ಅಪರಾಧ ಪ್ರಕ್ರಿಯಾ(ಗುರುತಿಸುವಿಕೆ) ಕಾಯ್ದೆಯನ್ನೇಕೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ?: ವಿವರಣೆ ಇಲ್ಲಿದೆ

Update: 2022-04-22 14:06 GMT
Photo: PTI/TheDigitalArtist

ಹೊಸದಿಲ್ಲಿ,ಎ.22: ಹೊಸ ಅಪರಾಧ ಪ್ರಕ್ರಿಯಾ (ಗುರುತಿಸುವಿಕೆ) ಕಾಯ್ದೆ, 2022 ಅನ್ನು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ವಿಷಯವನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೇಳಿರುವ ಪ್ರಭಾರ ಮುಖ್ಯ ನ್ಯಾಯಾಧೀಶ ವಿಪಿನ್ ಸಾಂಘಿ ನೇತೃತ್ವದ ಪೀಠವು ಈ ಬಗ್ಗೆ ಗುರುವಾರ ನೋಟಿಸನ್ನು ಹೊರಡಿಸಿದ್ದು, 2022,ನ.15ರಂದು ವಿಚಾರಣೆ ನಡೆಯಲಿದೆ.

ಕಾಯ್ದೆಯ 2(1)(ಎ)( iii),2(1)(ಬಿ),3.4,5,6 ಮತ್ತು 8ನೇ ಕಲಮ್ಗಳ ನ್ಯಾಯಾಂಗ ಪರಾಮರ್ಶೆಯನ್ನು ಕೋರಿ ವಕೀಲರಾದ ಹರ್ಷಿತ ಮಿಶ್ರಾ,ಯಶವಂತ ಸಿಂಗ್ ಮತ್ತು ಅಮಾನ್ ನಕ್ವಿ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಾಯ್ದೆಯ ಈ ನಿಬಂಧನೆಗಳನ್ನು ಅಸಾಂವಿಧಾನಿಕ ಮತ್ತು ಅನೂರ್ಜಿತ ಎಂದು ಘೋಷಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಮೇಲ್ಕಂಡ ನಿಬಂಧನೆಗಳು ನಿರಂಕುಶ, ಅತಿರೇಕ, ಅಸಮಂಜಸ, ವಿಷಮ ಸ್ವರೂಪದ್ದಾಗಿದ್ದು, ವಸ್ತುನಿಷ್ಠ ಕಾರಣ ಪ್ರಕ್ರಿಯೆಯನ್ನು ಹೊಂದಿಲ್ಲ. ಇವು ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮತ್ತು ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುತ್ತವೆ, ಹೀಗಾಗಿ ಇವುಗಳನ್ನು ನ್ಯಾಯಾಲಯವು ತೊಡೆದುಹಾಕಬೇಕು ಎಂದು ಅರ್ಜಿದಾರರು ತಿಳಿಸಿದ್ದಾರೆ.

ಅಪರಾಧ ಪ್ರಕ್ರಿಯಾ (ಗುರುತಿಸುವಿಕೆ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದ ಸಂದರ್ಭ ಗೃಹಸಚಿವ ಅಮಿತ್ ಶಾ ಅವರು, ಪೊಲೀಸ್ ಮತ್ತು ವಿಧಿವಿಜ್ಞಾನ ತಂಡಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಮಸೂದೆ ಅಂಗೀಕಾರದ ಉದ್ದೇಶವಾಗಿದೆ. ತನಿಖೆಗಳು ಇನ್ನು ಮುಂದೆ ಶಂಕಿತರಿಗೆ ಚಿತ್ರಹಿಂಸೆ ನೀಡುವ ಥರ್ಡ್-ಡಿಗ್ರಿ ಪದ್ಧತಿಯನ್ನು ಅವಲಂಬಿಸುವಂತಿಲ್ಲ.

ಕಾಯ್ದೆಯು ತನಿಖಾ ಸಂಸ್ಥೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಲಾಭಗಳನ್ನು ಲಭ್ಯವಾಗಿಸುತ್ತದೆ ಮತ್ತು ದೋಷನಿರ್ಣಯಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದರು.

