×
Ad

ಸೈಂಟ್ ಮೇರಿಸ್ ದ್ವೀಪದಲ್ಲಿ ದುರಂತ; ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರಕ್ಕೆ ಬಿದ್ದು ಮೃತ್ಯು

Update: 2022-04-18 14:46 IST
ಸತೀಶ್ ಎಸ್.ಕಲ್ಯಾಣ್ ಶೆಟ್ಟಿ | ಸತೀಶ್ ಎಂ.ನಂದಿಹಳ್ಳಿ

ಉಡುಪಿ : ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಬಂದಿದ್ದ ಬೆಂಗಳೂರಿನ ವಿದ್ಯಾರ್ಥಿಗಳಿಬ್ಬರು ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಕಸ್ಮಿಕ ವಾಗಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಬೆಂಗಳೂರಿನ ಯಲಹಂಕ ಜಿಕೆವಿಕೆ ಕೃಷಿ ವಿಶ್ವ ವಿದ್ಯಾಲಯದ  ಬಿಎಸ್ಸಿ ಅಗ್ರಿಕಲ್ಚರ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಹಾವೇರಿಯ ಸತೀಶ್ ಎಂ.ನಂದಿಹಳ್ಳಿ(೨೧) ಮತ್ತು ಬಾಗಲ ಕೋಟೆಯ ಸತೀಶ್ ಎಸ್.ಕಲ್ಯಾಣ್ ಶೆಟ್ಟಿ(೨೧)ಎಂದು ಗುರುತಿಸಲಾಗಿದೆ.

ಜಿಕೆವಿಕೆ ಕೃಷಿ ವಿಶ್ವ ವಿದ್ಯಾಲಯದ ೬೫ ಮಂದಿ ವಿದ್ಯಾರ್ಥಿಗಳು ಇಬ್ಬರು ಉಪನ್ಯಾಸಕರು ಹಾಗೂ ಇಬ್ಬರು ಭೋದಕೇತರ ಸಿಬ್ಬಂದಿ ಜೊತೆ ಎ.೧೪ರಂದು ಬಸ್ಸಿನಲ್ಲಿ ಪ್ರವಾಸ ಹೊರಟಿದ್ದರು. ಇವರು ಕೊಯಮುತ್ತೂರು, ಕೊಚ್ಚಿ ಮುಗಿಸಿ, ಇಂದು ಉಡುಪಿಗೆ ಆಗಮಿಸಿದ್ದರು. ಮಲ್ಪೆ ಬೀಚ್‌ಗೆ ಆಗಮಿಸಿದ ಇವರು, ಅಲ್ಲಿಂದ ಬೋಟು ಮೂಲಕ ಮಲ್ಪೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದರು.

ಅಲ್ಲಿ ಕೆಲವರು ಸಮುದ್ರದಲ್ಲಿ ಆಡುತ್ತಿದ್ದರೆ, ಇವರಿಬ್ಬರು ಬಂಡೆಕಲ್ಲಿನ ಮೇಲೆ ನಿಂತು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದರು. ಆಗ ಸಮುದ್ರದ ಅಲೆ ಬಂಡೆ ಕಲ್ಲಿಗೆ ಬಡಿಯೆತ್ತೆನ್ನಲಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಇವರಿಬ್ಬರು ನೀರಿಗೆ ಬಿದ್ದು ಮುಳುಗಿ ನಾಪತ್ತೆಯಾದರು.

ಅದರಲ್ಲಿ ಸತೀಶ್ ನಂದಿಹಳ್ಳಿಯನ್ನು ಕೂಡಲೇ ನೀರಿನಿಂದ ಮೇಲಕ್ಕೆ ಎತ್ತಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ತೀವ್ರವಾಗಿ ಅಸ್ವಸ್ಥಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಸತೀಶ್ ಎಸ್.ಕಲ್ಯಾಣ್ ಶೆಟ್ಟಿ ಮೃತ ದೇಹವು ಸಂಜೆ ೫.೩೦ರ ಸುಮಾರಿಗೆ ಅದೇ ಜಾಗದಲ್ಲಿ ಪತ್ತೆಯಾಗಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸ ಲಾಗಿದೆ. ಕುಟುಂಬಸ್ಥರು ತಮ್ಮ ಊರಿನಿಂದ ಹೊರಟಿದ್ದು, ರಾತ್ರಿ ತಲುಪುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News