×
Ad

ಮಂಗಳೂರು | ಫಿಶ್‌ ಮೀಲ್‌ ಕಾರ್ಖಾನೆ ದುರಂತದಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆ

Update: 2022-04-18 09:58 IST
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಅಸ್ವಸ್ಥ ಕಾರ್ಮಿಕರು

ಮಂಗಳೂರು, ಎ.18: ಎಂಎಸ್ಇಝಡ್‌ (ಮಂಗಳೂರು ವಿಶೇಷ ಆರ್ಥಿಕ ವಲಯ)ನಲ್ಲಿರುವ ಶ್ರೀ ಉಲ್ಕಾ(Shree Ulka LLP) ಎಂಬ ಮೀನು ಸಂಸ್ಕರಣಾ ಕಂಪೆನಿಯೊಂದರಲ್ಲಿ ರವಿವಾರ ರಾತ್ರಿ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಆಸ್ಪತ್ರೆಗೆ ದಾಖಲಾಗಿ ಗಂಭೀರಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಿರಾಜುಲ್ ಇಸ್ಲಾಂ ಮತ್ತು ಶರಾಫತ್ ಆಲಿ ಎಂಬವರು ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಸಮೀರುಲ್ ಇಸ್ಲಾಂ, ಉಮರ್ ಫಾರೂಕ್ ಹಾಗೂ ನಿಝಾಮುದ್ದೀನ್ ಸಾಬ್ ಎಂಬವರು ರವಿವಾರ ರಾತ್ರಿ ಮೃತಪಟ್ಟಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಈ ಮೀನು ಸಂಸ್ಕರಣಾ ಕಂಪೆನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ರವಿವಾರ ರಾತ್ರಿ ಮೀನು ಸಂಸ್ಕರಣಾ ಕಂಪೆನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಿಝಾಮುದ್ದೀನ್ ಎಂಬವರು ಮೊದಲು ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಉಳಿದ ಏಳು ಮಂದಿ ಆತನ ರಕ್ಷಣೆಗಾಗಿ ತೊಟ್ಟಿಗೆ ಇಳಿದ ಕಾರಣ ಅವರೂ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ರಾಸಾಯನಿಕ ಬಳಕೆಯಾಗಿದೆಯೇ ಎಂಬ ಕುರಿತಂತೆ ಸಂಬಂಧ ಪಟ್ಟವರು ಮಾಹಿತಿ ನೀಡಲಿದ್ದಾರೆ ಎಂದವರು ಹೇಳಿದ್ದಾರೆ.

ಹಸನ್ ಅಲಿ, ಮುಹಮ್ಮದ್ ಕರೀಮುಲ್ಲಾ ಮತ್ತು ಹಫೀಝುಲ್ಲಾ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಹಾಗೂ ಅಸ್ವಸ್ಥಗೊಂಡಿರುವ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.

    ಮೃತಪಟ್ಟವರ ಬಗ್ಗೆ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಿ ಮೃತರ ವಾರಸುದಾರರಿಗೆ ಹಸ್ತಾಂತರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News