ಶಾ ಅವರ ಭರವಸೆಯ ಹೊರತಾಗಿಯೂ ಡಾಟಾ ಗೋಪ್ಯತೆ, ಸಂಭವನೀಯ ದುರುಪಯೋಗ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯ ಕಳವಳಗಳನ್ನು ವ್ಯಕ್ತಪಡಿಸಿ ಪ್ರತಿಪಕ್ಷ ಸದಸ್ಯರು ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದರು.

ಅಷ್ಟಕ್ಕೂ ಈ ಕಾಯ್ದೆಯು ಗೋಪ್ಯತೆ ಮತ್ತು ದುರುಪಯೋಗದ ಬಗ್ಗೆ ಕಳವಳಗಳನ್ನೇಕೆ ಸೃಷ್ಟಿಸಿದೆ?

►ಮೊದಲನೆಯದಾಗಿ ಈ ಕಾಯ್ದೆಯು ‘ಯಾವ ವ್ಯಕ್ತಿಯಿಂದ ಡಾಟಾವನ್ನು ಸಂಗ್ರಹಿಸಬಹುದು’ ಎನ್ನುವುದರ ವ್ಯಾಪ್ತಿಯನ್ನು ಹೆಚ್ಚಿಸಿದೆ. ಈ ಹಿಂದಿನ 1920ರ ಕೈದಿಗಳ ಗುರುತಿಸುವಿಕೆ ಕಾಯ್ದೆಯು ದೋಷನಿರ್ಣಯಗೊಂಡವರ ಅಥವಾ ಬಂಧಿಸಲ್ಪಟ್ಟವರ ಬೆರಳಚ್ಚುಗಳು ಮತ್ತು ಹೆಜ್ಜೆಗುರುತುಗಳಂತಹ ಮಾಹಿತಿಗಳನ್ನು ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳಿಗೆ ಅವಕಾಶವನ್ನು ಕಲ್ಪಿಸಿತ್ತು. ಇದರ ಬದಲಾಗಿ ಈಗ ತರಲಾಗಿರುವ ಹೊಸ ಕಾಯ್ದೆಯು ಬಂಧಿಸಲ್ಪಟ್ಟವರ, ದೋಷನಿರ್ಣಯಗೊಂಡವರ ಮತ್ತು ಮುನ್ನೆಚ್ಚರಿಕೆ ಕಾನೂನುಗಳಡಿ ವಶಕ್ಕೆ ತೆಗೆದುಕೊಳ್ಳಲಾಗಿರುವ ವ್ಯಕ್ತಿಗಳಿಂದ ಡಾಟಾ ಸಂಗ್ರಹಿಸಲು ಇನ್ನೂ ಹೆಚ್ಚಿನ ಅಧಿಕಾರವನ್ನು ನೀಡಿದೆ.

ಸಾಕಷ್ಟು ಕಾರಣಗಳನ್ನು ನೀಡದೆ ‘ಯಾವ ವ್ಯಕ್ತಿಯಿಂದ ಡಾಟಾವನ್ನು ಸಂಗ್ರಹಿಸಬಹುದು’ ಎನ್ನುವುದರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದ್ದರೆ ಇಂತಹ ‘ವ್ಯಾಪ್ತಿ ಹೆಚ್ಚಳ’ದಿಂದ ಪೊಲೀಸರು ಕೈಗೊಳ್ಳಬಹುದಾದ ಹಾನಿಕಾರಕ ಕ್ರಮಗಳ ವಿರುದ್ಧ ಆಂತರಿಕ ಸುರಕ್ಷತೆಯನ್ನು ಸೃಷ್ಟಿಸಲು ಯಾವುದೇ ಪ್ರಯತ್ನವನ್ನು ಮಾಡಲಾಗಿಲ್ಲ. ಆರೋಪಿಗಳ ವೈಯಕ್ತಿಕ ಡಾಟಾ ಸ್ಯಾಂಪಲ್ ಳನ್ನು ಸಂಗ್ರಹಿಸುವ ಮುನ್ನ ನ್ಯಾಯಾಲಯ ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳುವಂತೆ ಕಾಯ್ದೆಯು ಪೊಲೀಸರಿಗೆ ನಿರ್ದೇಶಿಸಿದ್ದರೆ ಅದು ಹೆಚ್ಚು ಉಪಯೋಗಿಯಾಗಬಹುದಿತ್ತು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಎಲ್ಲ ಪ್ರಕರಣಗಳಲ್ಲಿಯೂ ವೈಯಕ್ತಿಕ ಡಾಟಾ ಸಂಗ್ರಹಣೆ ಅಗತ್ಯವಾಗುವುದಿಲ್ಲ ಮತ್ತು ಪೊಲೀಸರು ಯಾವ ಪ್ರಕರಣಗಳಲ್ಲಿ ಆರೋಪಿಗಳಿಂದ ಡಾಟಾವನ್ನು ಸಂಗ್ರಹಿಸಬಹುದು ಎನ್ನುವುದನ್ನು ನಿರ್ದಿಷ್ಟಪಡಿಸಲು ಕಾಯ್ದೆಯು ವಿಫಲವಾಗಿದೆ. ಡಾಟಾ ಸಂಗ್ರಹಿಸುವಾಗ ಕ್ಷುಲ್ಲಕ ಅಪರಾಧಕ್ಕಾಗಿ ಬಂಧಿತ ವ್ಯಕ್ತಿ ಮತ್ತು ಭಯೋತ್ಪಾದನೆಗಾಗಿ ಬಂಧಿತ ವ್ಯಕ್ತಿ ಈ ಇಬ್ಬರನ್ನೂ ಏಕೆ ಸಮಾನವಾಗಿ ಪರಿಗಣಿಸಬೇಕು ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕಾಯ್ದೆಯು ನೀಡಿಲ್ಲ.

