ಡಿಜೆ ಹಳ್ಳಿ ಗಲಭೆ ಪ್ರಕರಣ: ಎಸ್‍ಡಿಪಿಐ ಮುಖಂಡ ಮೊಹಮ್ಮದ್ ಷರೀಫ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು, ಎ.25: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಡಿಪಿಐ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಷರೀಫ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಷರೀಫ್ ಅರ್ಜಿಯನ್ನು ಈ ಮೊದಲು ಎನ್‍ಐಎ ಪ್ರಕರಣಗಳ ವಿಶೇಷ ಕೋರ್ಟ್ ತಿರಸ್ಕರಿಸಿತ್ತು.
ಎನ್‍ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಷರೀಫ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿದೆ.
25ನೆ ಆರೋಪಿ ಆಗಿರುವ ಮೊಹಮ್ಮದ್ ಷರೀಫ್, 2ನೆ ಆರೋಪಿ ಆಗಿರುವ ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಷಾ ಹಾಗೂ ಇತರ ಎಸ್‍ಡಿಪಿಐ ಮುಖಂಡರೊಂದಿಗೆ ಸೇರಿ ಸಲಭೆಗೆ ಸಮನ್ವಯ ಸಾಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಷರೀಫ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆರೋಪಿ ಷರೀಫ್ ಅವರು 43ಡಿ(5)ರ ದೃಷ್ಟಿಯಿಂದ ಜಾಮೀನಿಗೆ ಅರ್ಹರಾಗಿರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
2020ರ ಆಗಸ್ಟ್ 11ರಂದು ರಾತ್ರಿ ಪೊಲೀಸ್ ಠಾಣೆ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಇತರರ ಮನೆಗಳ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳು, ಬೆಂಕಿ ಹಚ್ಚಿದ್ದರು. ಕಲ್ಲು ತೂರಾಟ ನಡೆಸಿ, ವಾಹನಗಳನ್ನೂ ಸುಟ್ಟು ಹಾಕಿದ್ದರು. ಈ ಗಲಭೆಯಿಂದಾಗಿ ಕೋಟ್ಯಂತರ ರೂಪಾಯಿ ಹಾನಿ ಆಗಿತ್ತು. ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದರು. ಗಲಭೆ ನಿಯಂತ್ರಿಸಲು ಪೊಲೀಸರು ಹಾರಿಸಿದ್ದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು.