕುಸಿದ ನಂತರ ಜಗತ್ತಿನ ರಾಜಕೀಯ ಚಿತ್ರವೇ ಬದಲಾಯಿತು. ಸಮಾನತೆಯ ಪರವಾದ ಧ್ವನಿಗಳು ಉಡುಗಿ ಹೋದವು. ಭಾರತದಲ್ಲೂ ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಜೊತೆಗೆ ಜನಾಂಗೀಯ ದ್ವೇಷದ ವಿಷಬೀಜ ಬಿತ್ತುವ ಕೋಮುವಾದ ವಕ್ಕರಿಸಿತು. ಬಂಗಾಳ, ತ್ರಿಪುರಗಳು ದಾರಿ ಬಿಟ್ಟವು. ಇಂಥ ಸಂದರ್ಭದಲ್ಲೂ ಬಾಗೇಪಲ್ಲಿಯ ಕೆಂಪುಕೋಟೆಯನ್ನು ಉಳಿಸಿಕೊಂಡ ಜಿ.ವಿ.ಎಸ್. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೇ ಅನ್ಯಾಯ ನಡೆದರೂ ಕಮ್ಯುನಿಸ್ಟ್ ಕಾರ್ಯಕರ್ತರು ನುಗ್ಗಿ ಬಂದು ಪ್ರತಿಭಟಿಸುತ್ತಿದ್ದರು. ಕೋಮು ಗಲಭೆ ಈ ಜಿಲ್ಲೆಗೆ ಕಾಲಿಡದಂತೆ ಎಚ್ಚರ ವಹಿಸಿದರು.

ಶ್ರೀರಾಮರೆಡ್ಡಿ ಅವರನ್ನು ನಾನು ಮತ್ತೆ ಹತ್ತಿರದಿಂದ ನೋಡಲು ಸಾಧ್ಯ ವಾಗಿದ್ದು ಚಿಕ್ಕಬಳ್ಳಾಪುರದಲ್ಲಿ. ಅಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಮಗನನ್ನು ಭೇಟಿ ಮಾಡಲು ಆಗಾಗ ಅಲ್ಲಿಗೆ ಹೋಗುತ್ತಿದ್ದ ನಾನು ಅಲ್ಲಿನ ಹೋರಾಟಗಳನ್ನು ಹತ್ತಿರದಿಂದ ಗಮನಿಸುತ್ತ ಬಂದೆ. ಬಹುಶಃ 2015ನೇ ಇಸವಿ. ಭಾರತ ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷದ ರಾಜ್ಯ ಸಮ್ಮೇಳನ ಚಿಕ್ಕಬಳ್ಳಾಪುರದಲ್ಲಿತ್ತು.

ಆ ಸಮ್ಮೇಳನದ ಬಹಿರಂಗ ಸಭೆ, ಮೆರವಣಿಗೆಗಳನ್ನು ನೋಡಿ ದಂಗಾಗಿ ಹೋದೆ. ಆ ಸಣ್ಣ ಜಿಲ್ಲೆಯಿಂದ ಐವತ್ತು ಸಾವಿರಕ್ಕೂ ಮಿಕ್ಕಿ ಜನ ಬಂದು ಸೇರಿದರು. ಎಲ್ಲರೂ ತಾವೇ ವಾಹನ ಮಾಡಿಕೊಂಡು ಬಂದಿದ್ದರು. ಕರ್ನಾಟಕದ ಕಮ್ಯುನಿಸ್ಟ್ ಪಕ್ಷಗಳ ಸಮ್ಮೇಳನಗಳಲ್ಲಿ ಅಷ್ಟೊಂದು ಜನ ಸೇರಿದ್ದನ್ನು ನಾನು ಅದೇ ಮೊದಲ ಬಾರಿ ಕಂಡೆ.

