ಮಂಗಳೂರು: ಮಾಂಗಲ್ಯ ಸರ ಕಸಿದ ಆರೋಪಿಗಳ ಸಹಿತ ಕದ್ದ ಮಾಲು ಖರೀದಿಸಿದ್ದ ಜುವೆಲ್ಲರಿ ಮಾಲಕರ ಬಂಧನ

Update: 2022-04-25 13:59 GMT
ಮುಹಮ್ಮದ್ ಹನೀಫ್  / ಆರೀಫ್ /  ಮುಹಮ್ಮದ್ ರಿಯಾಝ್  / ಅಬ್ದುಲ್ ಸಮದ್

ಮಂಗಳೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಮತ್ತು ಆ ಸರವನ್ನು ಖರೀದಿಸಿದ್ದ ಜುವೆಲ್ಲರಿಯ ಇಬ್ಬರು ಮಾಲಕರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವಾಮಂಜೂರಿನ ಆರೀಫ್ (26) ಮತ್ತು ಕಾವೂರಿನ ಮುಹಮ್ಮದ್ ಹನೀಫ್ (36) ಎಂದು ಗುರುತಿಸಲಾಗಿದೆ. ಇವರ ಬಳಿಯಿಂದ ಚಿನ್ನಾಭರಣವನ್ನು ಖರೀದಿಸಿದ್ದ ಅಬ್ದುಲ್ ಸಮದ್ ಪಿಪಿ ಮತ್ತು ಮುಹಮ್ಮದ್ ರಿಯಾಝ್ ಎಂಬಿಬ್ಬರು ಜುವೆಲ್ಲರಿ ಅಂಗಡಿಯ ಮಾಲಕರನ್ನೂ ಬಂಧಿಸಲಾಗಿದೆ.

ಎ.12ರಂದು ಸಂಜೆ 5:40ಕ್ಕೆ ನೀರುಮಾರ್ಗದ ಪಾಲ್ದನೆ ಎಂಬಲ್ಲಿ ಮಮತಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೀಫ್ ಮತ್ತು ಹನೀಫ್ ದಾರಿ ಕೇಳುವ ನೆಪದಲ್ಲಿ ಮಮತಾರ ಕುತ್ತಿಗೆಯಲ್ಲಿದ್ದ 8 ಗ್ರಾಂ ಮಾಂಗಲ್ಯದ ಸರವನ್ನು ಕಸಿದಿದ್ದರು. ಅದಕ್ಕೂ ಮೊದಲು ಆರೋಪಿ ಹನೀಫ್ ಕೆಲರಾಯ್ ಬಳಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನು ಕದ್ದಿದ್ದ. ಕದ್ದ ಈ ದ್ವಿಚಕ್ರ ವಾಹನ ಬಳಸಿ ಬೊಲ್ಪುಗುಡ್ಡೆಯ ವತ್ಸಲಾ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ದಾರಿ ಕೇಳುವ ನೆಪದಲ್ಲಿ 10 ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ, ಇವರು ಕಸಿದು ತಂದ ಮಾಂಗಲ್ಯ ಸರವನ್ನು ಕಾವೂರಿನ ನಕ್ಷತ್ರ ಜುವೆಲ್ಲರಿ ಶಾಪ್‌ನ ಮಾಲಕರಾದ ಅಬ್ದುಲ್ ಸಮದ್ ಮತ್ತು ಮುಹಮ್ಮದ್ ರಿಯಾಝ್ ಖರೀದಿಸಿದ್ದರು. ಹಾಗಾಗಿ ಪೊಲೀಸರು ಮಾಂಗಲ್ಯದ ಸರ ಕಸಿದ ಹಾಗೂ ಅದನ್ನು ಖರೀದಿಸಿದವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 80 ಸಾವಿರ ರೂ. ಮೌಲ್ಯದ 18 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು 50 ಸಾವಿರ ರೂ. ಮೌಲ್ಯದ ಎರಡು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News