ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆಯೇ ಹೆಚ್ಚುತ್ತಿರುವ ದ್ವೇಷ ಮತ್ತು ಹಿಂಸೆ

Update: 2022-04-25 05:18 GMT

ಸರಕಾರದ ಹೇಳಿಕೆಯಂತೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಉಂಟಾಗಿದ್ದ ವಿನಾಶದ ಬಳಿಕ ಭಾರತದ ಆರ್ಥಿಕತೆ ಪುಟಿದೇಳುತ್ತಿದೆ. ಆದರೆ ವಾಸ್ತವದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರಕಾರದ ಅಸಾಮರ್ಥ್ಯ,  ಉದ್ಯೋಗ ಸೃಷ್ಟಿಯತ್ತ ಸಂಪೂರ್ಣ ನಿರ್ಲಕ್ಷ ಮತ್ತು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗದ ಕಡಿಮೆ ಆದಾಯಗಳು; ಇವುಗಳಿಂದಾಗಿ ಅಸಮಾಧಾನ ನಿರಂತರವಾಗಿ ಹೆಚ್ಚುತ್ತಲೇ ಇದೆ. ಈ ಅಸಮಾಧಾನವು ಬೆಲೆಏರಿಕೆ ಮತ್ತು ನಿರುದ್ಯೋಗ ಮತದಾರರ ಪ್ರಮುಖ ಕಳವಳಗಳಾಗಿದ್ದ ಇತ್ತೀಚಿನ ಚುನಾವಣೆಗಳಲ್ಲಿ ಮಾತ್ರವಲ್ಲ, ಕಾವು ಪಡೆದುಕೊಳ್ಳುತ್ತಿರುವ ಅನಿವಾರ್ಯ ಪ್ರತಿಭಟನೆಗಳಲ್ಲಿಯೂ ಗೋಚರಿಸುತ್ತಿದೆ.

 ರೈತರ ಪ್ರತಿಭಟನೆಗೆ ಹೆದರಿದ ಸರಕಾರ ಕಳೆದ ನವಂಬರ್ ನಲ್ಲಿ ಮೂರು ಕುಖ್ಯಾತ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡ ಬಳಿಕ ಒಂದು ವರ್ಷದ ಹೋರಾಟ ಅಂತ್ಯಗೊಂಡಿತ್ತು. ಆದರೆ ಸರಕಾರದ ಇತರ ನೀತಿಗಳ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ. ಕಾರ್ಮಿಕ ಒಕ್ಕೂಟಗಳ ಜಂಟಿ ವೇದಿಕೆಯು ಕರೆ ನೀಡಿದ್ದ ಮಾ.28-29ರ ಸಾರ್ವತ್ರಿಕ ಮುಷ್ಕರವು ತೀರ ಇತ್ತೀಚಿನ ಮತ್ತು ಬೃಹತ್ ಪ್ರತಿಭಟನೆಗಳಲ್ಲೊಂದಾಗಿದೆ. ರೈತರ ಸಂಘಟನೆಗಳು ಮತ್ತು ಹಲವಾರು ಜನಪರ ಸಂಘಟನೆಗಳು ಬೆಂಬಲಿಸಿದ್ದ ಮುಷ್ಕರದಲ್ಲಿ ಅಂದಾಜು 25 ಕೋಟಿ ಜನರು ಭಾಗವಹಿಸಿದ್ದರು.
 
ಇದರ ಬೆನ್ನಲ್ಲೇ ಒಂಭತ್ತು ರಾಜ್ಯಗಳಲ್ಲಿ ಕೋಮು ಹಿಂಸಾಚಾರದ ಸಂಘಟಿತ ಘಟನೆಗಳು ಭುಗಿಲೆದ್ದಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಎ.2ರ  ಯುಗಾದಿ, ಎ.10 ರ ರಾಮನವಮಿ ಮತ್ತು ಎ.16 ಹನುಮ ಜಯಂತಿ; ಈ ಮೂರು ಧಾರ್ಮಿಕ ಸಂದರ್ಭಗಳನ್ನು ಪ್ರಚೋದನಾತ್ಮಕ ಮೆರವಣಿಗೆಗಳನ್ನು ನಡೆಸಲು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಂದಿಗೆ ಘರ್ಷಣೆಗಳಿಗೆ ಬಳಸಿಕೊಳ್ಳಲಾಗಿತ್ತು. ಕೆಲವು ಪ್ರಕರಣಗಳಲ್ಲಿ ಪ್ರಚೋದಿತ ಗುಂಪುಗಳು ಮಸೀದಿಗಳಿಗೆ ನುಗ್ಗಿ ಕೇಸರಿ ಧ್ವಜವನ್ನು ಹಾರಿಸಲು ಪ್ರಯತ್ನಿಸಿದ್ದವು. 

