ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಯಾಗಲಿ: ಯು.ಟಿ.ಖಾದರ್ ಆಗ್ರಹ

Update: 2022-04-25 06:38 GMT

ಮಂಗಳೂರು, ಎ.25: ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮೊದಲು ತನಿಖೆ ನಡೆಯಲಿ. ಅದರ ಬದಲು ಕಾಂಗ್ರೆಸ್ ಮುಖಂಡರಿಗೆ ತನಿಖೆಗೆ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆ  ಆಗಬೇಕು. ಇಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಪ್ರಶ್ನೆ ಮುಖ್ಯ ಅಲ್ಲ. ಈ ಅಕ್ರಮಕ್ಕೆ ಕಾರಣರಾದವರ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡುವ ಬದಲು ಸಾರ್ವಜನಿಕ ಚರ್ಚೆ ಆಗುತ್ತಿರುವ ವಿಷಯವನ್ನು ಪ್ರಸ್ತಾಪ ಮಾಡಿದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆಯವರಿಗೆ ನೋಟಿಸ್ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು.

ಬಿಜೆಪಿ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಜನಸಾಮಾನ್ಯರ ಬಗ್ಗೆ ಕಾಳಜಿಯಿಂದ ಕಾರ್ಯನಿರ್ವಹಿಸದೆ, ಸಹಾಯ ಮಾಡದೆ  ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವವರು ಅಭಿಯಾನ ನಡೆಸುತ್ತಿದ್ದಾರೆ. ಸರಕಾರದ ಬೆಂಬಲದಿಂದ ಮೈಸೂರಿನಲ್ಲಿ ದೇವಾಲಯ ಕೆಡವಿರುವ ಬಗ್ಗೆ ಬಿಜೆಪಿ ಮೊದಲು ಜನತೆಗೆ ಉತ್ತರ ನೀಡಲಿ ಎಂದು ಸವಾಲೆಸೆದಿದ್ದಾರೆ.  

ರಾಜ್ಯದಲ್ಲಿ ಯಾರೋ ಕೋಮುದ್ವೇಷದ ಹೇಳಿಕೆ ನೀಡುವುದು, ಸಾರ್ವಜನಿಕ ನಿರ್ಬಂಧದ ಹೇಳಿಕೆ ನೀಡುತ್ತಿರುವುದಕ್ಕೆ ಸರಕಾರದ ಮೌನ ಪ್ರಮುಖ ಕಾರಣ. ವಿಶ್ವದ ಯಾವುದೇ ಕಡೆ ಈ ರೀತಿ ವ್ಯಾಪಾರದ ಮೇಲೆ ನಿರ್ಬಂಧ ಹೇರುವ ಕ್ರಮ ಇಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಸುರೇಶ್ ಭಟ್ನಗರ, ಟಿ.ಕೆ.ಸುಧೀರ್, ದೀಪಕ್ ಪಿಲಾರ್, ನಾಗೇಶ್ ಶೆಟ್ಟಿ, ವಿನೋದ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News