ತುರ್ತಾಗಿ ರಾಜಕಾರಣಿಗಳಿಗೆ ನೀಡಬೇಕಾಗಿದೆ ನೈತಿಕ ಶಿಕ್ಷಣ

Update: 2022-04-25 04:10 GMT

ಅನೈತಿಕ ವಿಷಯಗಳಿಗಾಗಿಯೇ ಚರ್ಚೆಯಲ್ಲಿರುವ ನಾಯಕರನ್ನಿಟ್ಟುಕೊಂಡ ಸರಕಾರ, ನೈತಿಕ ಶಿಕ್ಷಣದ ಹೆಸರಿನಲ್ಲಿ ಏನನ್ನು ಸಾಧಿಸಲು ಹೊರಟಿದೆ? ಎನ್ನುವ ಪ್ರಶ್ನೆಯನ್ನು ನಾಡಿನ ಜನತೆ ಕೇಳುತ್ತಿದ್ದಾರೆ. ರಾಜ್ಯದ ಬಿಜೆಪಿ ಸರಕಾರಕ್ಕೆ ಒಮ್ಮಿಂದೊಮ್ಮೆಲೇ ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅತ್ಯುತ್ಸಾಹ ಉಕ್ಕೇರತೊಡಗಿದೆ. ವಿಶ್ವ ಮಾನವ ಪ್ರಜ್ಞೆ ಮೂಡಿಸಬೇಕಾದ ಸರಕಾರಿ ಶಾಲೆಗಳಲ್ಲಿ ಒಂದು ಧರ್ಮಕ್ಕೆ ಪ್ರಾಮುಖ್ಯತೆ ನೀಡಿ ಆ ಮೂಲಕ ಧರ್ಮದ ಆಧಾರದಲ್ಲಿ ಮಕ್ಕಳ ನಡುವೆ ಪ್ರತ್ಯೇಕತಾ ಭಾವನೆಯನ್ನು ಬೆಳೆಸಲು ಹೊರಟಂತೆ ಕಾಣುತ್ತದೆ. ಶಾಲೆಗಳಲ್ಲಿ ಇನ್ನು ಮುಂದೆ ಶೇ.90ರಷ್ಟು ವಿದ್ಯಾರ್ಥಿಗಳು ಯಾವ ಧರ್ಮಕ್ಕೆ ಸೇರಿದ್ದಾರೋ ಆ ಧರ್ಮದ ಅಂಶಗಳಿಗೆ ಹೆಚ್ಚು ಒತ್ತು ನೀಡಿ ಹೊಸ ಪಠ್ಯ ಕ್ರಮವನ್ನು ಮುಂದಿನ ವರ್ಷದಿಂದ ಅಳವಡಿಸಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸರಕಾರದ ಈ ನಡೆ ಸಂವಿಧಾನದ ಬಹುತ್ವದ ಸ್ವರೂಪಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಇದು ಕೇವಲ ರಾಜ್ಯ ಸರಕಾರಕ್ಕಷ್ಟೇ ಸೀಮಿತವಾಗಿಲ್ಲ. ಇತ್ತ ಕೇಂದ್ರ ಸರಕಾರವೂ ಹಲವು ಪಠ್ಯಗಳನ್ನು ಕಿತ್ತು ಹಾಕುವುದಕ್ಕೆ ಮುಂದಾಗಿದೆ. ಸಿಬಿಎಸ್‌ಇ ಪಠ್ಯಗಳಲ್ಲಿರುವ ಅಲಿಪ್ತ ನೀತಿ, ಮೊಗಲ್ ಚರಿತ್ರೆ, ಮುಂತಾದವುಗಳನ್ನು ಕೈ ಬಿಡುವುದು ಹತ್ತನೇ ತರಗತಿಯ ಪಠ್ಯದಲ್ಲಿ ಹೆಸರಾಂತ ಕವಿ ಫೈಝ್ ಅಹ್ಮದ್ ಫೈಝ್ ಅವರ ಎರಡು ಪದ್ಯಗಳಿಗೆ ಕತ್ತರಿ ಪ್ರಯೋಗ ಮಾಡಲು ಮುಂದಾಗಿದೆ. ಒಂದೆಡೆ ನೈತಿಕ ಶಿಕ್ಷಣದ ಹೆಸರಿನಲ್ಲಿ ಸೇರ್ಪಡೆಯಾಗುತ್ತಿದ್ದರೆ, ಇನ್ನೊಂದೆಡೆ ಕಾರಣಗಳೇ ಇಲ್ಲದೆ ಪಠ್ಯಗಳನ್ನು ಕಿತ್ತು ಹಾಕಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಎಲ್ಲ ಜನ ಸಮುದಾಯಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಈ ಶಾಲೆಗಳು ಭಾರತದ ಭಾವೈಕ್ಯ, ಸೌಹಾರ್ದ ತಾಣಗಳಾಗಿವೆ. ವಿಭಿನ್ನ ಧರ್ಮಗಳ, ಸಮುದಾಯಗಳ ವಿದ್ಯಾರ್ಥಿಗಳು ಪರಸ್ಪರ ಬೆರೆತು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಈ ಶಾಲೆಗಳು ಅವಕಾಶ ಒದಗಿಸಿವೆ. ಸ್ವಾತಂತ್ರಾ ನಂತರ ಏಳು ದಶಕಗಳ ಕಾಲ ಈ ರೀತಿ ಸೌಹಾರ್ದ ಸಂಗಮವಾಗಿದ್ದ ಸರಕಾರಿ ಶಾಲೆಗಳಲ್ಲಿ ಆಡಳಿತ ಪಕ್ಷ ತನ್ನ ವಿಭಜನಾಕಾರಿ ಕಾರ್ಯಸೂಚಿಯನ್ನು ಹೇರಲು ಹೊರಟಿದೆ. ವಿದ್ಯಾರ್ಥಿಗಳಲ್ಲಿ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಭಜಿಸಿ ಬಹುಸಂಖ್ಯಾತ ವಿದ್ಯಾರ್ಥಿಗಳ ಧರ್ಮದ ತತ್ವಗಳನ್ನು ಪಠ್ಯಕ್ರಮದಲ್ಲಿ ತುರುಕಿ ಬಹುತ್ವದ ನೈಜ ಸ್ವರೂಪಕ್ಕೆ ಪೆಟ್ಟು ಕೊಡಲು ಹೊರಟಿರುವುದು ನ್ಯಾಯ ಸಮ್ಮತವಲ್ಲ. ಇದರಿಂದ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಏನು ಪರಿಣಾಮ ಉಂಟಾಗುತ್ತದೆ ಎಂಬ ಬಗ್ಗೆ ಸರಕಾರ ಯೋಚನೆ ಮಾಡಬೇಕಾಗಿತ್ತು. ವಿದ್ಯಾರ್ಥಿಗಳನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಭಜಿಸಿ ಪಾಠ ಮಾಡುವುದರ ಹಿಂದೆ ಸದುದ್ದೇಶವಿಲ್ಲ ಎಂಬುದು ಚಿಕ್ಕ ಮಕ್ಕಳಿಗೂ ಅರ್ಥವಾಗುತ್ತದೆ.

