ಜಮ್ಮುಕಾಶ್ಮೀರ: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ರಿಂದ ಭ್ರಷ್ಟಾಚಾರದ ಆರೋಪ; ಎರಡು ಪ್ರಕರಣ ದಾಖಲಿಸಿದ ಸಿಬಿಐ

Update: 2022-04-21 17:51 GMT

ಜಮ್ಮುಕಾಶ್ಮೀರ, ಎ. 21: ಜಮ್ಮು ಹಾಗೂ ಕಾಶ್ಮೀರದಲ್ಲಿ ಸರಕಾರಿ ಉದ್ಯೋಗಿಗಳ ಆರೋಗ್ಯ ವಿಮಾ ಯೋಜನೆ ಹಾಗೂ ಜಲವಿದ್ಯುಚ್ಛಕ್ತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸಿಬಿಐ ಎರಡು ಪ್ರಕರಣಗಳನ್ನು ದಾಖಲಿಸಿದೆ. 

ಎರಡು ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ಅಕ್ಟೋಬರ್ ನಲ್ಲಿ ಆರೋಪಿಸಿದ್ದರು. ಅಂಬಾನಿ ಹಾಗೂ ಆರ್ಎಸ್ಎಸ್ ಪದಾಧಿಕಾರಿಗೆ ಸೇರಿದ ಎರಡು ಕಡತಗಳಿಗೆ ಅನುಮೋದನೆಗೆ ನೀಡಿದರೆ 300 ಕೋಟಿ ರೂಪಾಯಿ ಲಂಚ ನೀಡಲಾಗುವುದು ಎಂದು ತನಗೆ ಆಮಿಷ ಒಡ್ಡಲಾಗಿತ್ತು ಎಂದು ಮಲಿಕ್ ಪ್ರತಿಪಾದಿಸಿದ್ದರು.

ಸಿಬಿಐ ದಾಖಲಿಸಿದ ಪ್ರಕರಣಗಳಲ್ಲಿ ಒಂದು ಜಮ್ಮು ಹಾಗೂ ಕಾಶ್ಮೀರ ಉದ್ಯೋಗಿಗಳ ಆರೋಗ್ಯ ವಿಮಾ ಯೋಜನೆಯ ಗುತ್ತಿಗೆಯನ್ನು ಖಾಸಗಿ ಸಂಸ್ಥೆ ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಗೆ ನೀಡಿರುವುದಕ್ಕೆ ಸಂಬಂಧಿಸಿದ್ದು. ಈ ಯೋಜನೆಯನ್ನು 2018 ಅಕ್ಟೋಬರ್ ಲೋಕಾರ್ಪಣೆಗೊಳಿಸಲಾಗಿತ್ತು. ಆದರೆ, ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಒಂದು ತಿಂಗಳ ನಂತರ ರದ್ದುಗೊಳಿಸಲಾಗಿತ್ತು. ಇನ್ನೊಂದು ಪ್ರಕರಣ 2,200 ಕೋಟಿ ರೂಪಾಯಿಯ ‘ಕಿರು’ ಜಲ ವಿದ್ಯುಚ್ಛಕ್ತಿ ಯೋಜನೆಯ ನಿರ್ಮಾಣದ ಗುತ್ತಿಗೆ ನೀಡುವುದರಲ್ಲಿ ನಡೆದ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ್ದು. ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್ ಹೆಸರಿನ ಕಂಪೆನಿಗೆ ಯೋಜನೆಯ ಗುತ್ತಿಗೆ ನೀಡುವ ಸಂದರ್ಭ ಆನ್ಲೈನ್ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಸಿಬಿಐ ಆರೋಪಿಸಿದೆ.

ಜಂಟಿ ಉದ್ಯಮ ಕಂಪೆನಿ ಚೇನಬ್ ವ್ಯಾಲಿ ಪವರ್ ಪ್ರೊಜೆಕ್ಟ್ ಪ್ರೈವೇಟ್ ಲಿಮಿಟೆಡ್ ಅಥವಾ ಸಿವಿವಿಪಿಪಿಎಲ್ ಎಲ್ಲ ಪ್ರಮುಖ ಯೋಜನೆಗಳನ್ನು ಇ-ಟೆಂಡರ್ ಪ್ರಕ್ರಿಯೆ ಮೂಲಕ ಟೆಂಡರ್ ನೀಡಲು 2019 ಜೂನ್ ನಲ್ಲಿ ನಿರ್ಧರಿಸಿತ್ತು. ಆದರೆ, ಅನಂತರ 2019 ಆಗಸ್ಟಲ್ಲಿ ಈ ನಿರ್ಧಾರವನ್ನು ಬದಲಾಯಿಸಿತ್ತು ಎಂದು ಸಿಬಿಐ ಹೇಳಿದೆ. ನಿರ್ಧಾರವನ್ನು ಹಿಂಪಡೆದ ಬಳಿಕ ಈ ಯೋಜನೆಯ ಗುತ್ತಿಗೆಯನ್ನು ಪಟೇಲ್ ಎಂಜಿನಿಯರಿಂಗ್ಗೆ ನೀಡಲಾಗಿತ್ತು ಎಂದು ಸಿಬಿಐ ಎಫ್ಐಆರ್ ನಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News