►ಎರಡನೆಯದಾಗಿ ಹೊಸ ಕಾಯ್ದೆಯಡಿ ಡಾಟಾ ಸಂಗ್ರಹಣೆ ಬೆರಳಚ್ಚುಗಳು ಮತ್ತು ಅಂಗೈ ಅಚ್ಚುಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಣ್ಣಿನ ಪಾಪೆ ಮತ್ತು ಅಕ್ಷಿಪಟಲದ ಸ್ಕಾನ್ಗಳು, ಚಿತ್ರಗಳು, ಬೆರಳಚ್ಚುಗಳು, ಅಂಗೈ ಮುದ್ರೆ, ಹೆಜ್ಜೆಗುರುತುಗಳು, ದೈಹಿಕ ಮತ್ತು ಜೈವಿಕ ಸ್ಯಾಂಪಲ್ಗಳು, ಸಹಿ, ಕೈಬರಹ ಮತ್ತು ಇತರ ಯಾವುದೇ ಪರೀಕ್ಷೆ ಸೇರಿದಂತೆ ನಡವಳಿಕೆಯ ಗುಣಲಕ್ಷಣಗಳನ್ನು ಸಂಗ್ರಹಿಸಲು ಅದು ಅವಕಾಶವನ್ನು ನೀಡುತ್ತದೆ. ಪ್ರತಿ ವ್ಯಕ್ತಿಗೂ ಈ ಡಾಟಾ ಅತ್ಯಂತ ಖಾಸಗಿಯಾಗಿವೆ ಮತ್ತು ಇವುಗಳ ಸಂಗ್ರಹಣೆಯು ಸಂವಿಧಾನದ 21ನೇ ವಿಧಿಯಡಿ ರಕ್ಷಣೆಯನ್ನು ಹೊಂದಿರುವ ಗೋಪ್ಯತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಆರೋಪಿಗಳ ವಿರುದ್ಧ ಸಾಕ್ಷವಾಗಿ ಈ ಡಾಟಾ ಸಂಗ್ರಹಕ್ಕೂ ಕಾಯ್ದೆಯ ಉದ್ದೇಶಿತ ಗುರಿ (ದಂಡನೆಗಳ ಪ್ರಮಾಣ ಹೆಚ್ಚಿಸುವುದು)ಗೂ ಯಾವುದೇ ಸಂಬಂಧವಿದ್ದಂತೆ ಕಾಣುವುದಿಲ್ಲ.

