ಬೆಂಗಳೂರು | ಪೂಜೆ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆ: ದೇವಾಲಯಕ್ಕೆ ಪೊಲೀಸರ ನೋಟಿಸ್

Update: 2022-04-21 16:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.21: ಪೂಜೆ ಸಂದರ್ಭದಲ್ಲಿ ಧ್ವನಿವರ್ಧಕ ಬಳಸಿ ಹೆಚ್ಚಿನ ಶಬ್ದ ಮಾಡಲಾಗುತ್ತಿದೆ ಎಂದು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಮಲ್ಲೇಶ್ವರಂ ಠಾಣಾ ಪೊಲೀಸರು ನೋಟಿಸ್ ಜಾರಿಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಲ್ಲೇಶ್ವರಂ 11ನೆ ಕ್ರಾಸ್‍ನ ವೇಣುಗೋಪಾಲ್ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಪೂಜಾ ಸಮಯದಲ್ಲಿ ಧ್ವನಿವರ್ಧಕ ಮೂಲಕ ಜೋರಾಗಿ ಶಬ್ದವಾಗುವುದರಿಂದ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ.

ಮೌಖಿಕ ದೂರಿನ ಆಧಾರದ ಮೇಲೆ ಪೊಲೀಸರು ದೇವಸ್ಥಾನಕ್ಕೆ ಎ.9ರಂದು ನೋಟಿಸ್ ನೀಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಶಬ್ದ ಮಾಲಿನ್ಯದ ನಿಯಮ ಪಾಲನೆ ಮಾಡುವಂತೆ ದೇವಸ್ಥಾನಕ್ಕೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ನೀಡಿದ್ದು, ಮಾಲಿನ್ಯ 2000 ನಿಯಮದ ಶೆಡ್ಯೂಲ್ ರೂಲ್ 3(1) ಮತ್ತು 4 (1) ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೂ 55 ಡೆಸಿಬಲ್ ಮತ್ತು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ 45 ಡೆಸಿಬಲ್ ಶಬ್ದ ಮೀರದಂತೆ ಪೂಜಾ ಸಮಯದಲ್ಲಿ ಶಬ್ದವಾಹಕ ಬಳಸಬೇಕು. ಒಂದು ವೇಳೆ ಸರಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸುವುದಾಗಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News