ಹೆಚ್ಚಿನ ಪ್ರಕರಣಗಳಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳು (ಅಥವಾ ದಿಲ್ಲಿಯಲ್ಲಿ ಮಹಾನಗರ ಪಾಲಿಕೆ) ಘರ್ಷಣೆಗಳು ನಡೆದಿದ್ದ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಸ್ಥಳಗಳಲ್ಲಿ ಮನೆಗಳನ್ನು ನೆಲಸಮಗೊಳಿಸಿವೆ. ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಅಮಾಯಕರ ಮನೆಗಳು ಮತ್ತು ಅಂಗಡಿಗಳೂ ಧ್ವಂಸಗೊಂಡಿವೆ. ಇಂತಹ ರಾಜಾರೋಷ ಪ್ರಚೋದನೆ ಮತ್ತು ಸುಳ್ಳು ಪ್ರಚಾರಗಳು ದ್ವೇಷದ ದಳ್ಳುರಿಯನ್ನು ಹಬ್ಬಿಸುವುದು ಮತ್ತು ಧಾರ್ಮಿಕ ಸಮುದಾಯಗಳ ನಡುವಿನ ಸೌಹಾರ್ದ ಸಂಬಂಧಗಳನ್ನು ಹಾಳು ಮಾಡುವುದು ಸಹಜವೇ ಆಗಿದೆ.

ಇದು ವ್ಯಾಪಕ ಆರ್ಥಿಕ ಸಂಕಷ್ಟಕ್ಕೆ ಮತ್ತು ಜನರ ಸ್ಥಿತಿ ಇನ್ನಷ್ಟು ಶೋಚನೀಯಗೊಳ್ಳಲು ಕಾರಣವಾಗಿರುವ ತನ್ನ ನೀತಿಗಳನ್ನು ಬದಲಿಸುವಂತೆ ಮೋದಿ ಸರಕಾರದ ಮೇಲಿನ ಒತ್ತಡದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಉದ್ದೇಶವನ್ನೂ ಪೂರೈಸಿದೆ. ಗಗನಚುಂಬಿ ಬೆಲೆಗಳು ಮತ್ತು ನಿರುದ್ಯೋಗದಿಂದಾಗಿ ತೀವ್ರ ಬಾಧಿತರಾಗಿರುವ ಬಡವರೇ ಕೋಮು ಹಿಂಸಾಚಾರ ಅಥವಾ ನಂತರದ ಆಡಳಿತದ ದಬ್ಬಾಳಿಕೆಯಲ್ಲಿ ತಮ್ಮ ಜೀವಗಳನ್ನು ಮತ್ತು ಅಲ್ಪಸ್ವಲ್ಪ ಆಸ್ತಿಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ನಡುವೆ ಕೋಟ್ಯಂತರ ಸಂಖ್ಯೆಯಲ್ಲಿರುವ ದೇಶದ ಬಡವರು ಮತ್ತು ವಂಚಿತರು ಹಿಂದೆಂದೂ ದೇಶವು ಕಂಡಿರದಿದ್ದ ಆರ್ಥಿಕ ಆಕ್ರಮಣದ ಪ್ರಹಾರಗಳನ್ನು ಎದುರಿಸುತ್ತಲೇ ಇದ್ದಾರೆ.

