ಮನುಸ್ಮೃತಿ ಸುಟ್ಟಿದಕ್ಕೆ ಬ್ರಾಹ್ಮಣ ಹೆಣ್ಣು ಮಕ್ಕಳೇ ಖುಷಿ ಪಟ್ಟಿದ್ದಾರೆ: ನಟರಾಜ್ ಹುಳಿಯಾರ್
ಬೆಂಗಳೂರು, ಎ.20: ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟಿದ್ದಕ್ಕೆ ಬ್ರಾಹ್ಮಣ ಹೆಣ್ಣು ಮಕ್ಕಳೇ ಖುಷಿ ಪಟ್ಟಿದ್ದಾರೆ ಎಂದು ಚಿಂತಕ ಡಾ.ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ಬುಧವಾರ ನಗರದ ಕೊಂಡಜ್ಜಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ದಲಿತರು ಕೆರೆ ನೀರು ಕುಡಿಯುವ ಹೋರಾಟ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಮನುಧರ್ಮದ ಮನುಸ್ಮೃತಿ ಅನ್ನು ಬೆಂಕಿಯಿಂದ ಸುಟ್ಟುಹಾಕಿದರು.ಈ ನಡೆಯನ್ನು ಬ್ರಾಹ್ಮಣ ಹೆಣ್ಣು ಮಕ್ಕಳೇ ಶ್ಲಾಘಿಸಿ ಖುಷಿಪಟ್ಟರು.ಏಕೆಂದರೆ, ಮನುಸ್ಮೃತಿ ಅಂಶ, ಆಚರಣೆಗಳಿಂದ ಆ ಹೆಣ್ಣು ಮಕ್ಕಳು ಬೇಸತ್ತು ಹೋಗಿದ್ದರು ಎಂದು ನುಡಿದರು.
ಈ ಜಾತಿ ಪದ್ಧತಿ ಅಂಬೇಡ್ಕರ್ ಅವರನ್ನು ಹಲವು ಬಾರಿ ಕೊಂದಿದೆ.ಅಷ್ಟೇ ಅಲ್ಲದೆ, ಜಾತಿಯ ಸಮಾಜಕ್ಕೆ ಪ್ರತಿಭೆಗಳನ್ನು ಗುರುತಿಸುವ ಶಕ್ತಿಯೂ ಇಲ್ಲದಂತೆ ಆಗಿದೆ ಎಂದು ಅಂಬೇಡ್ಕರ್ ಪದೇ ಪದೇ ಹೇಳುತ್ತಿದ್ದರು ಎಂದ ಅವರು, ಸಂವಿಧಾನ, ಸಮಾನತೆ, ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ ಎಂದರು.
ಬಾಲ್ಯಾವಸ್ಥೆಯಿಂದ ಹಿಡಿದು ಜೀವನದ ಅಂತಿಮ ಘಟ್ಟದವರೆವಿಗೂ ಹತ್ತು ಹಲವು ಜಾತಿ ತಾರತಮ್ಯಗಳ ಅವಮಾನಗಳನ್ನು ಅನುಭವಿಸಿದರೂ ವಿಚಲಿತರಾಗದ ಅಂಬೇಡ್ಕರ್ ಅವರಿಗೆ ಶ್ರೇಣೀಕರಣ ಜಾತಿವ್ಯವಸ್ಥೆ ಹಾಸುಹೊಕ್ಕಾಗಿರುವ ಸಾಂಪ್ರದಾಯಿಕ ಸಮಾಜವೇ, ದೀನ ದಲಿತರಷ್ಟೇ ಅಲ್ಲದೆ ಸರ್ವರ ಒಳಿತಿಗೆ ಶ್ರಮಿಸುವ ನಿಟ್ಟಿನಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರೇರಣೆಯಾಯಿತು ಎಂದು ಅವರು ತಿಳಿಸಿದರು.
ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ ವಿಮೋಚನೆಯ ಸೈದ್ಧಾಂತಿಕ ಚಿಂತನೆಯನ್ನು ಕಠಿಣ ಪರಿಶ್ರಮ ಮತ್ತು ಅಧ್ಯಯನಶೀಲತೆಯಿಂದ ಸಾಧಿಸಿ ನಾವು ಕಾಣದ ಭಾರತವನ್ನು ತೋರಿಸಿದವರು ಅಂಬೇಡ್ಕರ್. ನೆಹರು ಅನಾವರಣಗೊಳಿಸಿದ ಭಾರತದರ್ಶನಕ್ಕಿಂತ ಅಂಬೇಡ್ಕರ್ ಮತ್ತು ಗಾಂಧಿ ತೋರಿದ ಭಾರತ ಈ ನೆಲಕ್ಕೆ ಹೆಚ್ಚು ಹತ್ತಿರವಾದದ್ದು. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಮೋಚನಕಾರರಾಗಿ ಅಂಬೇಡ್ಕರ್ ಈ ದೇಶಕ್ಕೆ ಸಾರ್ವಕಾಲಿಕವಾಗಿ ಮಾದರಿಯಾಗಿ ನಿಲ್ಲುವ ಮೇರು ವ್ಯಕ್ತಿತ್ವ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ನಿರ್ದೇಶಕ ಎನ್.ನಾಗೇಂದ್ರ ಪ್ರಸಾದ್, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ನಿರ್ದೇಶಕಿ ಕೆ.ಎನ್.ಲತಾ, ದಲಿತ ಮುಖಂಡ ಬಿ.ಗೋಪಾಲ್, ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ಪುತ್ರಿ ಡಾ.ಎಸ್
ಮಾನಸಾ, ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಸೇರಿದಂತೆ ಪ್ರಮುಖರಿದ್ದರು.