ವಿಧಾನಸಭಾ ಚುನಾವಣೆಯಲ್ಲಿ ರಿಯಲ್ ಎಸ್ಟೇಟ್ ಮತ್ತು ಮೈನಿಂಗ್ ಮಾಫಿಯಾಗಳನ್ನು ಎದುರಿಸಿ ಬರಿಗೈಯಲ್ಲಿ ಸೆಣಸುತ್ತಿದ್ದ ಜಿ.ವಿ.ಎಸ್. ಎರಡು ಸಲ (1994 ಮತ್ತು 2008) ಗೆದ್ದು ಬಂದು ಜಿಲ್ಲೆಗೆ, ವಿಶೇಷವಾಗಿ ಬಾಗೇಪಲ್ಲಿಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದರು. ಇತ್ತೀಚೆಗೆ ಸಮಾಜ ಸೇವಕರ ವೇಷ ಹಾಕಿಕೊಂಡು ಬಂದ ರಿಯಲ್ ಎಸ್ಟೇಟ್ ದಂಧೆಕೋರರು ಉಚಿತ ಸಾಮೂಹಿಕ ವಿವಾಹ, ಸೀರೆ, ಬಟ್ಟೆ, ತಾಳಿ ಹಂಚಿ ಆರಿಸಿ ಬರತೊಡಗಿದರು.

ಶಾಸಕತ್ವದ ನಂತರ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇತೃತ್ವ ವಹಿಸಿದ ಶ್ರೀರಾಮರೆಡ್ಡಿ ಅವರು ವಿನೂತನ ಹೋರಾಟಗಳನ್ನು ರೂಪಿಸಿದರು. ಉಡುಪಿ ಮಠಗಳಲ್ಲಿ ಪಂಕ್ತಿ ಭೇದದ ವಿರುದ್ಧ ಪಕ್ಷದ ಪರವಾಗಿ ಚಳವಳಿ ಸಂಘಟಿಸಿದರು. ಅಲ್ಲಿಯವರೆಗೆ ಕೇವಲ ಟ್ರೇಡ್ ಯೂನಿಯನ್ ಚಟುವಟಿಕೆಗಳಿಗೆ ಸೀಮಿತ ವಾಗಿದ್ದ ಕಮ್ಯುನಿಸ್ಟ್ ಪಕ್ಷ ಮೊದಲ ಬಾರಿ ಮಠಗಳಲ್ಲಿನ ಪಂಕ್ತಿಭೇದದಂತಹ ವಿಷಯವನ್ನು ಕೈಗೆತ್ತಿಕೊಳ್ಳಲು ಜಿ.ವಿ.ಎಸ್. ಕಾರಣ.

ಸಾಮಾನ್ಯವಾಗಿ ಕಮ್ಯುನಿಸ್ಟ್ ಪಕ್ಷಗಳಲ್ಲಿ ಇಂಥ ವಿಷಯಗಳನ್ನು ಕೈಗೆತ್ತಿಕೊಳ್ಳುವಾಗ ಪಕ್ಷದ ಸಮಿತಿಯ ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆದು ಒಪ್ಪಿಗೆ ಪಡೆಯಬೇಕಾಗುತ್ತದೆ. ಸಾಮಾನ್ಯವಾಗಿ ಇಂಥ ವಿಷಯಗಳಿಗೆ ಒಪ್ಪಿಗೆ ಸಿಗುವುದು ವಿರಳ. ಜಿ.ವಿ.ಎಸ್. ಅದೇನೋ ಕಸರತ್ತು ಮಾಡಿ ಒಪ್ಪಿಗೆ ಪಡೆದು ಪಂಕ್ತಿಭೇದ ವಿರುದ್ಧ ಉಡುಪಿ ಮಠಗಳ ಮುಂದೆ ಪ್ರತಿಭಟನೆ ಮಾಡಿದಾಗ ಲಾಠಿ ಪ್ರಹಾರ ನಡೆಯಿತು. ಇದರಿಂದ ರೊಚ್ಚಿಗೆದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಬಾಗೇಪಲ್ಲಿಗೆ ಬಂದು ಶ್ರೀರಾಮರೆಡ್ಡಿ ಅವರನ್ನು ಸೋಲಿಸಲು ಕರೆ ನೀಡಿ ಹೋದರು.