ತೀವ್ರ ಹೊರೆಯಾಗುತ್ತಿರುವ ಬೆಲೆಗಳು

ಕಳೆದೊಂದು ವರ್ಷದಿಂದಲೂ ಆಹಾರದಿಂದ ಹಿಡಿದು ಇಂಧನಗಳವರೆಗೆ ಅಗತ್ಯ ವಸ್ತುಗಳ ನಿರಂತರ ಬೆಲೆಗಳು ಕುಟುಂಬಗಳ ಬಜೆಟ್ ಗಳ ಮೇಲೆ ತೀವ್ರ ದುಷ್ಪರಿಣಾಮಗಳನ್ನುಂಟು ಮಾಡಿದ್ದು, ಅವು ತಮ್ಮ ಬಳಕೆಯನ್ನು ತಗ್ಗಿಸಲು ಕಾರಣವಾಗಿವೆ. ಸರಕಾರದ ಅಂಕಿ ಅಂಶಗಳಂತೆ ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರವು ಶೇ.6.95ಕ್ಕೇರಿದೆ. ಆಹಾರ ಸಾಮಗ್ರಿಗಳ ಬೆಲೆಗಳು ಇನ್ನೂ ಹೆಚ್ಚಿನ ದರದಲ್ಲಿ ಏರಿಕೆಯಾಗಿವೆ. ಫೆಬ್ರವರಿಯಲ್ಲಿ ಏರಿಕೆ ಶೇ.5.85ರಷ್ಟಿದ್ದರೆ ಮಾರ್ಚ್ ನಲ್ಲಿ ಅದು ಶೇ.7.68ರಷ್ಟಾಗಿದೆ. ಖಾದ್ಯತೈಲ,  ತರಕಾರಿಗಳು,  ಮೀನು-ಮಾಂಸ, ಧಾನ್ಯಗಳು, ಹಾಲು ಹೀಗೆ ಪ್ರತಿಯೊಂದೂ ದುಬಾರಿಯಾಗುತ್ತಲೇ ಇದೆ. ಹೆಚ್ಚಿನ ಭಾರತೀಯ ಕುಟುಂಬಗಳ ವೆಚ್ಚಗಳಲ್ಲಿ ಆಹಾರ ಸಾಮಗ್ರಿಗಳು ಹೆಚ್ಚಿನ ಪಾಲನ್ನು ಹೊಂದಿವೆ ಮತ್ತು ಹೆಚ್ಚುತ್ತಲೇ ಇರುವ ಬೆಲೆಗಳು ಕುಟುಂಬಗಳ ಜೀವನಮಟ್ಟಗಳನ್ನು ಹಾಳುಗೆಡವುತ್ತಿವೆ. 

ಆದರೆ ಬೆಲೆಗಳ ಕುರಿತ ಕೆಟ್ಟ ಸುದ್ದಿ ಇಲ್ಲಿಗೇ ಮುಗಿಯುವುದಿಲ್ಲ.
 
ಸಗಟು ಬೆಲೆಗಳ ಕುರಿತು ಸರಕಾರವು ಬಿಡುಗಡೆಗೊಳಿಸಿರುವ ದತ್ತಾಂಶಗಳೂ ಆಘಾತಕಾರಿ ಏರಿಕೆಗಳನ್ನು ತೋರಿಸಿವೆ. ಮಾರ್ಚ್ ನಲ್ಲಿ ಸಗಟು ಬೆಲೆಗಳಲ್ಲಿ ಶೇ.14.5ರಷ್ಟು ತೀವ್ರ ಏರಿಕೆಯಾಗಿದೆ. ಕಳೆದೊಂದು ದಶಕದಲ್ಲಿ ಇದು ಎರಡನೇ ಅತ್ಯಂತ ಹೆಚ್ಚಿನ ಏರಿಕೆಯಾಗಿದೆ. 2021 ನವಂಬರ್ ನಲ್ಲಿ ಅತ್ಯಂತ ಹೆಚ್ಚಿನ ಏರಿಕೆ ದಾಖಲಾಗಿತ್ತು. ಭಾರಿ ಅಬಕಾರಿ ಸುಂಕಗಳನ್ನು ಹೇರುವ ಮೂಲಕ ಮೋದಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕೃತಕವಾಗಿ ಹೆಚ್ಚಿನ ಮಟ್ಟದಲ್ಲಿಯೇ ಇರಿಸಿದೆ. ಸಗಟು ಬೆಲೆಗಳಲ್ಲಿನ ಏರಿಕೆ ಕ್ರಮೇಣ ಸಾಮಾನ್ಯ ಬಳಕೆದಾರರಿಗೆ ವರ್ಗಾಯಿಸಲ್ಪಡುತ್ತದೆ. ಅಂದರೆ ಮುಂಬರುವ ತಿಂಗಳುಗಳಲ್ಲಿ ಈ ಅಧಿಕ ಸಗಟು ಬೆಲೆಗಳು ಜನಸಾಮಾನ್ಯರ ಮೇಲೆ ಹೇರಲ್ಪಡುತ್ತವೆ ಮತ್ತು ಈಗಾಗಲೇ ಅಧಿಕವಾಗಿರುವ ಬಳಕೆದಾರ ಬೆಲೆಗಳು ಇನ್ನಷ್ಟು ಹೆಚ್ಚಲಿವೆ.