ಶಾಲೆಗಳಲ್ಲಿ ಯಾವುದೇ ಧರ್ಮದ ಆಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ಹಿಜಾಬ್, ಕೇಸರಿ ಶಾಲು ವಿವಾದದ ಸಂದರ್ಭದಲ್ಲಿ ಹೇಳಿದ್ದ ಸರಕಾರ ಪಠ್ಯಕ್ರಮದಲ್ಲಿ ಧಾರ್ಮಿಕ ಅಂಶಗಳನ್ನು ಬೋಧಿಸುವ ಮೂಲಕ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿದೆ. ಯಾವ ಧರ್ಮದ ವಿದ್ಯಾರ್ಥಿಗಳು ನಮ್ಮ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೋ ಅವರು ಬಯಸುವ ವಿಚಾರಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುತ್ತೇವೆ ಎಂಬ ಶಿಕ್ಷಣ ಸಚಿವರ ಮಾತು ಅವರ ಸ್ಥಾನಮಾನದ ಘನತೆಗೆ ತಕ್ಕುದಲ್ಲ.

ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂಬ ಶಿಕ್ಷಣ ಸಚಿವರ ಮಾತು ಮೇಲ್ನೋಟಕ್ಕೆ ಸರಿಯೆನಿಸಿದರೂ ಅದಕ್ಕಾಗಿ ಸರಕಾರ ಹಿಡಿದ ದಾರಿ ಸಂಶಯಾಸ್ಪದವಾಗಿದೆ. ಧರ್ಮವನ್ನು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ನೈತಿಕ ಪಾಠವನ್ನು ಮಕ್ಕಳಿಗೆ ಭೋಧಿಸಲು ಹೊರಟಿರುವುದರ ಉದ್ದೇಶ ಪ್ರಾಮಾಣಿಕವಾದುದಲ್ಲ. ಸಮಾನ ಶಿಕ್ಷಣಕ್ಕೆ ಅವಕಾಶವಿಲ್ಲದ ಸನ್ನಿವೇಶದಲ್ಲಿ ನೈತಿಕ ಶಿಕ್ಷಣದ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಕೋಮುವಾದೀಕರಣಗೊಳಿಸುವುದು ಅತ್ಯಂತ ಅಪಾಯಕಾರಿ ಕ್ರಮವಾಗಿದೆ.

ನಮ್ಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಅವರವರ ಮನೆಗಳಲ್ಲೇ ಅವರ ತಾಯಿ ತಂದೆ ಕೊಡುತ್ತಾರೆ. ಇದು ಸರಕಾರದ ಕೆಲಸವಲ್ಲ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಮೊದಲು ಕರ್ನಾಟಕದ ಅಧಿಕಾರದಾಹಿ ರಾಜಕಾರಣಿಗಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ. ಸರಕಾರಿ ಕಾಮಗಾರಿಗಳ ಗುತ್ತಿಗೆಯ ಬಿಲ್ ಮಂಜೂರು ಮಾಡಲು ಶೇ.40ರಷ್ಟು ಕಮಿಶನ್ ಕೇಳುತ್ತಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ರಾಜಕಾರಣಿಗಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ. ಮಠ ಪೀಠಗಳಿಗೆ ಘೋಷಿಸಲಾಗಿರುವ ಅನುದಾನವನ್ನು ಪಡೆಯಲು ಶೇ.30ರಷ್ಟು ಕಮಿಶನ್ ನೀಡಬೇಕಾಗಿದೆ ಎಂದು ಮಠಾಧೀಶರೊಬ್ಬರು ಬಹಿರಂಗವಾಗಿ ಆಪಾದಿಸಿದ್ದಾರೆ. ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣಗಳಲ್ಲಿ ಸಂಪುಟದ ಹಿರಿಯ ಮಂತ್ರಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಲೈಂಗಿಕ ಹಗರಣದಲ್ಲಿ ಸಿಲುಕಿದ ಇನ್ನೊಬ್ಬ ಮಂತ್ರಿ ಪದತ್ಯಾಗ ಮಾಡಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಹಗರಣ ನಡೆದ ಸಂಗತಿ ಬಯಲಾಗಿದೆ. ಹೀಗೆ ಸರಕಾರದ ಬಹುತೇಕ ಮಂತ್ರಿಗಳು ಅನೈತಿಕತೆಯ ಕೆಸರನ್ನು ಮೈ ತುಂಬಾ ಮೆತ್ತಿಕೊಂಡಿರುವಾಗ ಅವರಿಗೆ ನೈತಿಕ ಪಾಠ ಕಲಿಸುವುದನ್ನು ಬಿಟ್ಟು ಶಾಲಾ ಮಕ್ಕಳಿಗೆ ನೈತಿಕತೆಯ ಪಾಠ ಕಲಿಸಲು ಹೊರಟಿರುವ ಬಿಜೆಪಿ ಸರಕಾರದ ಕ್ರಮ ಅಪಹಾಸ್ಯಕರವಾಗಿದೆ. ತನ್ನ ಕೋಮುವಾದಿ ರಾಜಕೀಯಕ್ಕೆ ಶಿಕ್ಷಣ ಕ್ಷೇತ್ರವನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿರುವ ಬಿಜೆಪಿ ಸರಕಾರದ ಕ್ರಮ ಖಂಡನೀಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News