ಬೆಂಗಳೂರು | ಕೋರ್ಟ್ ಜಾಮೀನಿಗಾಗಿ ಸರಕಾರಿ ಸೀಲು ನಕಲಿ: 9 ಮಂದಿ ಆರೋಪಿಗಳ ಬಂಧನ

Update: 2022-04-23 15:15 GMT

ಬೆಂಗಳೂರು, ಎ.23: ವಿವಿಧ ಪ್ರಕರಣ ಆರೋಪಿಗಳಿಗೆ ಜಾಮೀನು ಕೊಡಿಸಲು ಸರಕಾರಿ ಕಚೇರಿಯ ಸೀಲುಗಳನ್ನು ನಕಲು ಮಾಡಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದ ಜಾಲವೊಂದನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಮಹಿಳೆ ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.

ಎ.19ರಂದು ರಾತ್ರಿ 10.30ರ ಸುಮಾರಿನಲ್ಲಿ ವಾಹನಗಳ ತಪಾಸಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಬಂದ ಆಟೊರಿಕ್ಷಾವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿದ್ದ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಸರಕಾರಿ ಕಚೇರಿಯ ಸೀಲುಗಳು ಹಾಗೂ ದಾಖಲೆಗಳು ಇರುವುದು ಕಂಡುಬಂದಿದೆ.

ಅವರಿಬ್ಬರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ತಮ್ಮ ಸಂಗಡಿಗರೊಂದಿಗೆ ಸೇರಿ ತಾಲ್ಲೂಕು ಕಚೇರಿ ಹತ್ತಿರ ಹೋಗಿ ಕೆಲವು ರೈತರ ಆರ್‍ಟಿಸಿ ಮತ್ತು ಮ್ಯುಟೇಷನ್‍ಗಳನ್ನು ಪಡೆದು ಅದರಲ್ಲಿ ಹೆಸರಿಗೆ ತಕ್ಕಂತೆ ಕೆಲವು ವ್ಯಕ್ತಿಗಳ ಭಾವಚಿತ್ರಗಳನ್ನು ಬಳಸಿ ನಕಲಿ ಆಧಾರ್ ಕಾರ್ಡ್ ತಯಾರು ಮಾಡಿ ಜೈಲಿನಲ್ಲಿರುವ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಜಾಮೀನಿಗಾಗಿ ಹಾಜರುಪಡಿಸಿ ಸರಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಮೋಸ ಮಾಡುತ್ತಿರುವುದು ಗೊತ್ತಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿ ಈ ಇಬ್ಬರನ್ನು ಬಂಧಿಸಿ ಅವರು ನೀಡಿದ ಮಾಹಿತಿ ಮೇರೆಗೆ ತಲೆಮರೆಸಿಕೊಂಡಿದ್ದ ಉಳಿದ ಏಳು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ನಕಲಿ ಸೀಲ್‍ಗಳು, ನಕಲಿ ಆಧಾರ್ ಕಾರ್ಡ್, ನಕಲಿ ಸಾಲ್ವೆನ್ಸಿ ಪ್ರಮಾಣ ಪತ್ರ ಹಾಗೂ ಒಂದು ಆಟೋರಿಕ್ಷವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News