ಭರವಸೆ ನೀಡಿದ್ದ ಉದ್ಯೋಗಗಳು ಎಲ್ಲಿವೆ?

ಹೆಚ್ಚಿನ ಜನಸಂಖ್ಯೆಯು ಕಡಿಮೆ ಆದಾಯವನ್ನು ಹೊಂದಿರುವುದರಿಂದ ಭಾರತದಲ್ಲಿ ಬೆಲೆಗಳ ಏರಿಕೆಯು ಯಾವಾಗಲೂ ಹಾನಿಯನ್ನುಂಟು ಮಾಡುತ್ತದೆ. ಯಾವುದೇ ಬೆಲೆ ಏರಿಕೆಯು ಈಗಾಗಲೇ ಕುಸಿದಿರುವ ಜೀವನ ಮಟ್ಟಗಳನ್ನು ನೇರವಾಗಿ ಹಾನಿಗೊಳಿಸುತ್ತದೆ. ಆದರೆ ಪ್ರಸ್ತುತ ಈಗಾಗಲೇ ನಿರುದ್ಯೋಗ ಮತ್ತು ಕಡಿಮೆ ಆದಾಯಗಳಿಂದ ನಲುಗಿರುವ ಜನಸಾಮಾನ್ಯರು ಬೆನ್ನೆಲುಬನ್ನೇ ಮುರಿಯುವ ಬೆಲೆಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಂಕ್ರಾಮಿಕವೊಂದೇ ಕಾರಣವಲ್ಲ, ಮೋದಿ ಸರಕಾರದ ವಿವೇಚನಾರಹಿತ ಕ್ರಮಗಳು ಕಳೆದೆರಡು ವರ್ಷಗಳಲ್ಲಿ ಕುಟುಂಬಗಳ ಗಳಿಕೆಗಳಿಗೆ ತೀವ್ರ ಹಾನಿಯನ್ನುಂಟು ಮಾಡಿವೆ. ಸಿಎಂಐಇ ಸಮೀಕ್ಷೆಯಂತೆ ವಾಸ್ತವದಲ್ಲಿ ಆರ್ಥಿಕ ಹಿಂಜರಿತ ಮೊದಲೇ ಆರಂಭಗೊಂಡಿತ್ತು ಮತ್ತು 2018ರ ಉತ್ತರಾರ್ಧದಲ್ಲಿ ನಿರುದ್ಯೋಗ ದರಗಳು ಶೇ.7ರಿಂದ ಶೇ.8ರ ಮಟ್ಟದಲ್ಲಿದ್ದವು.

