ಬೆಂಗಳೂರು: ಯುವಕನ ಹತ್ಯೆ; ಪ್ರಕರಣ ದಾಖಲು

Update: 2022-04-24 12:17 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.24: ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಹಳಿ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆಗೈದಿರುವ ಘಟನೆ ವರದಿಯಾಗಿದೆ.

ಕೆಂಗೇರಿ ಉಪನಗರದ ಎಂಟಿಎಸ್ ಕಾಲೋನಿ ನಿವಾಸಿ ಭರತ್(24) ಕೊಲೆಯಾದ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.

ಶನಿವಾರ ರಾತ್ರಿ ಕೆಂಗೇರಿಯಲ್ಲಿ ಕರಗ ಮಹೋತ್ಸವ ನಡೆಯುತ್ತಿತ್ತು. ಕರಗ ನೋಡಲು ಭರತ ತನ್ನ ಸ್ನೇಹಿತರ ಜೊತೆ ಬಂದಿದ್ದಾನೆ. ಕರಗ ನೋಡಿಕೊಂಡು ಕೆಂಗೇರಿ ಬಳಿ ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ ಬರುತ್ತಿದ್ದ ಬೈಕ್‍ವೊಂದಕ್ಕೆ ಭರತ್‍ನ ಕೈ ತಾಗಿದೆ.ಆ ಸಂದರ್ಭದಲ್ಲಿ ಭರತ್, ನೋಡಿಕೊಂಡು ಗಾಡಿ ಓಡಿಸಿ ಎಂದು ಸವಾರನಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಸವಾರ ಭರತನ ಜೊತೆ ಜಗಳವಾಡಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿದ್ದಾನೆ ಎನ್ನಲಾಗಿದೆ.

ಕೆಲ ನಿಮಿಷದ ಬಳಿಕ 10ರಿಂದ 15 ಮಂದಿಯ ಗುಂಪು ಕರೆದುಕೊಂಡು ಬಂದ ಆರೋಪಿ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಭರತನ ಜೊತೆ ಜಗಳವಾಡಿದ್ದಾನೆ.ನಂತರ ದುಷ್ಕರ್ಮಿಗಳು ರೈಲ್ವೆ ಹಳಿ ಬಳಿ ಕರೆದೊಯ್ದು ಚಾಕುವಿನಿಂದ ದೇಹದ 15 ಕಡೆ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಂತರ ಶವವನ್ನು ರೈಲ್ವೆ ಹಳಿ ಬಳಿ ಎಳೆದುಕೊಂಡು ಹೋಗುತ್ತಿದ್ದಾಗ ಅದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಅವರ ಸಮೀಪ ಹೋಗುತ್ತಿದ್ದಂತೆ ಶವವನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಟಿ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News