►ಮೂರನೆಯದಾಗಿ ಹೊಸ ಕಾಯ್ದೆಯು ಇಂತಹ ವೈಯಕ್ತಿಕ ಡಾಟಾವನ್ನು 75 ವರ್ಷಗಳವರೆಗೆ ಉಳಿಸಿಕೊಳ್ಳಲು ಮತ್ತು ಯಾವುದೇ ಅಪರಾಧದ ತನಿಖೆ ಮತ್ತು ಕಾನೂನು ಕ್ರಮದ ಹಿತಾಸಕ್ತಿಯಲ್ಲಿ ಈ ವೈಯಕ್ತಿಕ ಡಾಟಾವನ್ನು ಯಾವುದೇ ಕಾನೂನು ಜಾರಿ ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ಸಿಆರ್ಬಿ)ಕ್ಕೆ ಅವಕಾಶವನ್ನು ನೀಡುತ್ತದೆ. ಇದು ಉದ್ದೇಶ ಮಿತಿಯ ತತ್ತ್ವಕ್ಕೆ ವಿರುದ್ಧವಾಗಿದೆ. ವ್ಯಕ್ತಿಯ ಡಾಟಾ ಸಂಗ್ರಹಕ್ಕೆ ಅವಕಾಶ ನೀಡಿದ್ದರೂ ಅದನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿದೆಯೋ ಅದಕ್ಕಾಗಿ ಮಾತ್ರ ಬಳಸಬೇಕು ಮತ್ತು ಬೇರೆ ಯಾವುದಕ್ಕೂ ಅಲ್ಲ ಎನ್ನುವುದು ಉದ್ದೇಶ ಮಿತಿ ನೀತಿಯಾಗಿದೆ.

►ನಾಲ್ಕನೆಯದಾಗಿ, ಕಾಯ್ದೆಯಡಿ ಬಳಸಲಾಗಿರುವ ಶಬ್ದಗಳು ಅತ್ಯಂತ ಅಸ್ಪಷ್ಟವಾಗಿವೆ. ಮಾಪನಗಳು, ಜೈವಿಕ ಮಾದರಿಗಳು ಮತ್ತು ನಡವಳಿಕೆ ಗುಣಲಕ್ಷಣಗಳಂತಹ ಶಬ್ದಗಳು ವಿಶಾಲ ವಾಖ್ಯಾನಕ್ಕೆ ಅವಕಾಶವನ್ನು ನೀಡುತ್ತವೆ ಮತ್ತು ಸರಕಾರವು ಅವುಗಳನ್ನು ಯಾವುದೇ ಬಂಧಿತ, ದೋಷನಿರ್ಣಿತ ಅಥವಾ ವಶಕ್ಕೆ ತೆಗೆದುಕೊಳ್ಳಲಾದ ವ್ಯಕ್ತಿಯ ವಿರುದ್ಧ ಸ್ವಯಂ ದೋಷಾರೋಪಣೆಯ ಸಾಕ್ಷಗಳನ್ನು ಅವರ ಒಪ್ಪಿಗೆಯಿಲ್ಲದೆ ಪಡೆದುಕೊಳ್ಳಲು ಬಳಸಬಹುದಾಗಿದೆ. ಇದು ಸಂವಿಧಾನದ 20(3) ವಿಧಿಯಡಿ ಒದಗಿಸಲಾಗಿರುವ ಸ್ವಯಂ ದೋಷಾರೋಪಣೆಯ ವಿರುದ್ಧದ ಹಕ್ಕನ್ನು ಉಲ್ಲಂಘಿಸಲು ಕಾರಣವಾಗುತ್ತದೆ.

►ಅಂತಿಮವಾಗಿ, ಕಾಯ್ದೆಯು ಕಾನೂನುಬದ್ಧ ಉದ್ದೇಶವನ್ನು ಒದಗಿಸದೆ ಆರೋಪಿಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸಲು ಬಯಸುತ್ತದೆ. ಇದು ಕೆ.ಎಸ್.ಪುಟ್ಟಸ್ವಾಮಿ ಮತ್ತು ಇತರರ ವಿರುದ್ಧ ಕೇಂದ್ರ ಸರಕಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ತಿರುಳಾಗಿದೆ. ಖಾಸಗಿತನವು ಸ್ವಾಯತ್ತತೆ,ವೈಯಕ್ತಿಕ ಸಮಗ್ರತೆ ಮತ್ತು ಘನತೆಯನ್ನೂ ರಕ್ಷಿಸುತ್ತದೆ ಹಾಗೂ ಸಮಂಜಸವಾದ ಮತ್ತು ಸರಕಾರದ ಶಾಸನಬದ್ಧ ಗುರಿಯನ್ನು ಪೂರೈಸುವ ಕಾನೂನಿನಿಂದ ಮಾತ್ರ ಅದನ್ನು ನಿರ್ಬಂಧಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News