ಕೇವಲ ನಿರುದ್ಯೋಗ ದರಗಳಿಂದ ಉದ್ಯೋಗ ಬಿಕ್ಕಟ್ಟಿನ ನಿಜವಾದ ಲೆಕ್ಕಾಚಾರ ಲಭಿಸುವುದಿಲ್ಲ. ಬಿಕ್ಕಟ್ಟಿನ ಪ್ರಮಾಣ ಮತ್ತು ತೀವ್ರತೆಯನ್ನು ಅರಿಯಲು ಇದನ್ನು ನೋಡಿ; ಕಳೆದ ಐದು ವರ್ಷಗಳಲ್ಲಿ ದೇಶದ ಜನಸಂಖ್ಯೆಯು 130.5 ಕೋ.ಯಿಂದ 137.4 ಕೋ.ಗೆ ಏರಿಕೆಯಾಗಿದ್ದರೂ ಭಾರತದಲ್ಲಿ ಉದ್ಯೋಗದಲ್ಲಿರುವ ಜನರ ಒಟ್ಟು ಸಂಖ್ಯೆಯು 2017ರಲ್ಲಿ ಇದ್ದ 40.1 ಕೋ.ಯಿಂದ 39.6 ಕೋ.ಗೆ ಕುಸಿದಿದೆ.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕಾಗಿ ಬೇಡಿಕೆಯು ಉದ್ಯೋಗ ಬಿಕ್ಕಟ್ಟನ್ನು ಲೆಕ್ಕ ಹಾಕಲು ಇನ್ನೊಂದು ಕ್ರಮವಾಗಿದೆ. ಯೋಜನೆಯ ಅಧಿಕೃತ ಪೋರ್ಟಲ್ ನಲ್ಲಿಯ ದತ್ತಾಂಶಗಳಂತೆ 2018-19ರಲ್ಲಿ ಯೋಜನೆಯಡಿ 7.77 ಕೋ.ಜನರು ಕೆಲಸ ಮಾಡಿದ್ದರು. 

ಲಾಕ್ಡೌನ್‌ ಗಳಿಂದಾಗಿ 2020-21ರಲ್ಲಿ ಈ ಸಂಖ್ಯೆ ಏರಿಕೆಯಾಗಿದ್ದು, 2021-22ರಲ್ಲಿ 10.63 ಕೋ.ಯ ಅಧಿಕ ಮಟ್ಟದಲ್ಲಿಯೇ ಉಳಿದುಕೊಂಡಿದೆ. ಇದು ಈಗಾಗಲೇ ಹೆಚ್ಚಿನ ಉದ್ಯೋಗಾವಕಾಶಗಳಿಲ್ಲದ ಕೃಷಿ ಕ್ಷೇತ್ರಕ್ಕೆ ಮರಳಲು ಅಥವಾ ಉದ್ಯೋಗ ಖಾತರಿ ಯೋಜನೆಯಡಿ ಚಿಲ್ಲರೆ ಗಳಿಕೆಗಾಗಿ ದುಡಿಯಲು ಜನರನ್ನು ಅನಿವಾರ್ಯವಾಗಿಸಿರುವ ಉದ್ಯೋಗ ಬಿಕ್ಕಟ್ಟಿನ ತೀವ್ರತೆಯನ್ನು ತೋರಿಸುತ್ತಿದೆ. 2021-22ರಲ್ಲಿ ಯೋಜನೆಯಡಿ ವ್ಯಕ್ತಿಗೆ ಕೇವಲ 50 ದಿನಗಳ ಕೆಲಸವನ್ನು ಒದಗಿಸಲಾಗಿತ್ತು ಮತ್ತು ಸರಾಸರಿ 209 ರೂ.ಗಳ ದಿನಗೂಲಿಯನ್ನು ನೀಡಲಾಗಿತ್ತು. ಬದುಕುಳಿಯಲು ಈ ಅತ್ಯಲ್ಪ ಆದಾಯವು ಹತಾಶೆಯು ಜನರನ್ನು ಯೋಜನೆಯಡಿ ದುಡಿಮೆಗೆ ತಳ್ಳುತ್ತಿದೆ ಎನ್ನುವುದನ್ನು ಬೆಟ್ಟು ಮಾಡುತ್ತಿದೆ ಮತ್ತು ಕೂಲಿ ದರವು ಇಂತಹ ದುಡಿಮೆಯಿಂದ ಅವರು ಯಾವ ಬಗೆಯ ಸಮಾಧಾನವನ್ನು ಪಡೆಯುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ.

