ಮೌಲ್ಯಯುತ ಸಮಾಜ ನಿರ್ಮಾಣ ಇಂದಿನ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-04-23 16:35 GMT

ಬೆಂಗಳೂರು, ಎ. 23: ‘ಮೌಲ್ಯಯುತ ವ್ಯವಸ್ಥೆ ಹೊಂದಿರುವ ಸಮಾಜವನ್ನು ನಿರ್ಮಿಸುವುದು ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಪುರಸ್ಕರಿಸುವ ಮೂಲಕ ಸೌಹಾರ್ದತೆಯನ್ನು ಕಾಪಾಡಬಹುದಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಏರ್ಪಡಿಸಿದ್ದ 20ನೆ ದ್ವೈವಾರ್ಷಿಕ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಮಾಜದಲ್ಲಿ ಜನರ ಪ್ರಾಮಾಣಿಕತೆ ಹಾಗೂ ಒಳ್ಳೆಯತನವನ್ನು ಗುರುತಿಸಬೇಕು. ಒಬ್ಬರಿಗೆ ಸರಿ ಎಂದು ತೋರಿದ್ದು, ಮತ್ತೊಬ್ಬರಿಗೆ ತಪ್ಪೆಂದು ತೋರಬಹುದು. ಆದ್ದರಿಂದ ಸಮಾಜದಲ್ಲಿ ಉತ್ತಮ ಗುಣಗಳ ಮೌಲ್ಯಗಳು ಬೆಳೆಯಲು  ಪ್ರೋತ್ಸಾಹಿಸಬೇಕು ಎಂದರು.

‘ನ್ಯಾಯಾಂಗವು ಸಾಮಾಜಿಕ ನ್ಯಾಯ ಹಾಗೂ ಮೌಲ್ಯವನ್ನು ಪ್ರೋತ್ಸಾಹಿಸಬೇಕಿದೆ. ಕೆಟ್ಟ ಪ್ರವೃತ್ತಿಯನ್ನು ಸಮಾಜ ಗೌರವಿಸಿದರೆ ಆಗ ನ್ಯಾಯಾಂಗ ಕೇವಲ ಶಿಕ್ಷೆಯನ್ನೇ ಪ್ರಧಾನವಾಗಿಸಬೇಕಾಗುತ್ತದೆ. ಪ್ರಜಾಪ್ರಭುತ್ವದ ಕಾಯಾರ್ಂಗ, ನ್ಯಾಯಾಂಗ, ಆಡಳಿತಾಂಗದ ವ್ಯವಸ್ಥೆಗಳು ಸಾಮಾಜಿಕ ನ್ಯಾಯಕ್ಕಾಗಿ ದುಡಿಯಬೇಕಿದೆ. ಯಾವುದೇ ಕಾನೂನು ರೂಪಿಸಿದಾಗ ಅಸ್ಪಷ್ಟತೆ ಇರಬಾರದು. ಆಗ ಮಾತ್ರ ಯಾವುದೇ ಕಾನೂನು ಯಶಸ್ವಿಯಾಗಲು ಸಾಧ್ಯ' ಎಂದು ಅವರು ಹೇಳಿದರು.

ಸಮಾಜದ ನ್ಯಾಯಕ್ಕೆ ಒತ್ತು ನೀಡಬೇಕು: ‘ಆಡಳಿತಗಾರರು ಮತ್ತು ನ್ಯಾಯಾಧೀಶರು ಒಂದೇ ನೆಲಗಟ್ಟಿಗೆ ಸೇರಿದವರಾಗಿದ್ದಾರೆ. ನ್ಯಾಯಾಂಗದ ಮೂಲಕ ಸಮಾಜದಲ್ಲಿ ಮೌಲ್ಯಗಳು, ಶಾಂತಿ ಸುವ್ಯವಸ್ಥೆ, ನ್ಯಾಯ ಉಳಿಸುವಂತಹ ದೊಡ್ಡ ಬಳಗ ನಮ್ಮಲಿದೆ. ನ್ಯಾಯಮೂರ್ತಿಗಳ ಪ್ರಾಮಾಣಿಕತೆ, ನ್ಯಾಯನಿಷ್ಠುರತೆ ಬಗ್ಗೆ ಗೌರವ ಇದೆ. ನ್ಯಾಯಪರ ಚಿಂತನೆ, ಗುಣಮಟ್ಟದ ತೀರ್ಪುಗಳಿಂದ ಭಾರತೀಯ ನ್ಯಾಯಾಂಗ ತನ್ನ ಘನತೆಯನ್ನು ಕಾಪಾಡಿಕೊಂಡು ಬಂದಿದೆ ಎಂದರು.

‘ಪ್ರಜಾಪ್ರಭುತ್ವದ ಯಶಸ್ಸಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದಾಗಿ ವಿವಿಧ ಸಾಮಾಜಿಕ ವ್ಯವಸ್ಥೆಯ ನಡುವೆಯೂ ದೇಶದ ಭವಿಷ್ಯ ಭದ್ರವಾಗಿರಲು ಸಾಧ್ಯವಾಗಿದೆ. ನ್ಯಾಯಾಂಗದಲ್ಲಿ ಸಮಾಜದ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ನ್ಯಾಯಾಂಗದಲ್ಲಿ ಡಿಜಿಟಲೀಕರಣ: ‘ಆಧುನಿಕ ಯುಗದಲ್ಲಿ ನ್ಯಾಯಾಂಗದಲ್ಲಿ ಡಿಜಿಟಲೀಕರಣದ ಅಗತ್ಯವಿದೆ. ಈಗ ಡಿಜಿಟಲೀಕರಣದಿಂದ ನ್ಯಾಯಾಂಗದಲ್ಲಿ ವೇಗ ಹೆಚ್ಚಿದೆ. ಜಾಗತಿಕರಣ, ಉದಾರಿಕರಣ, ಖಾಸಗಿಕರಣಗಳ ಜೊತೆಗೆ ಅಂತಃಕರಣವನ್ನು ಪಾಲಿಸಬೇಕು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‍ನ ಬಳಕೆ ಮಾಡಿಕೊಳ್ಳಬೇಕು. ನ್ಯಾಯ ಸಮ್ಮತವಾದ ತೀರ್ಪುಗಳನ್ನು ನೀಡುತ್ತಾ ಬಂದಿರುವ ಕೀರ್ತಿ ಭಾರತದ ನ್ಯಾಯಾಂಗಕ್ಕೆ ಸಲ್ಲುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News