ಅಂಬೇಡ್ಕರ್ ಆದರ್ಶ ಮೈಗೂಡಿಸಿಕೊಳ್ಳಿ: ಮೌಲಾನ ಶಬ್ಬಿರ್ ಅಹ್ಮದ್ ನದ್ವಿ

Update: 2022-04-17 18:09 GMT

ಬೆಂಗಳೂರು, ಎ.17: ಶ್ರೇಷ್ಠ ಮಾನವತಾವಾದಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ನಾಸಿಹ್‍ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಮೌಲಾನ ಶಬ್ಬಿರ್ ಅಹ್ಮದ್ ನದ್ವಿ ಕರೆ ನೀಡಿದರು.

ರವಿವಾರ ಲಿಂಗರಾಜುಪುರದಲ್ಲಿ ನಾಸಿಹ್ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಅವರ ತತ್ವಗಳಾಗಿದ್ದವು. ಶಿಕ್ಷಣ ಪಡೆಯುವುದರಿಂದ ಮಾತ್ರ ಶೋಷಿತರ ಉದ್ಧಾರ ಸಾಧ್ಯ ಎಂಬುದು ಅವರ ನಿಲುವಾಗಿತ್ತು. ಅದೇ ರೀತಿ, ಮೂಢ ನಂಬಿಕೆಗಳಿಂದ ಹೊರಬರಬೇಕು ಎಂದು ಸಲಹೆ ನೀಡಿದರು.

ಕೆಎಸ್‍ಎಸ್‍ಡಿ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಮಾತನಾಡಿ, ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು. 

ಸಂಯುಕ್ತ ವ್ಯವಸ್ಥೆ ಪ್ರತಿಪಾದಿಸುವ ಏಕತೆ ಮತ್ತು ಸಮಗ್ರತೆಯ ಆಧಾರದಲ್ಲಿ ಅಂಬೇಡ್ಕರ್ ಅವರು ಭಾರತಕ್ಕೆ ಬೃಹತ್ ಸಂವಿಧಾನ ರಚಿಸಿಕೊಟ್ಟರು. ದೇಶದ ಮೊದಲ ಕಾನೂನು ಸಚಿವರಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಸಮಾನ ಅವಕಾಶ ದೊರಕಿಸಿಕೊಟ್ಟರು. ಕಾರ್ಮಿಕರಲ್ಲಿ ಹೋರಾಟದ ಕಿಚ್ಚು ಹಚ್ಚಿದ ಅವರು ಎಲ್ಲ ನಾಗರಿಕರಿಗೂ ಆದರ್ಶಪ್ರಾಯ ಎಂದು ನುಡಿದರು.

ನಾಸಿಹ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಸಾದಿಕ್ ಪಾಶಾ ಮಾತನಾಡಿ, ಮೌಢ್ಯ ಅಳಿಸಿ ಹಾಕಲು ಶಿಕ್ಷಣವೇ ಅಸ್ತ್ರ ಎಂದು ಪ್ರತಿಪಾದಿಸಿದ ಹೆಗ್ಗಳಿಕೆ ಅವರದ್ದು. ಭಾರತದಲ್ಲಿ ಆರ್ಥಿಕ ಸುರಕ್ಷತೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮಾರ್ಗದರ್ಶಿ ಸೂತ್ರ ಒದಗಿಸಿದ್ದರು ಎಂದು ಹೇಳಿದರು.

ದಲಿತ ಹೋರಾಟಗಾರ ಅರವಿಂದ್ ಬುದ್ಧ ಮಾತನಾಡಿ, ಅಂಬೇಡ್ಕರ್ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ಕಾನೂನು ತಜ್ಞರಾಗಿದ್ದರು. ವಿಶ್ವದ ಹಲವು ದೇಶಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತದೆ. ಅವರು ಜ್ಞಾನದ ಭಂಡಾರ. ಅಂತಹ ಮೇರುವ್ಯಕ್ತಿಯನ್ನು ಮನುವಾದಿಗಳು ಜಾತಿಯ ಕಣ್ಣಿನಲ್ಲಿ ನೋಡುವುದು ಸರಿಯಲ್ಲ ಎಂದು ನುಡಿದರು.

ಕಾರ್ಯಕ್ರಮದಲ್ಲಿ ದಲಿತ ಪರ ಹೋರಾಟಗಾರರಾದ ಪರ್ಥಿಬನ್, ಕಾರ್ತಿಕ್, ಕುಬೇರ್, ನಾಸಿಹ್ ಎಜುಕೇಷನಲ್ ಟ್ರಸ್ಟ್‍ನ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News