ನಿರಾಶಾದಾಯಕ ನೈಜ ವೇತನಗಳು

ಗ್ರಾಮೀಣ ಬಳಕೆಯ ಮಟ್ಟಗಳ ಕುರಿತು ಇಕನಾಮಿಕ್ ಟೈಮ್ಸ್ ನಡೆಸಿರುವ ಅಧ್ಯಯನವು 2020-21 ಮತ್ತು 2021-22ನೇ ವಿತ್ತವರ್ಷಗಳಲ್ಲಿ ನಿಜವಾದ ಕೃಷಿ ಕೂಲಿಗಳು ಅನುಕ್ರಮವಾಗಿ ಕೇವಲ ಶೇ.0.3 ಮತ್ತು ಶೇ.1ರಷ್ಟು ಏರಿಕೆಯಾಗಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇತರ ಕೂಲಿಗಳಲ್ಲಿ 2020-21ರಲ್ಲಿ ಶೇ.1ರಷ್ಟು ಏರಿಕೆಯಾಗಿದ್ದರೆ 2021-22ರಲ್ಲಿ ಶೇ.0.2ರಷ್ಟು ಇಳಿಕೆಯಾಗಿತ್ತು.
 
ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗವು ವಾಸವಾಗಿರುವ ಮತ್ತು ದುಡಿಯುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಹೊಂದಾಣಿಕೆಯ ವೇತನಗಳಲ್ಲಿಯ ಈ ಕಳಪೆ ಬದಲಾವಣೆಗಳು ಆರ್ಥಿಕ ಸಂಕಷ್ಟ ಮತ್ತು ಜನರ ಬಡತನ ದೇಶವನ್ನು ತನ್ನದೇ ಆದ ಸಾಂಕ್ರಾಮಿಕ ರೋಗದಂತೆ ಕಾಡುತ್ತಿದೆ ಎನ್ನುವುದನ್ನು ತೋರಿಸುತ್ತವೆ.

ಜನರ ಹೋರಾಟಗಳನ್ನು ದುರ್ಬಲಗೊಳಿಸಿರುವ ಧಾರ್ಮಿಕ ಹಿಂಸಾಚಾರಗಳು

ದೇಶದ ಉನ್ನತ ನಾಯಕತ್ವ, ಸರಕಾರದಲ್ಲಿ ಇರುವವರು ಹಿಂಸಾಚಾರದ ಬಗ್ಗೆ ಮೌನವನ್ನು ವಹಿಸಿದ್ದಾರೆ ಅಥವಾ ಅದನ್ನು ನಿಗ್ರಹಿಸಲು ಪೊಲೀಸ್ ಪಡೆಗಳನ್ನು ಬಳಸುತ್ತಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸುವುದು ಅಗತ್ಯವಾಗಿದೆ. ಬಹುಶಃ ತಾತ್ಕಾಲಿಕವಾಗಿಯಾದರೂ ಆರ್ಥಿಕ ಸಂಕಷ್ಟವನ್ನು ಶಮನಿಸಲು ಒತ್ತಡ ಕಡಿಮೆಯಾಗಿದೆ ಎಂದು ಬಿಜೆಪಿ ನಾಯಕತ್ವವು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದೆ. ಬಹುಶಃ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡ ಹಾಗೂ ಹಿಜಾಬ್ ಧರಿಸುವಿಕೆ, ಲವ್ ಜಿಹಾದ್, ಏಕರೂಪ ನಾಗರಿಕ ಸಂಹಿತೆ ಇತ್ಯಾದಿಗಳನ್ನು ಒಳಗೊಂಡ ಇಂತಹ ಪುನರಾವರ್ತಿತ ಘಟನೆಗಳನ್ನು ಆರೆಸ್ಸೆಸ್ ಮತ್ತು ಸರಕಾರದಲ್ಲಿನ ಅದರ ಪ್ರತಿನಿಧಿಗಳು ಹಿಂದು ರಾಷ್ಟ್ರನಿರ್ಮಾಣದತ್ತ ಹೆಜ್ಜೆಗಳು ಎಂದು ಪರಿಗಣಿಸುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಇವು ಜನರ ಏಕತೆಯನ್ನು ದುರ್ಬಲಗೊಳಿಸುತ್ತವೆ ಮತ್ತು ತನ್ಮೂಲಕ ಬಿಜೆಪಿಯ ವಿಷಕಾರಿ ಆಡಳಿತವು ಶಾಶ್ವತಗೊಳ್ಳುವುದನ್ನು ಖಚಿತಪಡಿಸುತ್ತವೆ.

Writer - ಸುಬೋಧ್ ವರ್ಮಾ (newsclick.in)

contributor

Editor - ಸುಬೋಧ್ ವರ್ಮಾ (newsclick.in)

contributor

Similar News