ವ್ಯಭಿಚಾರ ಮುಚ್ಚಿಕೊಳ್ಳಲು ತಡೆಯಾಜ್ಞೆ ತಂದಿರುವ ಸಚಿವರಿರುವ ಸರಕಾರಕ್ಕೆ ನೈತಿಕತೆ ಇದೆಯಾ?: ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಎ.21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ಬಹುತೇಕ ಮಂತ್ರಿಗಳು ತಮ್ಮ ವ್ಯಭಿಚಾರ ಮುಚ್ಚಿಕೊಳ್ಳಲು ಮುಂದಾಗಿರುವ ಸಂದರ್ಭದಲ್ಲಿ ಸರಕಾರ ನಡೆಸಬೇಕೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ ಮಾಡಿದರು.
ಗುರುವಾರ ನಗರದ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂಪುಟದ 17 ಸಚಿವರು ತಮ್ಮ ವ್ಯಭಿಚಾರ ಮುಚ್ಚಿಕೊಳ್ಳಲು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸರಕಾರ ನಡೆಸಲು ನೈತಿಕತೆ ಉಂಟಾ ಎಂದು ಪ್ರಶ್ನೆ ಮಾಡಿದರು.
ರೈತರ ಭಾವನೆಗಳಿಗೆ ರಾಜಕೀಯವಾಗಿ ಶಕ್ತಿ ಸಿಗಬೇಕಾದರೆ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದೆವು. ಕರ್ನಾಟಕವನ್ನು ಆಳಿದ ಮೂರೂ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಎಂಬುದು ಸಾಬೀತಾಗಿದೆ. ಈಗ ನಾಡಿನ ರೈತರಿಗೆ ಭರವಸೆಯ ಬೆಳಕಾಗಿ ಅರವಿಂದ್ ಕೇಜ್ರಿವಾಲ್ ಎಂಬ ನಾಯಕ ಹಾಗೂ ಆಪ್ ಪಕ್ಷ ಸಿಕ್ಕಿದೆ ಎಂದರು.
ಕೃಷಿ ಭೂಮಿಯು ಉದ್ಯಮಿಗಳ ಪಾಲಾಗುವಂತೆ ಮಾಡಿ, ರೈತರು ಹಾಗೂ ಕೃಷಿ ಕಾರ್ಮಿಕರ ಉದ್ಯೋಗ ಕಿತ್ತುಕೊಳ್ಳಲು ಸರಕಾರವು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಎಪಿಎಂಸಿ, ಜಾನುವಾರು ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಕೂಡ ರೈತರೇ ತೊಂದರೆ ಅನುಭವಿಸಲಿದ್ದಾರೆ ಎಂದ ಅವರು, ಸರಕಾರಗಳು ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು ಎಂದು ನಾವು ಹಲವು ತಿಂಗಳಿಂದ ಆಗ್ರಹಿಸುತ್ತಿದ್ದೇವೆ. ಆದರೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಅಧಿವೇಶನದಿಂದ ಅಧಿವೇಶನಕ್ಕೆ ಮುಂದೂಡುತ್ತಲೇ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಎಪಿಗೆ ಬೆಂಬಲ
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ನಡೆದ ರೈತ ಸಮಾವೇಶದಲ್ಲಿ ರಾಜ್ಯ ರೈತ ಸಂಘವು ಆಮ್‍ಆದ್ಮಿ ಪಾರ್ಟಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. ಈ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘವು ಹಿಂದಿನಂತೆಯೇ ಸ್ವತಂತ್ರ ಸಂಘಟನೆಯಾಗಿ ಮುಂದುವರಿಯಲಿದೆ. ಆದರೆ ರಾಜಕೀಯವಾಗಿ ಆಮ್‍ಆದ್ಮಿ ಪಾರ್ಟಿಗೆ ಸಂಪೂರ್ಣ ಬೆಂಬಲ ನೀಡಲಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯನ್ನು ಅಧಿಕಾರಕ್ಕೆ ತರಲು ರೈತ ಸಂಘದ ಕಾರ್ಯಕರ್ತರು ಹಗಲಿರುಳು ಶ್ರಮಿಸಲಿದ್ದಾರೆ ಎಂದು ಹೇಳಿದರು.