ಕಮ್ಯುನಿಸ್ಟ್ ಚಳವಳಿಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ದು ಬೆಳೆಸಬೇಕೆಂಬ ಆಸೆ ಇಟ್ಟುಕೊಂಡಿದ್ದ ಜಿ.ವಿ.ಎಸ್. ಯುವಕರಿಗೆ ವಿಶೇಷವಾಗಿ ಪ್ರೋತ್ಸಾಹ ಕೊಡುತ್ತಿದ್ದರು.ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜಿ.ವಿ.ಎಸ್. ಕಾರಣಕ್ಕಾಗಿ ದಲಿತರ ಮೇಲೆ ಮೇಲ್ಜಾತಿಯ ಮೇಲ್‌ವರ್ಗದ ಜಾತಿವಾದಿ ಭೂಮಾಲಕರು ದೌರ್ಜನ್ಯ ಮಾಡಲು ಹೆದರುತ್ತಿದ್ದರು. ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದರು. ರಾಜ್ಯದ ಎಲ್ಲೇ ಕೋಮು ಗಲಭೆ ನಡೆದರೂ ಬಾಗೇಪಲ್ಲಿ ಸುತ್ತಮುತ್ತಲಿನ ಪ್ರದೇಶ ಗಲಭೆ ಮುಕ್ತವಾಗಿರುತ್ತಿತ್ತು.

ತನ್ನ ಇಡೀ ಬದುಕನ್ನು ಕಮ್ಯುನಿಸ್ಟ್ ಚಳವಳಿಗೆ ಸಮರ್ಪಿಸಿಕೊಂಡಿದ್ದ ಶ್ರೀರಾಮರೆಡ್ಡಿ ಕೊನೆಯ ದಿನಗಳಲ್ಲಿ ತಮ್ಮ ಉಸಿರಿನ ಉಸಿರಾಗಿದ್ದ ಕಮ್ಯುನಿಸ್ಟ್ ಪಕ್ಷದಿಂದ ಹೊರಗೆ ಹೋಗಬೇಕಾಗಿ ಬಂದಾಗ ಸಾಕಷ್ಟು ಯಾತನೆಪಟ್ಟರು. ಪಕ್ಷದಿಂದ ಹೊರಗೆ ಹೋದರೂ ಜನನಾಯಕನಾಗಿ ಬೆಳೆದುದರಿಂದ ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ಅವರ ಬಳಿ ಬರುತ್ತಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಒಂದು ವೇದಿಕೆ ಇರಲೆಂದು ಪ್ರಜಾ ಸಂಘರ್ಷ ಸಮಿತಿ ಸ್ಥಾಪಿಸಿದರು. ಅದು ಕೂಡ ಕಮ್ಯುನಿಸ್ಟ್ ಪಕ್ಷದ ಇನ್ನೊಂದು ವೇದಿಕೆಯಂತಿತ್ತು. ಜಿ.ವಿ.ಎಸ್. ಸಾಮರ್ಥ್ಯ ಎಷ್ಟಿತ್ತೆಂದರೆ ಪಕ್ಷದಿಂದ ಹೊರಗೆ ಬಂದ ನಂತರವೂ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಾಲೂಕಿನ ಅರ್ಧಕ್ಕಿಂತ ಹೆಚ್ಚು ಸ್ಥಾನಗಳು ತಮ್ಮದಾಗಿಸಿಕೊಂಡರು.

ಸಮಾಜದಲ್ಲಿ ಬದಲಾವಣೆ ತರಲು ಹೊರಟ ಪಕ್ಷಗಳಲ್ಲೂ ಒಮ್ಮಮ್ಮೆ ತಪ್ಪುಗಳಾಗುತ್ತವೆ. ಇವು ಕೂಡ ಈ ಸಮಾಜದಿಂದ ಬಂದ ಮನುಷ್ಯರೇ ಕಟ್ಟಿಕೊಂಡ ಪಕ್ಷಗಳು. ಯಾವುದಾವುದೋ ಕಾರಣಗಳಾಗಿ ಮಾಡುವ ತಪ್ಪುಗಳನ್ನು ಚರಿತ್ರೆ ಕ್ಷಮಿಸುವುದಿಲ್ಲ. ಜ್ಯೋತಿ ಬಸು ಪ್ರಧಾನಿಯಾಗುವ ಅಪೂರ್ವ ಅವಕಾಶ ಬಂದಿತ್ತು. ಅವರು ಪ್ರಧಾನಿಯಾಗಿದ್ದರೆ ಭಾರತದಲ್ಲಿ ಫ್ಯಾಶಿಸ್ಟರು ಈ ಪರಿ ಬಾಲ ಬಿಚ್ಚುತ್ತಿರಲಿಲ್ಲ. ಆದರೆ, ವಿಷಾದದ ಸಂಗತಿಯೆಂದರೆ ಬಸು ಪ್ರಧಾನಿಯಾಗುವ ಅವಕಾಶವನ್ನು ಪಕ್ಷ ತಾನಾಗಿ ಕಳೆದುಕೊಂಡಿತು.

