"ಆರ್ಥಿಕ‌ ನಿರ್ವಹಣೆ ಪೂರ್ವಾಶ್ರಮದಲ್ಲಿ ಟಿವಿ ಡಿಬೇಟ್‌ಗಳ ಪ್ಯಾನೆಲಿಸ್ಟ್ ಆಗಿ ಕೂಗಿದಷ್ಟು ಸರಳವಲ್ಲ!"

Update: 2022-04-21 07:32 GMT
ದಿನೇಶ್ ಗುಂಡೂರಾವ್ (Photo credit: Twitter)

ಬೆಂಗಳೂರು, ಎ.21: ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹಣದುಬ್ಬರದ ಬಗ್ಗೆ ಮತ್ತೊಮ್ಮೆ ಅರ್ಥಹೀನ ಮಾತನಾಡಿದ್ದಾರೆ. ಆರ್ಥಿಕ‌ ನಿರ್ವಹಣೆ ಪೂರ್ವಾಶ್ರಮದಲ್ಲಿ ಟಿವಿ ಡಿಬೇಟ್‌ಗಳ ಪ್ಯಾನೆಲಿಸ್ಟ್ ಆಗಿ ಕೂಗಿದಷ್ಟು ಸರಳವಲ್ಲ ಎಂದು ಸಚಿವೆ ತಿಳಿದುಕೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅರ್ಥಹೀನ ಹೇಳಿಕೆಗಳಿಂದಲೇ ಅಪಖ್ಯಾತಿ ಗಳಿಸಿರುವ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್,ಈಗ ಹಣದುಬ್ಬರದ ಬಗ್ಗೆ ಮತ್ತೊಮ್ಮೆ ಅರ್ಥಹೀನ ಮಾತನಾಡಿದ್ದಾರೆ. ದೇಶದ ಚಿಲ್ಲರೆ ಹಣದುಬ್ಬರ ದರ 17 ತಿಂಗಳ ಗರಿಷ್ಠಮಟ್ಟ 6.9ಕ್ಕೆ ತಲುಪಿದೆ‌‌.‌ ಸಗಟು ಹಣದುಬ್ಬರ ದರ 4 ತಿಂಗಳ ಗರಿಷ್ಠ ಮಟ್ಟ ಶೇ.14.55ಕ್ಕೆ ತಲುಪಿದೆ. ಇಷ್ಟಾದರೂ ಹಣದುಬ್ಬರ ಅತಿಯಾಗಿ ಏರಿಕೆಯಾಗಿಲ್ಲ ಎಂದರೆ ಏನರ್ಥ.? ಎಂದವರು ಪ್ರಶ್ನಿಸಿದ್ದಾರೆ.

ಏರುತ್ತಿರುವ ಸಗಟು ಹಣದುಬ್ಬರ ಭವಿಷ್ಯದಲ್ಲಿ ಚಿಲ್ಲರೆ ಹಣದುಬ್ಬರದ ಮೇಲೂ ನೇರ ಪರಿಣಾಮ ಬೀರಲಿದೆ. ಈಗಾಗಲೇ ಬೆಲೆಯೇರಿಕೆಯಿಂದ ಜನಸಾಮಾನ್ಯ ತತ್ತರಿಸಿದ್ದಾನೆ. ಹಣದುಬ್ಬರ ಹೀಗೆ ಏರುತ್ತಿದ್ದರೆ ಜನರ ಬದುಕು ಏನಾಗಬೇಕು.? ಹಣದುಬ್ಬರದ ಬಗ್ಗೆ ಆರ್ಥಿಕ ತಜ್ಞರ ಆತಂಕ ಭಾರತದ ಮಟ್ಟಿಗೆ ಎಚ್ಚರಿಕೆಯ ಕರೆಗಂಟೆ. ಅರ್ಥ ಸಚಿವರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದವರು ಕಿವಿಮಾತು ಹೇಳಿದ್ದಾರೆ.

ಹಣದುಬ್ಬರ ನಿಯಂತ್ರಿಸಲು ಸ್ವತಃ RBI ಕೂಡ ಹೆಣಗಾಡುತ್ತಿದೆ. ಹೀಗಿರುವಾಗ ಸಚಿವೆ ನಿರ್ಮಲಾ ಸೀತಾರಾಮನ್ ಅವಾಸ್ತವಿಕ ಅಂಕಿ ಅಂಶಗಳ ಮೂಲಕ ದೇಶದ ದಾರಿ ತಪ್ಪಿಸಬಾರದು.‌ ಬಹುಶಃ ಅರ್ಥಸಚಿವರಿಗೆ ಹಣಕಾಸು ಇಲಾಖೆಯ ಮಹತ್ವವೇ ಗೊತ್ತಿಲ್ಲ. ಆರ್ಥಿಕ‌ ನಿರ್ವಹಣೆ ಪೂರ್ವಾಶ್ರಮದಲ್ಲಿ TV ಡಿಬೇಟ್‌ಗಳ ಪ್ಯಾನೆಲಿಸ್ಟ್ ಆಗಿ ಕೂಗಿದಷ್ಟು ಸರಳವಲ್ಲ ಎಂದು ಸಚಿವೆ ತಿಳಿದುಕೊಳ್ಳಲಿ ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News