ಕಾಬೂಲ್ ದಾಳಿ: ಮಂಗಳೂರು ವಿವಿ ವಿದೇಶಿ ವಿದ್ಯಾರ್ಥಿಗಳಿಂದ ಮೊಂಬತ್ತಿ ಹಚ್ಚಿ ಸಂತಾಪ

Update: 2022-04-25 07:04 GMT

ಮಂಗಳೂರು, ಎ.25: ಇತ್ತೀಚೆಗೆ ಅಫ್ಘಾನಿಸ್ತಾನದ ಪಶ್ಚಿಮ ಕಾಬೂಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಕೊಣಾಜೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದೇಶಿ ವಿದ್ಯಾರ್ಥಿಗಳು ರವಿವಾರ ರಾತ್ರಿ ಮೊಂಬತ್ತಿ ಬೆಳಗಿ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರಿಗೆ ಸಂತಾಪ ಸೂಚಿಸಿದರು.

'ವರ್ಲ್ಡ್ ಯೂತ್ ಆರ್ಗನೈಶೇಸನ್ ಮಂಗಳೂರು' ವತಿಯಿಂದ ನಡೆದ ಸಂತಾಪ ಸಭೆಯಲ್ಲಿ 'ಹಜಾರ ಸಮುದಾಯದ ಮೇಲಿನ ನರಮೇಧವನ್ನು ನಿಲ್ಲಿಸಿ' ಹಾಗೂ 'ಯುದ್ಧ ನಿಲ್ಲಿಸಿ' ಮುಂತಾದ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.

ಈ ಸಂದರ್ಭ ವರ್ಲ್ಡ್ ಯೂತ್ ಆರ್ಗನೈಶೇಸನ್ ಮಂಗಳೂರು ಅಧ್ಯಕ್ಷ ಹಾಗೂ ಅಫ್ಘಾನ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಸ್ಥಾಪಕ  ಸಯ್ಯದ್ ಅನ್ವರ್, ಉಪಾಧ್ಯಕ್ಷ ಅಹ್ಮದ್ ಇಲ್ಯಾಸ್ ದಶ್ತಿ, ಅಫ್ಘಾನ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷೆ ಫರ್ಕುಂದಾ ಅಕ್ಬರಿ, ಉಪಾಧ್ಯಕ್ಷ ಗೌಸುದ್ದೀನ್ ವಕೀಲ್ಝಾದ್ ಹಾಗೂ ಭಾರತ ಸೇರಿದಂತೆ ಬಾಂಗ್ಲಾದೇಶ, ಗಯಾನ, ಇರಾಕ್, ತಾಂಝಾನಿಯಾ, ಇಥಿಯೋಪಿಯಾ, ಮಾರಿಷಸ್ ಮುಂತಾದ ರಾಷ್ಟ್ರಗಳ ಸುಮಾರು 30 ಮಂದಿ ಪಿಎಚ್.ಡಿ. ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News