ಇಂಥ ಅವಕಾಶ ಒಂದು ಪಕ್ಷಕ್ಕಾಗಲಿ, ಒಬ್ಬ ವ್ಯಕ್ತಿಗಾಗಲಿ ಮತ್ತೆ ಮತ್ತೆ ಬರುವುದಿಲ್ಲ. ಜ್ಯೋತಿ ಬಸು ಅವರಂಥ ಪರ್ಸನಾಲಿಟಿಗೆ ಬಂದ ಅವಕಾಶ ಅದು. ಅದನ್ನು ಕಳೆದುಕೊಂಡರು. ಈಗ ಇನ್ನೊಬ್ಬ ಜ್ಯೋತಿ ಬಸು ಹುಟ್ಟಿ ಬರುವುದಿಲ್ಲ. ಕಮ್ಯುನಿಸ್ಟ್ ಪಕ್ಷಗಳ ಒಂದು ಸಮಸ್ಯೆ ಅಂದರೆ ಜನನಾಯಕನಾಗಿ ಬೆಳೆದ ಸಂಗಾತಿಯನ್ನು ಪಕ್ಷದ ಆಯಕಟ್ಟಿನ ಜಾಗ ಹಿಡಿದು ಕೂತ ಕಾರಕೂನ ಮನೋಭಾವದ ಸಣ್ಣ ಜನ ಸಹಿಸುವುದಿಲ್ಲ. ಶಿಸ್ತಿನ ಹೆಸರಿನಲ್ಲಿ ಕಡಿವಾಣ ಹಾಕಲು ಹೊರಟಾಗ ಹೀಗಾಗುತ್ತವೆ. ಭಾರತದ ಕಮ್ಯುನಿಸ್ಟ್ ಪಕ್ಷಗಳು ಸೋವಿಯತ್ ಕಾಲದ ಸ್ಟಾಲಿನ್ ಯುಗದಿಂದ ಹೊರ ಬಂದಂತೆ ಕಾಣುವುದಿಲ್ಲ.

ಜಿ.ವಿ.ಶ್ರೀರಾಮರೆಡ್ಡಿ ಅವರ ವಿಷಯದಲ್ಲಿ ಪಕ್ಷದ ಒಳಗೆ ಏನು ನಡೆಯಿತೋ ನನಗೆ ಗೊತ್ತಿಲ್ಲ. ಎಲ್ಲ ಮನುಷ್ಯರಲ್ಲಿ ಇರುವ ದೌರ್ಬಲ್ಯಗಳು ಅವರಲ್ಲೂ ಇದ್ದಿರಬಹುದು. ಅವರನ್ನು ಹೊರಗೆ ಹಾಕಿದವರಲ್ಲೂ ಇದ್ದಿರಬಹುದು. ಆದರೆ ಬದುಕಿನ ಇಳಿ ಸಂಜೆಯಲ್ಲಿ ನಂಬಿದ ಸಿದ್ಧಾಂತ, ಪಕ್ಷಕ್ಕಾಗಿ ದುಡಿದ ಬದುಕನ್ನೇ ಸಮರ್ಪಿಸಿಕೊಂಡ ಬಾಗೇಪಲ್ಲಿಯಂಥ ಕೋಟೆಯನ್ನು ಉಳಿಸಿಕೊಂಡ ರೆಡ್ಡಿ ಅವರನ್ನು ನೋವಿನಿಂದ ನಿರ್ಗಮಿಸುವಂತೆ ಮಾಡದೇ ಗೌರವದಿಂದ ಬೀಳ್ಕೊಡಬೇಕಿತ್ತು. ನಾವು ಏನೇ ಪೇಚಾಡಿದರೂ ಇನ್ನೊಬ್ಬ ಜಿ.ವಿ.ಎಸ್. ಮತ್ತೆ ಹುಟ್ಟಿ ಬರುವುದಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News