ಬೌದ್ಧದಮ್ಮ ಆಚರಣೆ-ಅನುಷ್ಠಾನಕ್ಕೆ ಒತ್ತು ನೀಡಬೇಕು: ಯಶ್ವಂತ್ ರಾವ್ ಅಂಬೇಡ್ಕರ್

Update: 2022-04-23 14:46 GMT

ಬೆಂಗಳೂರು, ಎ. 23: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳುವುದು, ಜೈಭೀಮ್ ಘೋಷಣೆ ಕೂಗುವುದಷ್ಟೇ ಅಲ್ಲ. ಅವರು ಪಾಲಿಸಿದ ಬೌದ್ಧದಮ್ಮ ಆಚರಣೆ ಮತ್ತು ಅನುಷ್ಠಾನಕ್ಕೆ ಶೋಷಿತ ಸಮುದಾಯ ಒತ್ತು ನೀಡಬೇಕು' ಎಂದು ಅಂಬೇಡ್ಕರ್ ಅವರ ಮೊಮ್ಮಗ, ಬೌದ್ಧ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಭೀಮರಾವ್ ಯಶ್ವಂತ್‍ರಾವ್ ಅಂಬೇಡ್ಕರ್ ಇಂದಿಲ್ಲಿ ಕರೆ ನೀಡಿದ್ದಾರೆ.

ಶನಿವಾರ ಇಲ್ಲಿನ ಚನ್ನಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಬ್ಬ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ಸ್ವಾಭಿಮಾನದ ಅಂಬೇಡ್ಕರ್ ಹಬ್ಬ' ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ದಲಿತ ಮತ್ತು ಶೋಷಿತ ಸಮುದಾಯಗಳು ಶೋಷಣೆಯಿಂದ ಬಿಡುಗಡೆಯಾಗಬೇಕಿದ್ದರೆ ಬೌದ್ಧದಮ್ಮ ಸ್ವೀಕರಿಸಬೇಕು ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಹೀಗಾಗಿ ದಲಿತ ಸಮುದಾಯ ಬೌದ್ಧದಮ್ಮ ಅನುಷ್ಠಾನಕ್ಕೆ ಆಸ್ಥೆ ವಹಿಸಬೇಕು' ಎಂದು ಹೇಳಿದರು.

‘ದಲಿತರು ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ಸೀಮಿತಗೊಳ್ಳದೆ ಅಂಬೇಡ್ಕರ್ ವಿಚಾರಗಳನ್ನು ಪಾಲಿಸಿ ಅನುಷ್ಠಾನಕ್ಕೆ ಮುಂದಾಗಬೇಕು. ಆಗ ಮಾತ್ರವೇ ಅವರಿಗೆ ನಾವು ನಿಜವಾದ ಗೌರವ ಸಲ್ಲಿಸಿದಂತೆ ಆಗುತ್ತದೆ. ಚನ್ನಪಟ್ಟಣದಂತಹ ತಾಲೂಕು ಕೇಂದ್ರದಲ್ಲಿ ಇಂತಹ ದೊಡ್ಡ ಕಾರ್ಯಕ್ರಮದ ಮೂಲಕ ಅಂಬೇಡ್ಕರ್ ಹಬ್ಬ ಆಚರಣೆಯನ್ನು ನೋಡಿ ನನಗೆ ಅತೀವ ಸಂತೋಷವಾಗಿದೆ' ಎಂದು ಯಶ್ವಂತ್ ರಾವ್ ಅಂಬೇಡ್ಕರ್ ನುಡಿದರು.

ರ್‍ಯಾಲಿ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಸಂತೋಷ್ ಬಾಬು ಹಾಗೂ ಜಿ.ಪಂ.ಸಿಇಓ ಇಕ್ರಂ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಂತೆ ಭೋಧಿದತ್ತ ಥೇರ, ಮುಸ್ಲಿಮ್ ಧರ್ಮಗುರು ಸೈಯದ್ ಅಬ್ದುಲ್ ಐ ಮೌಲಾನಾ, ಕ್ರೈಸ್ತ ಧರ್ಮಗುರು ರೆವರೆಂಟ್ ಪಿವಿಜಿ ಕುಮಾರ್, ಮಲ್ಲಿಕಾರ್ಜುನ ಭಾಲ್ಕಿ, ‘ಮಹಾನಾಯಕ' ಧಾರವಾಹಿ ಬಾಲಕ ಅಂಬೇಡ್ಕರ್ ಪಾತ್ರಧಾರಿ ಆಯುದ್ ಬನ್ಸಾಲಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಮನಕ್ಕಿಳಿಯಲಿ ಅಂಬೇಡ್ಕರ್

‘ಅಂಬೇಡ್ಕರ್ ಅವರನ್ನು ನಾವಿಂದು ಪ್ರತಿಮೆಗಳ ಮೂಲಕ ಬೀದಿಯಲ್ಲಿ ನಿಲ್ಲಿಸಿದ್ದೇವೆ. ಆದರೆ, ಅವರನ್ನು ನಾವು ನಮ್ಮ ಮನೆ-ಮನದೊಳಗೆ ತಂದುಕೊಳ್ಳಬೇಕಾದ ಅಗತ್ಯವಿದೆ. ಅವರು ನಮ್ಮ ಮನದೊಳಗೆ ಬಂದರೆ ಮಾತ್ರವೇ ಬದಲಾವಣೆ ಸಾಧ್ಯ'.

-ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News